Aamir Khan Wali book launch  
ಸುದ್ದಿಗಳು

ನ್ಯಾ. ವರ್ಮಾ ಖುಲಾಸೆಯಾದರೂ ಮಾಧ್ಯಮ ವಿಚಾರಣೆಯಿಂದಾಗಿ ಅವರ ಪ್ರಾಮಾಣಿಕತೆಯನ್ನು ಯಾರೂ ನಂಬುವುದಿಲ್ಲ: ಮುಕುಲ್‌ ರೋಹಟ್ಗಿ

ನಿರಂತರ ಮಾಧ್ಯಮ ವಿಚಾರಣೆಯಿಂದಾಗಿ ಅವರ ವರ್ಚಸ್ಸಿಗೆ ಉಂಟಾದ ಹಾನಿಯನ್ನು ನ್ಯಾಯಾಲಯದ ಖುಲಾಸೆ ಬದಲಿಸಲಾಗದು ಎಂದು ಮಾಜಿ ಅಟಾರ್ನಿ ಜನರಲ್‌ ರೋಹಟ್ಗಿ ತಿಳಿಸಿದರು.

Bar & Bench

ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ತಮ್ಮ ನಿವಾಸದಲ್ಲಿ ಅಪಾರ ಪ್ರಮಾಣದ ಸುಟ್ಟು ಕರಕಲಾದ ನಗದು ರಾಶಿ ಪತ್ತೆಯಾದ ಪ್ರಕರಣದಲ್ಲಿ ಆರೋಪಿಯಾಗಿರುವ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿರುವ ಮಾಜಿ ಅಟಾರ್ನಿ ಜನರಲ್‌ ಮುಕುಲ್‌ ರೋಹಟ್ಗಿ ಅವರು ಮಾಧ್ಯಮ ವಿಚಾರಣೆಗಳು ನ್ಯಾಯಾಂಗ ವೃತ್ತಿಜೀವನವನ್ನು ಶಾಶ್ವತವಾಗಿ ನಾಶಮಾಡುವ ಶಕ್ತಿ ಹೊಂದಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜನವರಿ 16 ರಂದು ಆಮಿರ್ ಖಾನ್ ವಾಲಿ ವಿರಚಿತ ಬಿಯಾಂಡ್ ಹೆಡ್‌ಲೈನ್ಸ್: ವಾಲ್ಯೂಮ್‌ I - ದಿ ಮೀಡಿಯಂ ಅಂಡ್ ಇಟ್ಸ್ ಮ್ಯುಟೇಶನ್ಸ್ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ನಿರಂತರ ಮಾಧ್ಯಮ ವರದಿಯಿಂದ ಅವರ ವರ್ಚಸ್ಸಿಗೆ ಉಂಟಾದ ಹಾನಿಯನ್ನು ನ್ಯಾಯಾಲಯದ ಖುಲಾಸೆ ಬದಲಿಸಲಾಗದು ಎಂದು ತಿಳಿಸಿದರು.

" ಯಾರ ಮನೆಯಲ್ಲಿ ಹಣ ಸಿಕ್ಕಿದೆ ಎಂದು ಹೇಳುತ್ತಿದ್ದಾರೋ ಆ ನ್ಯಾಯಮೂರ್ತಿಗಳ ವಿರುದ್ಧ ಪ್ರಕರಣ ಇದೆ. ಇಡೀ ಮಾಧ್ಯಮ ಅವರಿಗೆ ಕಪ್ಪು ಬಣ್ಣ ಬಳಿದಿದೆ... ಅಂತಿಮವಾಗಿ ಖುಲಾಸೆಯಾದರೂ  ಅವರು ಪ್ರಾಮಾಣಿಕ ನ್ಯಾಯಾಧೀಶರು ಎಂದು ಯಾರೂ ನಂಬುವುದಿಲ್ಲ... ಪ್ರಕರಣ ಏನೇ ಆಗಲಿ, ಅವರ ವೃತ್ತಿಜೀವನ ಮುಗಿದಿದೆ" ಎಂದು ಅವರು ನ್ಯಾಯಮೂರ್ತಿ ವರ್ಮಾ ಅವರ ಹೆಸರನ್ನು ಉಲ್ಲೇಖಿಸದೆ ಹೇಳಿದರು.

