Delhi High Court, Somnath Bharti 
ಸುದ್ದಿಗಳು

ಬಾನ್ಸುರಿ ವಿರುದ್ಧದ ಸೋಮನಾಥ್‌ ಅರ್ಜಿಯಲ್ಲಿ ವಿಪರೀತ ಮುದ್ರಣ ದೋಷ: ನೋಟಿಸ್‌ ನೀಡಲು ದೆಹಲಿ ಹೈಕೋರ್ಟ್ ನಿರಾಕರಣೆ

Bar & Bench

ನವದೆಹಲಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ನಾಯಕಿ ದಿವಂಗತ ಸುಷ್ಮ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಆಯ್ಕೆ ಪ್ರಶ್ನಿಸಿ ಎಎಪಿ ನಾಯಕ ಸೋಮನಾಥ್ ಭಾರತಿ ಸಲ್ಲಿಸಿದ್ದ ಚುನಾವಣಾ ಅರ್ಜಿ ವಿಪರೀ ಮುದ್ರಣದೋಷಗಳಿಂದ ಕೂಡಿರುವುದನ್ನು ಸೋಮವಾರ ಗಮನಿಸಿದ ದೆಹಲಿ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿತು [ಸೋಮನಾಥ್ ಭಾರ್ತಿ ಮತ್ತು ಬಾನ್ಸುರಿ ಸ್ವರಾಜ್ ಇನ್ನಿತರರ ನಡುವಣ ಪ್ರಕರಣ].

ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರು "ನಿಮ್ಮ ಅರ್ಜಿ ಮುದ್ರಣ ದೋಷಗಳಿಂದ ತುಂಬಿದ್ದು ಏನೂ ಅರ್ಥವಾಗದ ಕಾರಣ ನೋಟಿಸ್ ನೀಡಲು ಸಾಧ್ಯವಿಲ್ಲ" ಎಂದರು.

ಮನವಿ ಹಲವು ತಪ್ಪುಗಳಿಂದ ಕೂಡಿದೆ. ನೀವು ಮೊದಲು ಅರ್ಜಿ ಸರಿಪಡಿಸಬೇಕು. ಅರ್ಥವಾಗದ ಕಾರಣ ನಾನು ನೋಟಿಸ್ ನೀಡಲು ಸಾಧ್ಯವಿಲ್ಲ. ಅರ್ಜಿ ಮುಂದೂಡುತ್ತಿದ್ದು ತಿದ್ದಪಡಿ ಮಾಡಿ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 13 ರಂದು ನಡೆಯಲಿದೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಾನ್ಸುರಿ ಅವರು ಸೋಮನಾಥ್‌ ಭಾರತಿ ಅವರನ್ನು ಮಣಿಸಿದ್ದರು. ರಾಜಧಾನಿಯ ಎಲ್ಲಾ ಏಳು ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು.

ಬಾನ್ಸುರಿ ಅವರ ಅಣತಿಯಂತೆ ಬಿಜೆಪಿ ಕಾರ್ಯಕರ್ತರು ಹಣ, ಸೀರೆ ಮತ್ತಿತರ ಉಡುಪುಗಳನ್ನು ನಿವಾಸಿಗಳಿಗೆ ಹಂಚಿದ್ದಾರೆ. ಇದಕ್ಕೆ ಎಎಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರೂ ಅವರ ಮಾತುಗಳಿಗೆ ಕಿವಿಗೊಡದೆ ಅವುಗಳನ್ನು ಹಂಚಿದ್ದಾರೆ. ಮತದಾನದ ದಿನ ಬಾನ್ಸುರಿ ಅವರ ಏಜೆಂಟ್‌ಗಳು ತಮ್ಮ ಮತಪತ್ರ ಸಂಖ್ಯೆ, ಫೋಟೋ, ಚುನಾವಣಾ ಚಿಹ್ನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಪ್ರದರ್ಶಿಸುವ ಕರಪತ್ರಗಳನ್ನು ಹೊಂದಿದ್ದರು ಎಂದು ದೂರಿ ಸೋಮನಾಥ್ ಅರ್ಜಿ ಸಲ್ಲಿಸಿದ್ದರು.

ಅಲ್ಲದೆ ಬಿಎಸ್‌ಪಿ ಅಭ್ಯರ್ಥಿ ರಾಜ್ ಕುಮಾರ್ ಆನಂದ್ ಅವರು ಈ ಹಿಂದೆ ದೆಹಲಿಯ ಎಎಪಿ ಸರ್ಕಾರದ ಸಚಿವರಾಗಿದ್ದ ಕಾರಣ ʼಇಂಡಿಯಾʼ ಮೈತ್ರಿಕೂಟದ ಮತಗಳನ್ನು ಕಸಿದು ಬಾನ್ಸುರಿ ಅವರಿಗೆ ಸಹಾಯ ಮಾಡಲೆಂದೇ ಬಿಜೆಪಿ ಅವರನ್ನು ಕಣಕ್ಕಿಳಿಸಿತ್ತು. ಕೇಂದ್ರ ತನಿಖಾ ಸಂಸ್ಥೆಗಳ ಒತ್ತಡಕ್ಕೆ ಮಣಿದು ಎಎಪಿಗೆ ರಾಜೀನಾಮೆ ನೀಡಿದ ಆನಂದ್ ಬಿಎಸ್‌ಪಿಯಿಂದ ಸ್ಪರ್ಧಿಸಿ ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಸಹ ಭಾರತಿ ಅರ್ಜಿಯಲ್ಲಿ ಆರೋಪಿಸಿದ್ದರು.