ಮುಂಗಾರು ಅಧಿವೇಶನದಲ್ಲಿ ಸಂಸತ್ತು ಅಂಗೀಕರಿಸಿದ ವಿವಾದಾತ್ಮಕ ಕೃಷಿ ಕಾಯಿದೆಗಳ ವಿರುದ್ಧ ಕೇರಳದ ತ್ರಿಶ್ಯೂರಿನ ಕಾಂಗ್ರೆಸ್ ಸಂಸದರ ಬಳಿಕ ಇದೀಗ, ಡಿಎಂಕೆ ರಾಜ್ಯಸಭಾ ಸದಸ್ಯ ತಿರುಚ್ಚಿ ಶಿವ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಹೊಸದಾಗಿ ಅಂಗೀಕಾರಗೊಂಡ ಈ ಮೂರು ಕಾಯಿದೆಗಳನ್ನು ಸಂಸದರು ಪ್ರಶ್ನಿಸಿದ್ದಾರೆ:
2020ರ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯಿದೆ
2020ರ ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಒಪ್ಪಂದ ಕಾಯಿದೆ
2020ರ ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ
ಕಾಯಿದೆಗಳು "ಕಾನೂನುಬಾಹಿರ ಮತ್ತು ಸಂಪೂರ್ಣವಾಗಿ ಅಸಾಂವಿಧಾನಿಕ" ಎಂಬ ನೆಲೆಯಲ್ಲಿ ಇವುಗಳನ್ನು ಪ್ರಶ್ನಿಸಲಾಗಿದೆ. ದೊಡ್ಡ ಕಾರ್ಪೊರೇಟ್ ಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೋವಿಡ್ ಸಾಂಕ್ರಾಮಿಕ ಹರಡಿರುವ ಸಂದರ್ಭದಲ್ಲಿಯೇ ಕೃಷಿಕ ವಿರೋಧಿ ಮತ್ತು ರೈತ ವಿರೋಧಿ ಕಾಯಿದೆಗಳನ್ನು ಜಾರಿಗೆ ತರಲಾಗಿದೆ ಎಂದು ಆಕ್ಷೇಪಿಸಿ ಅರ್ಜಿ ಸಲ್ಲಿಸಲಾಗಿದೆ.
ಅರ್ಜಿಯಲ್ಲಿರುವುದೇನು?
ಕೃಷಿ ವಿಷಯ ರಾಜ್ಯಪಟ್ಟಿಯಲ್ಲಿದ್ದರೂ ಕೇಂದ್ರ ಸರ್ಕಾರ ಎರಡು ರೈತ ಕಾನೂನುಗಳನ್ನು ಜಾರಿಗೆ ತಂದಿದೆ. ಅಂತೆಯೇ ಇದು ಒಕ್ಕೂಟ ರಾಷ್ಟ್ರ ಮತ್ತು ಸಂವಿಧಾನದ 246ನೇ ವಿಧಿಗೆ ವಿರುದ್ಧವಾಗಿದೆ.
ಜೊತೆಗೆ ಅಗತ್ಯ ವಸ್ತುಗಳ ತಿದ್ದುಪಡಿ ಕಾಯಿದೆಗೆ 2020ರಲ್ಲಿ ತಿದ್ದುಪಡಿ ತಂದಿರುವುದು ಮುಖ್ಯ ಕಾಯಿದೆಯಲ್ಲಿ ಹೇಳಲಾದ ಅಗತ್ಯ ಸರಕುಗಳ ಉತ್ಪಾದನೆ, ಸರಬರಾಜು, ಮತ್ತು ವಿತರಣೆಯ ಉದ್ದೇಶ ಮತ್ತು ಗುರಿಗಳಿಗೆ ಹೊಂದಾಣಿಕೆಯಾಗುತ್ತಿಲ್ಲ.
ತಿದ್ದುಪಡಿ ಮೂಲಕ ಕಾರ್ಪೊರೇಟ್ ಗಳಿಗೆ ಅನುಕೂಲವಾಗುವಂತೆ ಕಾಯಿದೆಯನ್ನು ಸಡಿಲಗೊಳಿಸಲಾಗಿದೆ.
