CJ Abhay Shreeniwas Oka, Justice Savanur Vishwajith Shetty 
ಸುದ್ದಿಗಳು

ರೈತರ ಆತ್ಮಹತ್ಯೆ: ಮೃತ ಕೃಷಿಕರ ಕುಟುಂಬಗಳಿಗೆ ನೀಡಿದ ನೆರವು ಕುರಿತು ಸರ್ಕಾರದಿಂದ ಮಾಹಿತಿ ಕೋರಿದ ಕರ್ನಾಟಕ ಹೈಕೋರ್ಟ್

ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನಲ್ಲಿ ರೈತರ ಆತ್ಮಹತ್ಯೆ ಹೆಚ್ಚಳಕ್ಕೆ ಕಾರಣ ಮತ್ತು ಕುಟುಂಬಗಳಿಗೆ ನೀಡಿದ ನೆರವಿನ ಮಾಹಿತಿ ಪಡೆಯುವಂತೆ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Bar & Bench

ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಬಗ್ಗೆ ಗಂಭೀರ ನಿಲುವು ತಳೆದಿರುವ ಕರ್ನಾಟಕ ಹೈಕೋರ್ಟ್‌ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕೃಷಿಕರ ಕುಟುಂಬಗಳ ಸಂಕಷ್ಟ ನಿವಾರಿಸಲು ಕೈಗೊಂಡ ಕ್ರಮಗಳನ್ನು ದಾಖಲೆಯಲ್ಲಿ ನೀಡುವಂತೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ರೈತ ಆತ್ಮಹತ್ಯೆಗಳ ಬಗ್ಗೆ ಅಖಂಡ ಕರ್ನಾಟಕ ರೈತ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಜಾರಿ ಮಾಡಿದೆ. ರೈತರ ಆತ್ಮಹತ್ಯೆ ಹೆಚ್ಚಳ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮೃತ ರೈತರ ಕುಟುಂಬಗಳಿಗೆ ನೀಡಿದ ನೆರವು/ ಪರಿಹಾರಧನದ ವಿವರಗಳನ್ನು ಒದಗಿಸುವಂತೆ ನ್ಯಾಯಾಲಯ ಸೂಚಿಸಿದೆ.

ರೈತರ ಆತ್ಮಹತ್ಯೆ ಹೆಚ್ಚಳವನ್ನು ಗಂಭೀರ ವಿಷಯವೆಂದು ಪರಿಗಣಿಸಿ, ಮೃತ ರೈತರ ಕುಟುಂಬಗಳಿಗೆ ವಿಸ್ತರಿಸಿದ ನೆರವು / ಅನುದಾನದ ವಿವರಗಳನ್ನು ನೀಡುವಂತೆ ನ್ಯಾಯಾಲಯ ತಿಳಿಸಿದೆ. ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನಲ್ಲಿ ನಡೆದ ರೈತರ ಆತ್ಮಹತ್ಯೆಗೆ ಕಾರಣ ಮತ್ತು ಕುಟುಂಬಗಳಿಗೆ ನೀಡಿದ ನೆರವಿನ ಕುರಿತು ತನಿಖೆ ನಡೆಸಲು ಸೂಕ್ತ ಅಧಿಕಾರಿಯನ್ನು ನೇಮಕ ಮಾಡಬೇಕು. ಇದರ ಆಧಾರದ ಮೇಲೆ ರಾಜ್ಯ ಸರ್ಕಾರ ವರದಿ ನೀಡಬೇಕು ಎಂದು ಪೀಠ ನಿರ್ದೇಶಿಸಿದೆ.

ಇದಲ್ಲದೆ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು (ಪಿಎಂಎಫ್‌ಬಿವೈ) ಒದಗಿಸಲು ಬ್ಯಾಂಕುಗಳು ರೈತರಿಂದ ಸಂಗ್ರಹಿಸಿದ ಪ್ರೀಮಿಯಂಗಳ ವಿವರ ಪಡೆಯಲು ಮತ್ತು ವಿಮಾ ಕಂಪನಿಗಳಿಗೆ ಬ್ಯಾಂಕುಗಳು ಹಣ ಪಾವತಿಸಿವೆಯೋ ಇಲ್ಲವೋ ಮತ್ತು ಅದೇ ರೀತಿ ವಿಮಾ ಕಂಪನಿಗಳು ಕೃಷಿಕರಿಗೆ ನೆರವು ನೀಡಿವೆಯೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಕೂಡ ವಿಭಾಗೀಯ ಪೀಠ ಸೂಚಿಸಿದೆ.

