ಕೃಷಿಕ
ಕೃಷಿಕ 
ಸುದ್ದಿಗಳು

ಕೃಷಿ ಕಾಯಿದೆ ವಿರುದ್ಧ ಮತ್ತೊಂದು ಧ್ವನಿ: ಸುಪ್ರೀಂಕೋರ್ಟ್ ಮೊರೆ ಹೋದ ಭಾರತೀಯ ಕಿಸಾನ್ ಪಕ್ಷ

Bar & Bench

ಕೃಷಿ ಎಂಬುದು ರಾಜ್ಯಪಟ್ಟಿಯ ವಿಷಯವಾಗಿದ್ದು ಈ ಕುರಿತು ಕಾಯಿದೆ ರೂಪಿಸಲು ಸಂಸತ್ತಿಗೆ ಅಧಿಕಾರವಿಲ್ಲ. ಹೀಗಾಗಿ ಇತ್ತೀಚೆಗೆ ಅಂಗೀಕಾರವಾದ ಮೂರು ಕೃಷಿ ಕಾಯಿದೆಗಳು ಸಂವಿಧಾನಬಾಹಿರ ಎಂದು ಘೋಷಿಸುವಂತೆ ಭಾರತ ಕಿಸಾನ್ ಪಕ್ಷ ಸುಪ್ರೀಂಕೋರ್ಟನ್ನು ಕೋರಿದೆ.

ಸಂವಿಧಾನದ ಮೂಲರಚನೆಗೆ ವಿರುದ್ಧವಾಗಿ ಶಾಸನಗಳು ಅಂಗೀಕಾರವಾಗಿರುವುದನ್ನು ಪಕ್ಷ ಪ್ರಶ್ನಿಸಿದೆ. ಸಂವಿಧಾನದ 246ನೇ ವಿಧಿಯನ್ನು ಅರ್ಜಿಯಲ್ಲಿ ಉಲ್ಲೇಖಿಸುತ್ತಾ ಅರ್ಜಿಯಲ್ಲಿ ಹೀಗೆ ಹೇಳಲಾಗಿದೆ:

" ಪಟ್ಟಿ IIರಲ್ಲಿನ (ರಾಜ್ಯಪಟ್ಟಿ) ವಿಷಯಗಳಿಗೆ ಸಂಬಂಧಿಸಿದಂತೆ ಕಾಯಿದೆ ರೂಪಿಸುವ ವಿಶೇಷ ಅಧಿಕಾರ ರಾಜ್ಯ ಶಾಸಕಾಂಗಕ್ಕೆ ಇದ್ದು ಪಟ್ಟಿ Iರ (ಕೇಂದ್ರಪಟ್ಟಿ) ಅಡಿ ಬರುವ ವಿಷಯಗಳನ್ನು ಹೊರತುಪಡಿಸಿ ಮತ್ತು ಪಟ್ಟಿ III ರಡಿ (ಸಮವರ್ತಿ ಪಟ್ಟಿ) ಬರುವ ವಿಷಯಗಳಿಗೆ ಸಂಬಂಧಿಸಿದಂತೆ ಕಾಯಿದೆ ರೂಪಿಸುವ ಸಮವರ್ತಿ ಅಧಿಕಾರವನ್ನು ಸಹ ಹೊಂದಿದೆ. ಪಟ್ಟಿ I ಮತ್ತು ಪಟ್ಟಿ IIIರ ವಿಷಯಗಳ ಕುರಿತಂತೆ ಕೇಂದ್ರ ಶಾಸಕಾಂಗ ಪ್ರಭಾವಿ ಸ್ಥಾನ ಹೊಂದಿರುತ್ತದೆ."