ರೈತರಿಗೆ ಉಪಯುಕ್ತ ಎನ್ನಲಾಗಿರುವ ಕಾನೂನುಗಳು ವಾಸ್ತವವಾಗಿ ಶಾಸನಗಳ ಮೂಲಕ ರೈತರಿಗೆ ಒದಗಿಸಲಾಗಿದ್ದ ಮೂಲಭೂತ ಹಕ್ಕುಗಳು ಮತ್ತು ರಕ್ಷಣೆಯನ್ನು ಕಿತ್ತುಕೊಳ್ಳುವ ಸಾಮರ್ಥ್ಯ ಹೊಂದಿವೆ.
ಕನಿಷ್ಠ ಬೆಂಬಲ ಬೆಲೆಯ ನಿಬಂಧನೆ ತೆಗೆದುಹಾಕಿ ಎಲ್ಲರಿಗೂ ಮಾರುಕಟ್ಟೆ ಪ್ರವೇಶಿಸಲು ಅನುಕೂಲ ಮಾಡಿಕೊಟ್ಟಿರುವುದರಿಂದ ದೊಡ್ಡ ಕುಳಗಳಿಂದ ರೈತರು ಶೋಷಣೆಗೆ ಗುರಿಯಾಗುತ್ತಾರೆ.
ಖಾಸಗಿ ಮಂಡಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದ್ದು ಅದು ಸರ್ಕಾರದ ನಿಯಂತ್ರಣದಲ್ಲಿಯೂ ಇಲ್ಲ ಮತ್ತು ತೆರಿಗೆ ವ್ಯಾಪ್ತಿಗೂ ಒಳಪಡುವುದಿಲ್ಲ.
ಇದರಿಂದಾಗಿ ಕಾಯಿದೆಗಳು ಜಾರಿಗೆ ಬರುವ ಮುನ್ನ ರೈತರ ಪಾಲಿಗೆ ಲಭ್ಯ ಇದ್ದ ಸಂಧಾನ ಮಾಡುವ ಅವಕಾಶವೂ ತಪ್ಪಿ ಹೋಗಿದೆ.
ಕನಿಷ್ಠ ಬೆಂಬಲ ಬೆಲೆ ಎಂಬುದು ರೈತರಿಗೆ ನಿರ್ಣಾಯಕ ಅಂಶವಾಗಿದ್ದು ಇದನ್ನು ತೆಗೆದುಹಾಕಿದರೆ ರೈತರು ಕೃಷಿ ಮಾರುಕಟ್ಟೆಯ ನಿಯಮಗಳು ಮತ್ತು ಬೆಲೆಗಳನ್ನು ನಿಯಂತ್ರಿಸುವ ದೊಡ್ಡ ಸಂಸ್ಥೆಗಳ ಮತ್ತು ಕುಳಗಳ ಮರ್ಜಿಗೆ ಒಳಗಾಗಬೇಕಾಗುತ್ತದೆ.
ರೈತರಿಂದ ಮಾರುಕಟ್ಟೆ ಬೇಡಿಕೆ ಮತ್ತು ಸರಬರಾಜು ಶಕ್ತಿಗಳನ್ನು ನಿಯಂತ್ರಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದ್ದು ಇದರಿಂದ ಖಾಸಗಿ ಘಟಕಗಳು ಬಡ ರೈತರನ್ನು ಶೋಷಿಸುವ ಯುಗ ಆರಂಭವಾಗಿದೆ. ಇದರಿಂದ ರೈತರು ಅನ್ಯಾಯದ ಒಪ್ಪಂದಗಳಿಗೆ ತಮ್ಮನ್ನು ಒಡ್ಡಿಕೊಳ್ಳದೇ ಬೇರೆ ವಿಧಿ ಇಲ್ಲದಂತಾಗಿದೆ.
ಇವು ಕ್ರೋನಿ ಬಂಡವಾಳಶಾಹಿಗಳಿಂದ ರೂಪುಗೊಂಡ ಮತ್ತು ಶಾಸನಬದ್ಧ ನೆರವು ಪಡೆದ ಕಾಯಿದೆಗಳು.
ಇವು ಸಂವಿಧಾನದ 14, 21, 23ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು ಅಸಾಂವಿಧಾನಿಕ, ಕಾನೂನುಬಾಹಿರ ಮತ್ತು ಅನೂರ್ಜಿತಗೊಳಿಸಬಹುದಾದ ಕಾಯಿದೆಗಳಾಗಿವೆ.
ಹಿರಿಯ ವಕೀಲ ಪಿ ವಿಲ್ಸನ್ ಮತ್ತು ವಕೀಲ ಡಿ ಕುಮಾನನ್ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ.