ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ಜರುತ್ತಿರುವಾಗಲೇ ಕುಂಭಮೇಳದ ಭಕ್ತರು ಸ್ನಾನ ಮಾಡುವ ನದಿ ನೀರಿನಲ್ಲಿ ಕೊಳಚೆ ನೀರಿನ ಮಾಲಿನ್ಯದ ಸೂಚಕವಾದ ಫೀಕಲ್ ಕೊಲಿಫಾರ್ಮ್ ಪ್ರಮಾಣ ಹೆಚ್ಚಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ತಿಳಿಸಿದೆ.
ಫೀಕಲ್ ಕೊಲಿಫಾರ್ಮ್ ಮಟ್ಟ ಹೆಚ್ಚಿರುವುದು ಪತ್ತೆಯಾಗಿದ್ದು ನದಿಗಳ ನೀರು ಸ್ನಾನಕ್ಕೆ ಸೂಕ್ತವಲ್ಲ ಎಂದು ಎನ್‌ಜಿಟಿ ಪ್ರಧಾನ ಪೀಠಕ್ಕೆ ಸಿಪಿಸಿಬಿ ಸಲ್ಲಿಸಿರುವ ವರದಿ ತಿಳಿಸಿದೆ. ಧಾರ್ಮಿಕ ಉತ್ಸವಕ್ಕೆ ಹೆಚ್ಚಿನ ಯಾತ್ರಿಕರು ಆಗಮಿಸಿ ನದಿಯಲ್ಲಿ ಸ್ನಾನ ಮಾಡುವುದರಿಂದ, ನೀರಿನಲ್ಲಿ ಕೊಳಚೆಯ ಸಾಂದ್ರತೆ ಹೆಚ್ಚಿದೆ ಎಂದು ಅದು ಹೇಳಿದೆ.
ನದಿ ನೀರಿನ ಗುಣಮಟ್ಟ ಸೂಚಿಸುವ ಜೀವರಾಸಾಯನಿಕ ಆಮ್ಲಜನಕದ ಬೇಡಿಕೆಯು ಜನವರಿಯಲ್ಲಿ ನಡೆಸಿದ ಪರೀಕ್ಷೆಗಳ ಸಮಯದಲ್ಲಿ ಸ್ನಾನ ಮಾಡಲು ಅಗತ್ಯವಾದ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದಿರುವ ವರದಿಯನ್ನು ನ್ಯಾಯಮಂಡಳಿ ಅಧ್ಯಕ್ಷ ನ್ಯಾ.ಪ್ರಕಾಶ್ ಶ್ರೀವಾಸ್ತವ , ನ್ಯಾಯಾಂಗ ಸದಸ್ಯ ನ್ಯಾ. ಸುಧೀರ್ ಅಗರ್‌ವಾಲ್ ಮತ್ತು ತಜ್ಞ ಸದಸ್ಯ ಡಾ. ಎ ಸೆಂಥಿಲ್‌ವೇಲ್ ಅವರಿದ್ದ ಪೀಠ ದಾಖಲಿಸಿಕೊಂಡಿದೆ.
ಪ್ರಯಾಗ್‌ರಾಜ್‌ನ ಗಂಗಾ ಮತ್ತು ಯಮುನಾ ನದಿ ಸಂಗಮಿಸುವ ಕ್ಷೇತ್ರದಲ್ಲಿ ಕುಂಭಮೇಳ ನಡೆಯುತ್ತದೆ. ಎರಡೂ ನದಿಗಳ ನೀರಿನ ಮಟ್ಟದ ಬಗ್ಗೆ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸಿಪಿಸಿಬಿ ವರದಿ ನೀಡಿದೆ. ಮಾಘ ಮೇಳ ಮತ್ತು ಕುಂಭ ಮೇಳದ ಸಮಯದಲ್ಲಿ ಸಂಸ್ಕರಿಸದ ಕೊಳಚೆ ನೀರನ್ನು ಎರಡೂ ನದಿಗಳಿಗೆ ಚರಂಡಿಗಳ ಮೂಲಕ ಬಿಡಲಾಗುತ್ತಿದೆ ಎಂಬ ಆರೋಪಗಳನ್ನು ಸಹ ಈ ಪ್ರಕರಣ ಒಳಗೊಂಡಿದೆ.
ಮಹಾ ಕುಂಭ ಮೇಳದಲ್ಲಿ ಮೇಲ್ವಿಚಾರಣಾ ಕೇಂದ್ರಗಳ ಸಂಖ್ಯೆ ಮತ್ತು ನೀರಿನ ಪರೀಕ್ಷಾ ಆವರ್ತನ ಹೆಚ್ಚಿಸುವಂತೆ ಎನ್‌ಜಿಟಿ ಈ ಹಿಂದೆ ಸಿಪಿಸಿಬಿ ಮತ್ತು ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಯುಪಿ ಪಿಸಿಬಿ) ನಿರ್ದೇಶನ ನೀಡಿತ್ತು. ಮಂಡಳಿಗಳು ಸಂಶೋಧನಾ ವರದಿಗಳನ್ನು ತನ್ನೆದುರು ಸಲ್ಲಿಸುವಂತೆಯೂ ಎನ್‌ಜಿಟಿ ನಿರ್ದೇಶಿಸಿತ್ತು.
ಸಿಪಿಸಿಬಿ ಈ ಆದೇಶವನ್ನು ಪಾಲಿಸಿದ್ದರೂ, ಯುಪಿ ಪಿಸಿಬಿ ನಿರ್ದೇಶನದಂತೆ ಯಾವುದೇ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸಿಲ್ಲ ಎಂದು ಎನ್‌ಜಿಟಿ ತಿಳಿಸಿದೆ. ಆದಾಗ್ಯೂ, ಯುಪಿ ಪಿಸಿಬಿಯ ಕೇಂದ್ರ ಪ್ರಯೋಗಾಲಯ ಸಲ್ಲಿಸಿದ ಕೆಲವು ನೀರಿನ ಪರೀಕ್ಷಾ ವರದಿಗಳು ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಮಟ್ಟದ ಫೀಕಲ್ ಕೋಲಿಫಾರ್ಮ್ ಕಂಡುಬಂದಿವೆ ಎಂದು ಹೇಳಿವೆ.
ವರದಿ ಪರಿಶೀಲಿಸಿ ಪ್ರತಿಕ್ರಿಯೆ ಸಲ್ಲಿಸಲು ಉತ್ತರ ಪ್ರದೇಶ ಸರ್ಕಾರಿ ವಕೀಲರಿಗೆ ಎನ್‌ಜಿಟಿ ಫೆಬ್ರವರಿ 17 ರಂದು ಒಂದು ದಿನದ ಕಾಲಾವಕಾಶ ನೀಡಿತು.
ಇಂದು (ಫೆಬ್ರವರಿ 19) ವಿಚಾರಣೆ ಮುಂದುವರೆಯಲಿದ್ದು ಈ ಸಂದರ್ಭದಲ್ಲಿ, ಪ್ರಯಾಗ್‌ರಾಜ್‌ನ ಗಂಗಾ ನದಿಯಲ್ಲಿ ನೀರಿನ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ಇರುವ ಯುಪಿ ಪಿಸಿಬಿ ಸದಸ್ಯ ಕಾರ್ಯದರ್ಶಿ ಮತ್ತು ಸಂಬಂಧಿತ ಸರ್ಕಾರಿ ಅಧಿಕಾರಿಗಳು ವರ್ಚುವಲ್ ವಿಧಾನದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಿದೆ.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]