ಕಾಯಿದೆ ರಚಿಸುವ ದೃಷ್ಟಿಯಿಂದ ಪಟ್ಟಿ 1 (ಕೇಂದ್ರಪಟ್ಟಿ) ಮತ್ತು ಪಟ್ಟಿ 2ರ (ರಾಜ್ಯಪಟ್ಟಿ) ವಿಷಯಗಳ ಬಗ್ಗೆ ಇರುವ ಅಧಿಕಾರ ವಿಶೇಷತೆಯನ್ನು ಸುಪ್ರೀಂಕೋರ್ಟ್ ತನ್ನ ತೀರ್ಪುಗಳಲ್ಲಿ ವಿವರಿಸಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಕಾಯಿದೆ ರಚಿಸುವ ದೃಷ್ಟಿಯಿಂದ ಪಟ್ಟಿ 1 (ಕೇಂದ್ರಪಟ್ಟಿ) ಮತ್ತು ಪಟ್ಟಿ 2ರ (ರಾಜ್ಯಪಟ್ಟಿ) ವಿಷಯಗಳ ಬಗ್ಗೆ ಇರುವ ಅಧಿಕಾರ ವಿಶೇಷತೆಯನ್ನು ಸುಪ್ರೀಂಕೋರ್ಟ್ ತನ್ನ ತೀರ್ಪುಗಳಲ್ಲಿ ವಿವರಿಸಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಕಾಯಿದೆಗಳ ಅಸಂಗತತೆಯನ್ನು ಕೂಡ ಪಕ್ಷ ಪ್ರಶ್ನಿಸಿದೆ. ಪಟ್ಟಿ 2ಕ್ಕೆ ಸಂಬಂಧಿಸಿದ ವಿಷಯಗಳೊಂದಿಗೆ ಕೇಂದ್ರದ ಕಾಯಿದೆ ವ್ಯವಹರಿಸುತ್ತಿದ್ದು ಅದು ಕೆಟ್ಟನಡೆ ಮತ್ತು ಸಂವಿಧಾನಕ್ಕೆ ಧಕ್ಕೆ ತರುವಂತಹುದು ಎಂದು ತಿಳಿಸಲಾಗಿದೆ. ಈ ವಿಷಯದಲ್ಲಿ ಸಂಸತ್ತಿನ ತಪ್ಪು ನಿಲುವನ್ನು ಗಮನಿಸುವಂತೆ ಸುಪ್ರೀಂಕೋರ್ಟಿಗೆ ಅರ್ಜಿಯಲ್ಲಿ ಕರೆ ನೀಡಲಾಗಿದೆ.

"... ಪ್ರಕರಣದಲ್ಲಿ ಪ್ರತಿವಾದಿಗಳು ಅಸಾಂವಿಧಾನಿಕ ಕ್ರಮಗಳನ್ನು ಕೈಗೊಂಡ ಬಳಿಕವೂ ಕೋರ್ಟ್ ಮೂಕ ಪ್ರೇಕ್ಷಕನಾಗಿರುವುದು ಸಾಧ್ಯವಿಲ್ಲ. ಸಂವಿಧಾನದ ಮೂಲರಚನೆಗೆ ಧಕ್ಕೆ ಒದಗಿದ್ದರೆ ಮಾನ್ಯ ನ್ಯಾಯಾಲಯ ನಿಷ್ಕ್ರಿಯ ಅಥವಾ ಋಣಾತ್ಮಕ ಪಾತ್ರ ಅಳವಡಿಸಿಕೊಂಡು ತಟಸ್ಥವಾಗಿ ಇಲ್ಲವೇ ಮೂಕಪ್ರೇಕ್ಷಕನಾಗಿ ಉಳಿಯುವುದು ಸಾಧ್ಯವಿಲ್ಲ” ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.

ಮುಂದುವರೆದು, ಶಾಸಕಾಂಗ ಅಂಗೀಕರಿಸಿದ ಕಾನೂನುಗಳ ಸಿಂಧುತ್ವವನ್ನು ಪರಿಶೀಲಿಸುವುದು ನ್ಯಾಯಾಂಗದ ಪಾತ್ರವಾಗಿದೆ. ಹಲವು ಮಹತ್ವದ ತೀರ್ಪುಗಳ ಹಿನ್ನೆಲೆಯಲ್ಲಿ ಸಂವಿಧಾನದ ಮೂಲರಚನೆಗೆ ಧಕ್ಕೆ ತರುವಂತಹ ಯಾವುದೇ ಕಾನೂನು ಅಥವಾ ಸಾಂವಿಧಾನಿಕ ತಿದ್ದುಪಡಿಯನ್ನು ಉಲ್ಲಂಘಿಸಿದರೆ ಅದನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರ್ಜಿ ತಿಳಿಸುತ್ತದೆ.

"ದೇಶದ ಸುಪ್ರೀಂಕೋರ್ಟ್ ಸಂವಿಧಾನದ ರಕ್ಷಕನಾಗಿದ್ದು, ಭಾರತದ ಉನ್ನತ ನ್ಯಾಯಾಂಗದ ಪ್ರಮುಖ ಕೆಲಸವೆಂದರೆ ಕಾಯಿದೆಯ ಉಪಯುಕ್ತತೆ ಮತ್ತು ಸಿಂಧುತ್ವವನ್ನು ಪರಿಶೀಲಿಸುವುದಾಗಿದೆ."
ಭಾರತ ಕಿಸಾನ್ ಪಕ್ಷದ ಅರ್ಜಿ

ಅರ್ಜಿಯನ್ನು ವಕೀಲ ಸಂಜೀವ್ ಮಲ್ಹೋತ್ರಾ ಅವರ ಮೂಲಕ ಸಲ್ಲಿಸಲಾಗಿದೆ.