Couple (representational)  
ಸುದ್ದಿಗಳು

ವಯಸ್ಕರು ಜೀವನ ಸಂಗಾತಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಕುಟುಂಬದ ಅಸಮ್ಮತಿ ತಡೆಯುವಂತಿಲ್ಲ: ದೆಹಲಿ ಹೈಕೋರ್ಟ್

ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಓಡಿಹೋಗಿ ಮದುವೆಯಾದ ದಂಪತಿಯ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ.

Bar & Bench

ಮಹಿಳೆಯ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದರಿಂದ ತಮಗೆ ಬೆದರಿಕೆ ಇದೆ ಎಂದಿದ್ದ ದಂಪತಿಗೆ ಪೊಲೀಸರು ರಕ್ಷಣೆ ಒದಗಿಸಬೇಕು ಎಂದು ದೆಹಲಿ ಹೈಕೋರ್ಟ್‌ ಈಚೆಗೆ ಆದೇಶಿಸಿದೆ [ರಾಜಕುಮಾರ ತ್ಯಾಗಿ ಮತ್ತಿತರರು ಹಾಗೂ ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಸಂವಿಧಾನದ 21 ನೇ ವಿಧಿಯಡಿ ಇಬ್ಬರು ವಯಸ್ಕರು ಪರಸ್ಪರ ಜೀವನ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಕುಟುಂಬದ ಅಸಮ್ಮತಿ ತಡೆಯುವಂತಿಲ್ಲ ಎಂದು ನ್ಯಾಯಮೂರ್ತಿ ಸಂಜೀವ್ ನರುಲಾ ತಿಳಿಸಿದರು.

"ಇಬ್ಬರು ವಯಸ್ಕರು ಪರಸ್ಪರ ಜೀವನ ಸಂಗಾತಿಗಳಾಗಿ ಆಯ್ಕೆ ಮಾಡಿಕೊಳ್ಳುವ ಮತ್ತು ಶಾಂತಿಯಿಂದ ಒಟ್ಟಿಗೆ ವಾಸಿಸುವ ಹಕ್ಕು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ವೈಯಕ್ತಿಕ ಸ್ವಾತಂತ್ರ್ಯ, ಗೌಪ್ಯತೆ ಮತ್ತು ಘನತೆಯಿಂದ ಜೀವಿಸುವ ಹಕ್ಕಿನ ಒಂದು ಭಾಗವಾಗಿದೆ. ಆ ಸ್ವಾಯತ್ತತೆಯನ್ನು (ಕುಟುಂಬದವರ) ಅಸಮ್ಮತಿ ಮೊಟಕುಗೊಳಿಸಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ಈ ನಿಲುವನ್ನು ಪದೇ ಪದೇ ಎತ್ತಿ ಹಿಡಿದಿದ್ದು ಅಂತಹ ದಂಪತಿಗಳು ಬೆದರಿಕೆ ಅಥವಾ ಹಾನಿಗೆ ತುತ್ತಾಗದಂತೆ ರಕ್ಷಿಸಬೇಕು ಎಂದು ಪೊಲೀಸರಿಗೆ ನಿರ್ದೇಶನ ನೀಡಿದೆ" ಎಂಬುದಾಗಿ ನ್ಯಾಯಾಲಯ ಹೇಳಿದೆ.

ಮಹಿಳೆಯ ಕುಟುಂಬ ಸದಸ್ಯರು ಸಂದೇಶಗಳು, ಫೋನ್ ಕರೆಗಳು ಮತ್ತು ವಿಡಿಯೋ ಕರೆಗಳ ಮೂಲಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದಂಪತಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಮಹಿಳೆಯ ಕುಟುಂಬ ಸದಸ್ಯರು ಮಹಿಳೆ ಕಾಣೆಯಾದ ಬಗ್ಗೆಯೂ ದೂರು ದಾಖಲಿಸಿದ್ದರು. ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದಾಗ ಆಕೆ ಸ್ವಯಂಪ್ರೇರಣೆಯಿಂದ ತನ್ನತವರು ಮನೆ ತೊರೆದು ವಿವಾಹವಾಗಿದ್ದಾಳೆ ಎಂದು ತಿಳಿದುಬಂದಿತ್ತು.

ದಂಪತಿಯ ವಾದ ಪರಿಗಣಿಸಿದ ನ್ಯಾಯಾಲಯ, ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿತು. ಅವರ ಸುರಕ್ಷತೆ ಪರಿಶೀಲಿಸಲು ಬೀಟ್ ಅಧಿಕಾರಿಯನ್ನು ನೇಮಿಸುವಂತೆ ಅದು ಹೇಳಿತು.

ಅಲ್ಲದೆ ಆ ಅಧಿಕಾರಿ ತನ್ನ ಮೊಬೈಲ್‌ ಸಂಖ್ಯೆ ಮ್ತು ಪೊಲೀಸ್‌ ಠಾಣೆಯ 24×7 ಸಂಪರ್ಕ ವಿವರಗಳನ್ನು ದಂಪತಿಗೆ ನೀಡಬೇಕು. ದಂಪತಿ ಯಾವುದೇ ದೂರು ನೀಡಿದರೆ ಕೂಡಲೇ ಡಿಡಿ ನೋಂದಣಿಯಲ್ಲಿ ದಾಖಲಿಸಿ ಅವರಿಗೆ ತುರ್ತು ಸಹಾಯ ನೀಡಬೇಕು.   ಸಮನ್ವಯಕ್ಕಾಗಿ, ಅರ್ಜಿದಾರರ ಪರ ವಕೀಲರು ಅರ್ಜಿದಾರರ ಪ್ರಸ್ತುತ ವಾಸಸ್ಥಳ ಮತ್ತು ಸಂಪರ್ಕ ವಿವರಗಳನ್ನು ಇಂದು ತನಿಖಾ ಅಧಿಕಾರಿಯೊಂದಿಗೆ ಹಂಚಿಕೊಳ್ಳಬೇಕು  ಎಂದು ನ್ಯಾಯಾಲಯ  ಆಗಸ್ಟ್ 5 ರಂದು ನೀಡಿದ ಆದೇಶದಲ್ಲಿ ತಿಳಿಸಿದೆ.