ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಒಪ್ಪಿಗೆ ಪಡೆದ ಕೃಷಿ ಕಾಯಿದೆಗಳಿಗೆ ರಾಷ್ಟ್ರಪತಿ ಅಂಕಿತ ಹಾಕಿದ ಬೆನ್ನಿಗೇ ಕೇರಳದ ಕಾಂಗ್ರೆಸ್ ಸಂಸದರೊಬ್ಬರು ಕಾಯಿದೆಗಳ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಬೆಲೆ ಭರವಸೆಗೆ ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಮತ್ತು ಕೃಷಿ ಸೇವಾ ಕಾಯಿದೆ-2020 ಇದಕ್ಕೆ ಮೊದಲ ಸವಾಲು ಎದುರಾಗಿದ್ದು, ಕೇಳರದ ತ್ರಿಶ್ಯೂರ್ ನ ಸಂಸದ ಟಿ ಎನ್ ಪ್ರತಾಪನ್ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.
ಬೆಲೆ ಒಪ್ಪಂದ ಮತ್ತು ಕೃಷಿ ಸೇವಾ ಕಾಯಿದೆಯ ನಿಬಂಧನೆಗಳು ಮತ್ತು ಅದಕ್ಕೆ ಸಂಬಂಧಿಸಿದ ಅಧಿಸೂಚನೆಗಳು ಕಾನೂನು ಬಾಹಿರ, ಅಸಾಂವಿಧಾನಿಕ ಮತ್ತು ಅನೂರ್ಜಿತ ಎಂದು ಘೋಷಿಸುವಂತೆ ಪ್ರತಾಪನ್ ಮನವಿ ಮಾಡಿದ್ದಾರೆ. ಸದರಿ ಕಾಯಿದೆಯು ಭಾರತೀಯ ಸಂವಿಧಾನದ ಪರಿಚ್ಛೇದ 14, 15 ಮತ್ತು 21ರ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಇದು ಅಸಾಂವಿಧಾನಿಕ, ಕಾನೂನು ಬಾಹಿರ ಮತ್ತು ಅನೂರ್ಜಿತ ಎಂದು ಘೋಷಿಸಬೇಕು ಎಂದು ಕೋರಿದ್ದಾರೆ.
ಸಂಸತ್ತಿನಲ್ಲಿ ಆತುರದಲ್ಲಿ ಅಗತ್ಯ ಚರ್ಚೆ ನಡೆಸದೇ ರೈತರ ಕಾನೂನುಗಳಿಗೆ ಒಪ್ಪಿಗೆ ಸೂಚಿಸಲಾಗಿದೆ. “ನಿಬಂಧನೆಗಳನ್ನು ಮೇಲ್ನೋಟಕ್ಕೆ ಓದಿದರೂ ಇದು ಪ್ರಗತಿಪರ ಕಾನೂನು ಎನಿಸುವುದಿಲ್ಲ” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಸದರಿ ಕಾಯಿದೆಯು ಅನಿಯಂತ್ರಿತ ಪರ್ಯಾಯ ಮಾರುಕಟ್ಟೆಗೆ ಅವಕಾಶ ಮಾಡಿಕೊಡುವುದರಿಂದ ರೈತರ ಶೋಷಣೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
“... ಕೇಂದ್ರ ಸರ್ಕಾರವು ಅನಿಯಂತ್ರಿತ ಪರ್ಯಾಯ ಮಾರುಕಟ್ಟೆಗೆ ಅವಕಾಶ ಮಾಡಿಕೊಡುವುದರಿಂದ ರೈತರ ಶೋಷಣೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈಗಿರುವ ಮಾದರಿಯಲ್ಲಿ ಸದರಿ ಕಾನೂನು ಜಾರಿಗೊಳಿಸಿದರೆ ಅದು ರೈತ ಸಮುದಾಯಕ್ಕೆ ವಿನಾಶಕಾರಿಯಾಗಲಿದೆ. ಇದು ಕೆಲವೇ ಕೆಲವು ಕಾರ್ಪೊರೇಟ್‌ಗಳು/ವ್ಯಕ್ತಿಗಳು, ಬಹುರಾಷ್ಟ್ರೀಯ ಕಂಪೆನಿಗಳು, ಲೇವಾದೇವಿದಾರರನ್ನು ಸಶಕ್ತಗೊಳಿಸಲಿದ್ದು, ರೈತರ ಹಿತಕ್ಕೆ ವಿರುದ್ಧವಾಗಿದೆ.”
ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿ
ವಕೀಲ ಆಶೀಷ್ ಜಾರ್ಜ್ ಅವರು ಅರ್ಜಿಯನ್ನು ಸಿದ್ಧಪಡಿಸಿದ್ದು ವಕೀಲ ಜೇಮ್ಸ್ ಪಿ ಥಾಮಸ್ ಮೂಲಕ ಸಲ್ಲಿಸಿದ್ದಾರೆ.