ಸುದ್ದಿಗಳು

ನ್ಯಾಯೋಚಿತ ವರದಿಗಾರಿಕೆಯಿಂದ ನ್ಯಾಯಾಧೀಶರಿಗೆ ಲಗಾಮು: ಪತ್ರಿಕೆ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಿದ ಪಂಜಾಬ್ ಹೈಕೋರ್ಟ್

ಹಿಂದೂಸ್ತಾನ್ ಟೈಮ್ಸ್ ಮಾಜಿ ಪ್ರಧಾನ ಸಂಪಾದಕ ಸಂಜಯ್ ನಾರಾಯಣ್ ಮತ್ತು ಆಗಿನ ಕಾನೂನು ವರದಿಗಾರ ಸಂಜೀವ್ ವರ್ಮಾ ವಿರುದ್ಧ ವಕೀಲರ ಸಂಘವೊಂದು ಹೂಡಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ನ್ಯಾಯಾಲಯ ಮುಕ್ತಾಯಗೊಳಿಸಿತು.

Bar & Bench

ನ್ಯಾಯಾಲಯದ ತೀರ್ಪುಗಳ ಕುರಿತಂತೆ ಮಾಧ್ಯಮಗಳ ನ್ಯಾಯೋಚಿತ ವರದಿಗಾರಿಕೆಯು ನ್ಯಾಯಾಡಳಿತದ ಅವಿಭಾಜ್ಯ ಭಾಗವಾಗಿದ್ದು ಇದು ನ್ಯಾಯಾಧೀಶರನ್ನು ಕಾನೂನಿನ ಚೌಕಟ್ಟಿನೊಳಗೆ ಇರುವಂತೆ ನೋಡಿಕೊಳ್ಳುತ್ತದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ [ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್  ವಕೀಲರ ಸಂಘ ಮತ್ತು ಸಂಜಯ್ ನಾರಾಯಣ್ ಇನ್ನಿತರರ ನಡುವಣ ಪ್ರಕರಣ].

ನ್ಯಾಯಾಲಯದ ತೀರ್ಪುಗಳನ್ನು ನ್ಯಾಯಸಮ್ಮತತೆಯಿಂದ ವರದಿ ಮಾಡುವುದರಿಂದ ನ್ಯಾಯಾಧೀಶರು ಸ್ಥಾಪಿತ ಪ್ರಕ್ರಿಯೆ ಮತ್ತು ಕಾನೂನುಗಳನ್ನು ಉಲ್ಲಂಘಿಸದಂತಾಗುತ್ತದೆ ಎಂದು ನ್ಯಾಯಮೂರ್ತಿ ಸುರೇಶ್ ಠಾಕೂರ್ ಮತ್ತು ನ್ಯಾಯಮೂರ್ತಿ ಸುದೀಪ್ತಿ ಶರ್ಮಾ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

ನ್ಯಾಯಾಲಯದ ತೀರ್ಪುಗಳ ನ್ಯಾಯಯುತ ವರದಿಗಾರಿಕೆ ನ್ಯಾಯಿಕ ಆಡಳಿತದ ಅವಿಭಾಜ್ಯ ಅಂಗ. ಇದಲ್ಲದೆ, ನ್ಯಾಯೋಚಿತ ವರದಿಗಾರಿಕೆ ಎಂಬುದು ಮುದ್ರಣವೇ ಇರಲಿ ಎಲೆಕ್ಟ್ರಾನಿಕ್‌ ಮಾಧ್ಯಮವೇ ಇರಲಿ ಪತ್ರಿಕಾ ಸ್ವಾತಂತ್ರ್ಯವನ್ನು ಪೋಷಿಸುತ್ತದೆ. ಮಾಧ್ಯಮಗಳು ಲಜ್ಜೆಗೆಟ್ಟ ಮತ್ತು ನಿರಂಕುಶ ಪ್ರಭುತ್ವದ ಕ್ರಮಗಳನ್ನಷ್ಟೇ ಅಲ್ಲದೆ ಕಾನೂನಿನ ನೆಲೆಗೊಂಡ ತತ್ವಗಳು ಹಾಗೂ ಸುಸ್ಥಾಪಿತ ಪ್ರಕ್ರಿಯೆಗಳಿಂದ ವಿಮುಖವಾಗದಂತೆ ನ್ಯಾಯಾಲಯದ ತೀರ್ಪುಗಳನ್ನು ಕಾವಲು ಕಾಯುವ ದೈವಗಳೂ ಆಗಿವೆ ಎಂದು ನ್ಯಾಯಾಲಯ ನುಡಿದಿದೆ.    

ಈ ಹಿನ್ನೆಲೆಯಲ್ಲಿ ಹಿಂದೂಸ್ತಾನ್ ಟೈಮ್ಸ್ ಮಾಜಿ ಪ್ರಧಾನ ಸಂಪಾದಕ ಸಂಜಯ್ ನಾರಾಯಣ್ ಮತ್ತು ಆಗಿನ ಕಾನೂನು ವರದಿಗಾರ ಸಂಜೀವ್ ವರ್ಮಾ ವಿರುದ್ಧ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಕೀಲರ ಸಂಘ 2014ರಲ್ಲಿ ಹೂಡಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ನ್ಯಾಯಾಲಯ ಮುಕ್ತಾಯಗೊಳಿಸಿತು.

