Madras High Court 
ಸುದ್ದಿಗಳು

ನಕಲಿ ಎನ್‌ಸಿಸಿ ಕ್ಯಾಂಪ್ ಲೈಂಗಿಕ ದೌರ್ಜನ್ಯ: ಆರೋಪಿ ಹಾಗೂ ತಂದೆಯ ನಿಗೂಢ ಸಾವಿನ ವರದಿ ಕೇಳಿದ ಮದ್ರಾಸ್ ಹೈಕೋರ್ಟ್

ಶಾಲೆ ದುರ್ಬಲ ಮಕ್ಕಳನ್ನು ಅಪಾಯಕಾರಿ ಪರಿಸ್ಥಿತಿಗೆ ಒಡ್ಡಿದೆ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಡಿ ಕೃಷ್ಣಕುಮಾರ್ ಮತ್ತು ನ್ಯಾಯಮೂರ್ತಿ ಪಿ ಬಿ ಬಾಲಾಜಿ ಅವರಿದ್ದ ಪೀಠ ಹೇಳಿದೆ.

Bar & Bench

ಖಾಸಗಿ ಶಾಲೆಯಲ್ಲಿ ಆಯೋಜಿಸಿದ್ದ ನಕಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಶಿಬಿರದಲ್ಲಿ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಉಳಿದ ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮತ್ತು ಆತನ ತಂದೆಯ ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಅಡ್ವೊಕೇಟ್ ಜನರಲ್‌ಗೆ ಸೂಚಿಸಿದೆ.

ವಿಶೇಷ ತನಿಖಾ ತಂಡ ಮತ್ತು ಘಟನೆಯ ಕುರಿತು ತನಿಖೆ ನಡೆಸುತ್ತಿರುವ ಬಹು ಶಿಸ್ತೀಯ ತಂಡದ ತನಿಖಾ ವರದಿಗಳನ್ನು ಸಲ್ಲಿಸುವಂತೆ ಅಡ್ವೊಕೇಟ್ ಜನರಲ್ ಪಿ.ಎಸ್.ರಾಮನ್ ಅವರಿಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಡಿ.ಕೃಷ್ಣಕುಮಾರ್ ಮತ್ತು ಪಿ.ಬಿ.ಬಾಲಾಜಿ ಅವರಿದ್ದ ಪೀಠ ಸೂಚಿಸಿದೆ.

ಖಾಸಗಿ ಶಾಲೆಯನ್ನು ಪರಿಶೀಲಿಸಿ ಸಂತ್ರಸ್ತರು, ಪೋಷಕರು ಮತ್ತು ಇತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ನ್ಯಾಯಾಲಯಕ್ಕೆ ವಿವರವಾದ ವರದಿ ಸಲ್ಲಿಸುವಂತೆ ಕೃಷ್ಣಗಿರಿಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆಗಸ್ಟ್ 28 ರಂದು ನೀಡಿದ ಆದೇಶದಲ್ಲಿ ನ್ಯಾಯಾಲಯ ಹೇಳಿದೆ.

ಪ್ರಧಾನ ಆರೋಪಿ ಶಿವರಾಮನ್ ಮತ್ತು ಅವರ ತಂದೆ ನಿಗೂಢ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದ್ದು ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ವಕೀಲ ಎಪಿ ಸೂರ್ಯಪ್ರಕಾಶ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ಮೃತ ಆರೋಪಿಯಿಂದ 12 ಅಪ್ರಾಪ್ತ ವಿದ್ಯಾರ್ಥಿನಿಯರು  ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾದ ಘಟನೆ ಇದಾಗಿದೆ.

ಈ ವರ್ಷದ ಆಗಸ್ಟ್ 5 ಮತ್ತು 9ರ ನಡುವೆ ಶಾಲೆಯಲ್ಲಿ ನಕಲಿ ಎನ್‌ಸಿಸಿ ಶಿಬಿರ ಆಯೋಜಿಸಿ ಸಂತ್ರಸ್ತರಿಗೆ ಲೈಂಗಿಕ ಕಿರುಕುಳ ನೀಡಿದ್ದರು ಮತ್ತು ಅವರಲ್ಲಿ ಒಬ್ಬರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಶಿವರಾಮನ್‌ ಮೇಲಿತ್ತು.

ಅತ್ಯಾಚಾರ ಸಂತ್ರಸ್ತೆ ನೀಡಿದ್ದ ದೂರಿನ ಮೇರೆಗೆ ಆಗಸ್ಟ್ 19 ರಂದು ಶಿವರಾಮನ್‌ನನ್ನು ಬಂಧಿಸಲಾಗಿತ್ತು. ಅವರು ಆಗಸ್ಟ್ 23 ರಂದು ಸೇಲಂನ ಆಸ್ಪತ್ರೆಯಲ್ಲಿ ಆತ ನಿಧನ ಹೊಂದಿದ್ದ. ಆತನ ತಂದೆ ಹಿಂದಿನ ದಿನ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು ಎಂದು ತಿಳಿದುಬಂದಿತ್ತು.

ಪೊಲೀಸರ ಪ್ರಕಾರ, ಶಿವರಾಮನ್ ಸರ್ಕಾರಿ ಆಸ್ಪತ್ರೆಯಲ್ಲಿ ಇಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮಧ್ಯೆ, ಅವರ ತಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಡ್ವೊಕೇಟ್ ಜನರಲ್ ಪಿ.ಎಸ್.ರಾಮನ್ ಮತ್ತು ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಹಸನ್ ಮೊಹಮ್ಮದ್ ಜಿನ್ನಾ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಸಂಬಂಧಪಟ್ಟ ಖಾಸಗಿ ಶಾಲೆಯ ಆಡಳಿತ ಮಂಡಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ವಿವರಣೆ ನೀಡುವಂತೆ ಸೂಚಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್  ಅವರು ನ್ಯಾಯಾಲಯಕ್ಕೆ ತಿಳಿಸಿದರು. 

ಆದರೆ, ವಿದ್ಯಾರ್ಥಿಗಳ ರಕ್ಷಣೆ ಮಾಡುವ ಕರ್ತವ್ಯವನ್ನು ಶಾಲೆ ನಿಭಾಯಿಸಿಲ್ಲ ಎಂದು ಹೈಕೋರ್ಟ್ ಹೇಳಿದೆ. ಸಂಘಟಕರ ಸಂಪೂರ್ಣ ಹಿನ್ನೆಲೆ ಪರಿಶೀಲನೆ ನಡೆಸದೆ ಶಾಲೆ ಎನ್‌ಸಿಸಿ ಶಿಬಿರಕ್ಕೆ ಹೇಗೆ ಒಪ್ಪಿಗೆ ನೀಡಿದೆ ಎಂದು ಅದು ತಿಳಿಸಿದೆ. ಸೆಪ್ಟೆಂಬರ್ 4ರೊಳಗೆ ವರದಿ ಸಲ್ಲಿಸುವಂತೆ ಎಜಿ ಮತ್ತು ಡಿಎಲ್‌ಎಸ್‌ಎಗೆ ನಿರ್ದೇಶನ ನೀಡಿದೆ.