Karnataka State Bar Council
Karnataka State Bar Council 
ಸುದ್ದಿಗಳು

ವಕೀಲ ಗುಮಾಸ್ತರಿಗೆ ಹಣಕಾಸು ನೆರವು: ನೂತನ ಸಮಿತಿ ಖಾತೆ ತೆರೆಯುವುದನ್ನು ಖಾತ್ರಿಪಡಿಸಿಕೊಳ್ಳಿ ಎಂದ ಕರ್ನಾಟಕ ಹೈಕೋರ್ಟ್

Bar & Bench

ವಕೀಲ ಗುಮಾಸ್ತರಿಗೆ ಧನಸಹಾಯ ಮಾಡಲು ಕರ್ನಾಟಕ ವಕೀಲರ ಕಲ್ಯಾಣ ನಿಧಿ ಕಾಯಿದೆ- 1983ರ ಸೆಕ್ಷನ್ 4 (1)ರ ಅಡಿ ರಚಿಸಲಾದ ಸಮಿತಿಯು ನಿಗದಿತ ಬ್ಯಾಂಕಿನಲ್ಲಿ ಖಾತೆ ತೆರೆಯುವಂತೆ ನೋಡಿಕೊಳ್ಳಬೇಕು ಎಂದು ಈ ವಾರದ ಆರಂಭದಲ್ಲಿ, ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನ್ಯಾಯಾಲಯ ಈ ಹಿಂದೆ ನೀಡಿದ್ದ ನಿರ್ದೇಶನದಂತೆ ಸಮಿತಿ ರಚಿಸಲಾಗಿತ್ತು. ವಕೀಲ ಗುಮಾಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ರೂ 10 ಲಕ್ಷವನ್ನು ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಈ ಖಾತೆಗೆ ವರ್ಗಾಯಿಸುವ ಉದ್ದೇಶದಿಂದ ʼರಾಜ್ಯ ನೋಂದಾಯಿತ ಗುಮಾಸ್ತರ ಕಲ್ಯಾಣ ನಿಧಿʼ ಹೆಸರಿನಲ್ಲಿ ಕೂಡಲೇ ಬ್ಯಾಂಕ್‌ ಖಾತೆ ತೆರೆಯುವಂತೆ ಸೂಚಿಸಿತ್ತು.

ಸಮಿತಿಯ ಸದಸ್ಯರು ನಿರ್ಧರಿಸಿದಂತೆ ನಿಗದಿತ ಬ್ಯಾಂಕಿನಲ್ಲಿ ಖಾತೆ ತೆರೆಯುವುದನ್ನು ರಾಜ್ಯ ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಖಾತೆ ತೆರೆಯುವ ಬಗ್ಗೆ ಮಾಹಿತಿ ವಿವರಗಳೊಂದಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಕಳುಹಿಸಬೇಕು. ನಿಧಿಯ ಖಾತೆ ವಿವರಗಳನ್ನು ಸ್ವೀಕರಿಸಿದ ನಂತರ, ಪರಿಷತ್ತು ಈ ನಿಧಿಯ ಖಾತೆಗೆ ರೂ 10 ಲಕ್ಷ ಮೊತ್ತ ವರ್ಗಾಯಿಸುತ್ತದೆ ”ಎಂದು ನ್ಯಾಯಾಲಯ ಆದೇಶಿಸಿದೆ.

ಇದಲ್ಲದೆ, ಅಡ್ವೊಕೇಟ್ ಜನರಲ್ ಅವರನ್ನು ಡ್ರಾಯಿಂಗ್ ಆಫೀಸರ್‌ ಮತ್ತು ವಿತರಣಾ ಅಧಿಕಾರಿಯಾಗಿ ನೇಮಿಸುವ ಕುರಿತಂತೆ ಜುಲೈ 12ರಂದು ತೆಗೆದುಕೊಂಡ ನಿರ್ಧಾರವನ್ನು ಮಾರ್ಪಡಿಸಲು ಸಮಿತಿ ಮುಕ್ತವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಹೇಳಿದೆ.

ಕೋವಿಡ್‌ ಸಾಂಕ್ರಾಮಿಕದಿಂದಾಗಿ ರಾಜ್ಯದ ವಕೀಲ ಗುಮಾಸ್ತರಿಗೆ ಹಣಕಾಸಿನ ನೆರವು ಕೋರಿ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳನ್ನು ನ್ಯಾಯಾಲಯ ಆಲಿಸಿತು. ಪ್ರಕರಣದ ವಿಚಾರಣೆ ವೇಳೆ, ರಾಜ್ಯದ ಪರವಾಗಿ ಹಾಜರಾದ ಸರ್ಕಾರಿ ವಕೀಲರು, 1983ರ ಕಾಯಿದೆಯಡಿ ಸಮಿತಿಯನ್ನು ರಚಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಅದರಂತೆ, ನ್ಯಾಯಾಲಯವು ತನ್ನ ಆದೇಶದಲ್ಲಿ “ಕರ್ನಾಟಕ ನೋಂದಾಯಿತ ಗುಮಾಸ್ತರನ್ನು ನಿರ್ವಹಣೆಗಾಗಿ ರೂಪುಗೊಂಡಿರುವ ಕರ್ನಾಟಕ ವಕೀಲರ ಕಲ್ಯಾಣ ನಿಧಿ ಕಾಯಿದೆ- 1983ರ ಸೆಕ್ಷನ್ 4ರ ಉಪವಿಭಾಗ (1) ರ ಅಡಿಯಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಹೆಚ್ಚುವರಿ ಸರ್ಕಾರಿ ವಕೀಲರು ಹೇಳುತ್ತಾರೆ. 1983ರ ಕಾಯಿದೆಯ ಸೆಕ್ಷನ್ 27ರ ಅಡಿಯಲ್ಲಿ ಸ್ಥಾಪಿಸಲಾದ ಕಲ್ಯಾಣ ನಿಧಿಯಿಂದ ಪಡೆದ ಹಣವನ್ನು ಹೂಡಿಕೆ ಮಾಡಲು ಸಮಿತಿಯು ಯಾವುದೇ ನಿಗದಿತ ಬ್ಯಾಂಕಿನಲ್ಲಿ ಖಾತೆ ತೆರೆಯಬೇಕಾಗುತ್ತದೆ” ಎಂದು ದಾಖಲಿಸಿಕೊಂಡಿದೆ. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 3ಕ್ಕೆ ನಿಗದಿಯಾಗಿದೆ.