ಕಾನೂನಿನ ಪ್ರಕಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣ ಸಾರ್ವಜನಿಕ ಸ್ಥಳವಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಕಲ್ಕತ್ತಾ ಮಹಾನಗರ ಪಾಲಿಕೆ ಮತ್ತಿತರರು ಹಾಗೂ ದಿ ಕ್ರಿಕೆಟ್ ಅಸೋಸಿಯೇಷನ್ ಆಫ್ ವೆಸ್ಟ್ ಬೆಂಗಾಲ್ ಇನ್ನಿತರರ ನಡುವಣ ಪ್ರಕರಣ] .
'ಸಾರ್ವಜನಿಕ ಸ್ಥಳ' ಎಂಬ ಪದವನ್ನು 1980ರ ಕೋಲ್ಕತ್ತಾ ಮಹಾನಗರ ಪಾಲಿಕೆ ಕಾಯಿದೆ ಅಥವಾ 1897ರ ಸಾಮಾನ್ಯ ನಿಬಂಧನೆಗಳ ಕಾಯಿದೆ ವ್ಯಾಖ್ಯಾನಿಸಿಲ್ಲ. ಆದರೆ ಆ ಪದಕ್ಕೆ ತನ್ನದೇ ಆದ ಸ್ವಾಭಾವಿಕ ಅರ್ಥ ನೀಡಿದಾಗಲೂ, ಅದು ಸಾರ್ವಜನಿಕರಿಗೆ ಮುಕ್ತವಾದ ಸ್ಥಳವಾಗಿರಬೇಕು ಎಂಬ ಅರ್ಥ ನೀಡುವಂತಿರಬೇಕು ಎಂದು ನ್ಯಾಯಮೂರ್ತಿಗಳಾದ ಅರಿಜಿತ್ ಬ್ಯಾನರ್ಜಿ ಮತ್ತು ಕೌಶಿಕ್ ಚಂದಾ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.
ಸಾರ್ವಜನಿಕ ಸ್ಥಳ ಎಂದರೆ ಸಾರ್ವಜನಿಕರಿಗೆ ಯಾವುದೇ ನಿರ್ಬಂಧವಿಲ್ಲದೆ ಆ ಸ್ಥಳಕ್ಕೆ ಪ್ರವೇಶವಿರಬೇಕು. ಆ ಸ್ಥಳಕ್ಕೆ ಭೇಟಿ ನೀಡಲು ಯಾರ ಅನುಮತಿಯ ಅಗತ್ಯ ಇರಬಾರದು. ಅಂತಹ ಸ್ಥಳ ಮಾತ್ರ ಸಾರ್ವಜನಿಕ ಸ್ಥಳ ಎನಿಸಿಕೊಳ್ಳುತ್ತದೆ ಎಂದು ನ್ಯಾಯಾಲಯ ಹೇಳಿದೆ. ಸಾರ್ವಜನಿಕರಿಗೆ ಒಂದು ಸ್ಥಳಕ್ಕೆ ಪ್ರವೇಶ ಪಡೆಯಲು ಷರತ್ತು ವಿಧಿಸಿದ ತಕ್ಷಣ, ಆ ಸ್ಥಳ ಸಾರ್ವಜನಿಕ ಸ್ಥಳವಾಗಿ ಉಳಿಯುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಅಂತೆಯೇ ಈಡನ್ ಗಾರ್ಡನ್ಸ್ ಕ್ರೀಡಾಂಗಣವನ್ನು ಸಾರ್ವಜನಿಕ ಸ್ಥಳವೆಂದು ಒಪ್ಪಲಾಗದು. ಪಂದ್ಯ ನಡೆಯುತ್ತಿರುವ ದಿನ ಮತ್ತು ಟಿಕೆಟ್‌ಗೆ ಹಣ ಪಾವತಿಸಿ ಪಂದ್ಯವನ್ನು ನೋಡಲು ಜನ ಸಿದ್ಧವಿರುವ ಸಂದರ್ಭದಲ್ಲಿಯೂ ಕೂಡ ಸಿಎಬಿ ಕ್ರೀಡಾಂಗಣ ಪ್ರವೇಶಿಸದಂತೆ ಅನುಮತಿ ನಿರಾಕರಿಸುವ ಹಕ್ಕು ಹೊಂದಿದೆ. ಹಾಗಾಗಿ, ಸಾರ್ವಜನಿಕರಿಗೆ ಈಡನ್ ಗಾರ್ಡನ್‌ಗೆ ಪ್ರವೇಶಿಸುವ ಸಂಪೂರ್ಣ ಅಥವಾ ಅನಿಯಂತ್ರಿತ ಹಕ್ಕು ಇಲ್ಲ. ಈಡನ್ ಗಾರ್ಡನ್ಸ್ ಕ್ರೀಡಾಂಗಣ ಅಪಾರ ಸಂಖ್ಯೆಯ ಜನರಿಗೆ, ಬಹುಶಃ ಒಂದು ಲಕ್ಷ ಜನರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ ಎಂಬ ಕಾರಣಕ್ಕೆ ಮಾತ್ರವೇ ಅದು ಸಾರ್ವಜನಿಕ ಸ್ಥಳ ಆಗುವುದಿಲ್ಲ ಎಂದು ಅದು ವಿವರಿಸಿತು.
ಒಂದು ಸ್ಥಳದ ಆಯಾಮ ಅಥವಾ ನಿರ್ದಿಷ್ಟ ಸ್ಥಳಕ್ಕೆ ಭೇಟಿ ನೀಡುವ ಜನರ ಸಂಖ್ಯೆ ಆ ಸ್ಥಳದ ಸ್ವರೂಪವನ್ನು ಖಾಸಗಿ ಅಥವಾ ಸಾರ್ವಜನಿಕ ಎಂದು ನಿರ್ಧರಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಕಲ್ಕತ್ತಾ ಮಹಾನಗರ ಪಾಲಿಕೆ 1996ರ ವಿಶ್ವಕಪ್ ಉದ್ಘಾಟನಾ ಸಮಾರಂಭ ಮತ್ತು ಪಂದ್ಯಾವಳಿಯ ಸೆಮಿಫೈನಲ್ ಪಂದ್ಯ ಆಯೋಜಿಸಲು ಸಿಎಬಿ ₹51 ಲಕ್ಷ ಪಾವತಿಸಬೇಕು ಎಂದು ನೀಡಿದ ನೋಟಿಸ್ ಕಾನೂನುಬಾಹಿರ ಎಂಬುದಾಗಿ ಏಕ ಸದಸ್ಯ ಪೀಠ ಏಪ್ರಿಲ್ 24, 2015ರಂದು ನೀಡಿದ್ದ ಆದೇಶವನ್ನು ಆ ಮೂಲಕ ಹೈಕೋರ್ಟ್ ವಿಭಾಗೀಯ ಪೀಠ ಎತ್ತಿಹಿಡಿದಿದೆ.
ತಕರಾರಿನಲ್ಲಿರುವ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣ ದೊರೆಯುತ್ತಿಲ್ಲ ಮೇಲ್ಮನವಿ ಮತ್ತು ಸಂಬಂಧಿತ ಅರ್ಜಿಗಳನ್ನು ವಜಾಗೊಳಿಸಲಾಗಿದ್ದು ದಂಡ ವಿಧಿಸುವ ಆದೇಶ ಹೊರಡಿಸುತ್ತಿಲ್ಲ ಎಂದು ಅದು ಹೇಳಿದೆ.