ಎನ್‌ಡಿಪಿಎಸ್‌ ಕಾಯಿದೆಯಡಿ ನಿಯಮ ಉಲ್ಲಂಘಿಸಿದ ಆರೋಪ ಎದುರಿಸುತ್ತಿದ್ದ ಕೈಗಾರಿಕೋದ್ಯಮಿ ಮತ್ತು ಅವರ ತಂದೆ ಘೋಷಿತ ಅಪರಾಧಿಗಳಾಗಿದ್ದರೂ ಕೂಡ ಹೈಕೋರ್ಟ್‌ ಏಕಸದಸ್ಯ ಪೀಠ ಜಾಮೀನು ನೀಡಿದೆ ಎಂದು ಶರ್ಮಾ ವರದಿ ಪ್ರಕಟಿಸಿದ್ದರು. 

ಅಡ್ವೊಕೇಟ್ ಜನರಲ್ ಅವರ ಪೂರ್ವಾನುಮತಿ ಇಲ್ಲದೆ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಬಹುದೇ ಮತ್ತು ಸುದ್ದಿ ನ್ಯಾಯಯುತ ವರದಿಯಾಗಿದೆಯೇ ಎಂಬುದನ್ನು ನ್ಯಾಯಾಲಯ ವಿಶ್ಲೇಷಿಸಿತು.

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿಲ್ಲ. ಹೀಗಾಗಿ ಅಡ್ವೊಕೇಟ್ ಜನರಲ್‌ ಅವರ ಪೂರ್ವಾನುಮತಿ ಅಗತ್ಯ ಎಂದಿತು. ಇದೇ ವೇಳೆ ನ್ಯಾಯಾಲಯದ ಆದೇಶವನ್ನು ನ್ಯಾಯೋಚಿತವಾಗಿ ವರದಿ ಮಾಡಿದ ಪರಿಣಾಮ ನ್ಯಾಯಾಧೀಶರ ಮೇಲೆ ವೈಯಕ್ತಿಕ ದಾಳಿ ಉಂಟಾದರೂ ಮೇಲ್ನೋಟಕ್ಕೆ ವರದಿಗಾರ ಇಲ್ಲವೇ ಪ್ರಕಾಶಕರನ್ನು ಕ್ರಿಮಿನಲ್‌ ನ್ಯಾಯಾಂಗ ನಿಂದನೆಯ ಆರೋಪಿಗಳನ್ನಾಗಿ ಮಾಡಲಾಗದು ಎಂದು ತಿಳಿಸಿತು.

ನ್ಯಾಯಾಲಯಗಳು ಸಾರ್ವಜನಿಕರ ಆಳವಾದ ನಂಬಿಕೆ ಮತ್ತು ವಿಶ್ವಾಸದ ಭಂಡಾರವಾಗಿದ್ದು, ನ್ಯಾಯಾಧೀಶರ ಘನತೆವೆತ್ತ ಲೇಖನಿಯಿಂದ "ಕಲುಷಿತವಾಗದ ಮತ್ತು ನಿರ್ಮಲವಾದ ನ್ಯಾಯ" ವನ್ನು ನಿರೀಕ್ಷಿಸಲಾಗುತ್ತದೆ ಎಂದು ಅದು ಬಣ್ಣಿಸಿತು.

ನ್ಯಾಯಾಧೀಶರು ನ್ಯಾಯಾಡಳಿತವನ್ನು ಎತ್ತಿಹಿಡಿಯುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದಿರುವ ನ್ಯಾಯಾಲಯವು, ನ್ಯಾಯಾಲಯದ ತೀರ್ಪುಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ನ್ಯಾಯಿಕ ಆಡಳಿತದ ನ್ಯಾಯಸಮ್ಮತತೆ ಕಾಯ್ದುಕೊಳ್ಳುವಂತೆ ಮಾಡುವ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದೆ.

ಹಾಗಲ್ಲದೆ ಹೋದರೆ ಇತ್ಯರ್ಥಪಡಿಸಿದ ಕಾನೂನುಗಳು ಮತ್ತು ಸ್ಥಾಪಿತ ಕಾರ್ಯವಿಧಾನದ ಅವಹೇಳನ ನಡೆದು ನ್ಯಾಯದ ಹರಿವು ಕಲುಷಿತಗೊಂಡು ನ್ಯಾಯಿಕ ಆಡಳಿತದ ಬಗ್ಗೆ ಜನರ ನಂಬಿಕೆ ಕುಸಿದು ಅರಾಜಕತೆ ಸೃಷ್ಟಿಯಾಗುತ್ತದೆ ಎಂದ ನ್ಯಾಯಾಲಯ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಕ್ತಾಯಗೊಳಿಸಿತು.