ನ್ಯಾಯಾಧೀಶರ (ವಿಚಾರಣಾ) ಕಾಯಿದೆಯಡಿ ತಮಗೆ ವಾಗ್ದಂಡನೆ ವಿಧಿಸಲು ತ್ರಿಸದಸ್ಯ ಸಮಿತಿ ರಚಿಸುವ ಲೋಕಸಭಾ ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ವರ್ಮಾ ಪರವಾಗಿ ರೋಹಟಗಿ ವಾದಿಸಿದ್ದರು. ಸುಪ್ರೀಂ ಕೋರ್ಟ್ ಶುಕ್ರವಾರ ಈ ಅರ್ಜಿ ವಜಾಗೊಳಿಸಿದೆ.

ರೋಹಟ್ಗಿ ಅವರ ಮಾತಿನ ಪ್ರಮುಖಾಂಶಗಳು

  • ನಿರಂತರವಾದ ಮತ್ತು ಅತಿರಂಜಿತ ಟಿವಿ ವರದಿ ಮತ್ತು ಆರೋಪಗಳ ಪುನರಾವೃತ್ತಿಯಿಂದಾಗಿ ನ್ಯಾಯಾಲಯ ಸಾಕ್ಷ್ಯ ಪರಿಶೀಲಿಸುವುದಕ್ಕೂ ಮುನ್ನವೇ ತ್ವರಿತ ನ್ಯಾಯ ನೀಡಿದಂತಾಗಿದೆ.

  • ಮಾಧ್ಯಮ ವಿಚಾರಣೆಗಳು ನ್ಯಾಯಾಂಗವನ್ನು ಮುಳುಗಿಸುತ್ತಿರುವ ಅತ್ಯಂತ ದೊಡ್ಡ ಸಮಸ್ಯೆಗಳಲ್ಲೊಂದು. 

  • ಸಾಮಾಜಿಕ ಮಾಧ್ಯಮಕ್ಕಿಂತಲೂ ಸಮಾಜದಲ್ಲಿ ಅಧಿಕೃತತೆ ಮತ್ತು ವಿಶ್ವಾಸಾರ್ಹತೆ ಇರುವುದರಿಂದ ಮುಖ್ಯ ವಾಹಿನಿ ಮಾಧ್ಯಮವೇ ಹೆಚ್ಚು ಆಳವಾದ ಮತ್ತು  ದೀಋಘಕಾಲಿಕ ಹಾನು ಉಂಟು ಮಾಡುತ್ತದೆ.

  • ಒಬ್ಬ ವ್ಯಕ್ತಿಯ ಮುಖ ಪದೇಪದೇ ಟೆಲಿವಿಷನ್‌ನಲ್ಲಿ ತೋರಿಸಿ ಅಪರಾಧಿಯೆಂದು ಬಿಂಬಿಸಿದರೆ, ಅದು ಆತನ ವರ್ಚಸ್ಸು ಮತ್ತು ಬದುಕನ್ನು ಸಂಪೂರ್ಣವಾಗಿ ನಾಶ ಮಾಡುತ್ತದೆ.

  • ಸಂವಿಧಾನದ ಕಲಂ 19(1)(a) ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ರಕ್ಷಣೆಯಿದ್ದರೂ, ಮಾಧ್ಯಮ ಖಾಸಗಿತನ, ಮಾನವ ಗೌರವ ಮತ್ತು ನ್ಯಾಯಸಮ್ಮತ ವಿಚಾರಣೆಯ ಹಕ್ಕನ್ನು ಹಾಳುಮಾಡುವಂತಿಲ್ಲ.

  • ಆದರೆ ಮಾಧ್ಯಮಗಳ ವಿಚಾರಣೆಗೆಂದೇ ವಿಶೇಷ ನ್ಯಾಯಮಂಡಳಿ ಸ್ಥಾಪಿಸುವ ಕಲ್ಪನೆ ಸರಿಯಲ್ಲ. ದೇಶದಲ್ಲಿ ನ್ಯಾಯಮಂಡಲಿ ವ್ಯವಸ್ಥೆ ವಿಫಲ ಪ್ರಯೋಗ. ನ್ಯಾಯಮಂಡಳಿಗೆ ಸಾಂವಿಧಾನಿಕ ಭದ್ರತೆ ಇಲ್ಲ.

  • ಉಚ್ಚ ನ್ಯಾಯಾಲಯಗಳಿಗಿಂತಲೂ ಭಿನ್ನವಾಗಿ ನ್ಯಾಯಮಂಡಳಿಗಳು ಕಾರ್ಯಾಂಗದ ಪ್ರಭಾವಕ್ಕೆ ತುತ್ತಾಗುವ ಅಪಾಯ ಇದೆ.