2016ರ ಮುಂಗಾರು ಋತುವಿನಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ ಫಸಲ್ ಬಿಮಾ ಯೋಜನೆಯಡಿ ವಿಮೆ ಮಾಡಿದ ರೈತರಿಗೆ ತಕ್ಷಣವೇ ಬೆಳೆ ನಷ್ಟ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. "ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿರುವ ಎಲ್ಲಾ ತಾಲ್ಲೂಕುಗಳಲ್ಲಿ, ವಿಮೆ ಮಾಡಿದ ಎಲ್ಲಾ ರೈತರಿಗೆ ಬೆಳೆ ವಿಮೆ ನಷ್ಟ ಪರಿಹಾರವನ್ನು ರಾಜ್ಯ ಸರ್ಕಾರ ತಕ್ಷಣ ವಿತರಿಸಬೇಕು" ಎಂದು ಮನವಿ ಮಾಡಲಾಗಿದೆ.

ವಿಚಾರಣೆಯ ವೇಳೆ, ರೈತ ಸಂಘದ ಪರ ವಕೀಲ ಕ್ಲಿಫ್ಟನ್ ಡಿ ರೊಜಾರಿಯೋ ಅವರು “ಮಹಾರಾಷ್ಟ್ರ ಮತ್ತು ಗುಜರಾತ್ ನಂತರ ಅತಿ ಹೆಚ್ಚು ರೈತ ಸಾವುಗಳಿಗೆ ರಾಜ್ಯ ಸಾಕ್ಷಿಯಾಗಿದೆ. ಕಳೆದ 20 ವರ್ಷಗಳಲ್ಲಿ 40,346 ರೈತರು ತಮ್ಮ ಜೀವ ಕಳೆದುಕೊಂಡಿದ್ದಾರೆ. 2017ರಲ್ಲಿ 2,160 ರೈತರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದರೆ, 2018ರಲ್ಲಿ 2,405 ರೈತ ಸಾವುಗಳು ಸಂಭವಿಸಿವೆ. 2018-2019ರಲ್ಲಿ ಶಹಾಪುರ ತಾಲ್ಲೂಕೊಂದರಲ್ಲೇ ಒಟ್ಟು 98 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ವಿವರಿಸಿದರು.

"ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವಲ್ಲಿ ವೈಫಲ್ಯ ಕಂಡುಬಂದಿದೆ. ಬೆಳೆ ನಷ್ಟ ನಿಭಾಯಿಸಲು ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಪಿಎಂಎಫ್‌ಬಿವೈ ಎಂಬುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಡ್ಡಾಯವಾಗಿ ಜಾರಿಗೆ ತರಬೇಕಾದ ಬೆಳೆ ವಿಮಾ ಯೋಜನೆಯಾಗಿದೆ" ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

"ವಿಮೆ ಮಾಡಿಸಿರುವ ಶಹಾಪುರ ತಾಲೂಕಿನ ರೈತರು ತೀವ್ರ ಬೆಳೆ ನಷ್ಟ ಅನುಭವಿಸಿದ್ದರೂ ಕೂಡ ಇವರಿಗೆ ಅಕ್ರಮ ಮತ್ತು ಕಾನೂನುಬಾಹಿರವಾಗಿ ಪರಿಹಾರ ನಿರಾಕರಿಸಲಾಗಿದೆ. ಇದು ಸಂವಿಧಾನದ 14, 19 (1) (ಜಿ) ಮತ್ತು 21ನೇ ವಿಧಿಯಡಿ ನೀಡಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ" ಎಂದು ತಿಳಿಸಲಾಗಿದೆ.

"ಪಿಎಂಎಫ್‌ಬಿವೈ ಅಡಿಯಲ್ಲಿ ಅನ್ಯಾಯಕ್ಕೊಳಗಾದ ರೈತರಿಗೆ ಸೂಕ್ತ ಬಾಕಿ ಹಣ ಒದಗಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ, ಇದು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಜೀವಿಸುವ ಮೂಲಭೂತ ಹಕ್ಕನ್ನು ನಿರಾಕರಿಸುತ್ತದೆ. ಹೀಗೆ ಮಾಡಿರುವುದರಿಂದ ರೈತರು ಸಂಪೂರ್ಣ ಆರ್ಥಿಕ ದುರ್ಬಲ ಸ್ಥಿತಿಗೆ ತಲುಪಿದ್ದಾರೆ. ಪರಿಣಾಮ ಕಳೆದ ಮೂರು ವರ್ಷಗಳಲ್ಲಿ ಶಹಾಪುರ ತಾಲ್ಲೂಕಿನಲ್ಲಿ 98 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ದೂರಲಾಗಿದೆ. ಜನವರಿ 13ಕ್ಕೆ ಪ್ರಕರಣದ ವಿಚಾರಣೆ ಮುಂದೂಡಲಾಗಿದೆ.