Himanta Biswa Sarma with Gauhati High Court 
ಸುದ್ದಿಗಳು

ವಿಭಜನಕಾರಿ ಪ್ರವೃತ್ತಿ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಭಾಷಣದ ಬಗ್ಗೆ ಗುವಾಹಟಿ ಹೈಕೋರ್ಟ್‌ ಅಸಮಾಧಾನ, ನೋಟಿಸ್‌ ಜಾರಿ

ಅರ್ಜಿದಾರರು ಉಲ್ಲೇಖಿಸಿದ ಶರ್ಮಾ ಅವರ ಭಾಷಣಗಳು "ವಿಭಜನಾ ಪ್ರವೃತ್ತಿಯನ್ನು" ತೋರಿಸುತ್ತವೆ ಎಂದು ಅಭಿಪ್ರಾಯಪಟ್ಟ ಪೀಠ.

Bar & Bench

ಮಹತ್ವದ ಬೆಳವಣಿಗೆಯೊಂದರಲ್ಲಿ, ಮುಸ್ಲಿಂ ಸಮುದಾಯದ ವಿರುದ್ಧ ಪದೇ ಪದೇ ದ್ವೇಷ ಭಾಷಣ ಮಾಡಿದ್ದಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ (ಸಿಎಂ) ಹಿಮಂತ ಬಿಸ್ವಾ ಶರ್ಮಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಸಂಬಂಧ ಗುವಾಹಟಿ ಹೈಕೋರ್ಟ್ ಗುರುವಾರ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಅರ್ಜಿದಾರರು ಉಲ್ಲೇಖಿಸಿದ ಶರ್ಮಾ ಅವರ ಭಾಷಣಗಳು "ವಿಭಜನಾ ಪ್ರವೃತ್ತಿಯನ್ನು" ತೋರಿಸುತ್ತವೆ ಎಂದ ಮುಖ್ಯ ನ್ಯಾಯಮೂರ್ತಿ ಅಶುತೋಷ್ ಕುಮಾರ್ ಮತ್ತು ನ್ಯಾಯಮೂರ್ತಿ ಅರುಣ್ ದೇವ್ ಚೌಧರಿ ಅವರಿದ್ದ ವಿಭಾಗೀಯ ಪೀಠ, ಶರ್ಮಾ ಮತ್ತು ಕೇಂದ್ರ ಮತ್ತು ಅಸ್ಸಾಂ ಸರ್ಕಾರಗಳಿಗೆ ನೋಟಿಸ್‌ ನೀಡಿತು.

ಇದಕ್ಕೂ ಮುನ್ನ ಸುದೀರ್ಘವಾಗಿ ವಾದ ಆಲಿಸಿದ ನ್ಯಾಯಾಲಯ ಏಪ್ರಿಲ್‌ನಲ್ಲಿ ಪ್ರಕರಣದ ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಸಿ ಯು ಸಿಂಗ್ ಹಾಗೂ ಮೀನಾಕ್ಷಿ ಅರೋರಾ ವಾದ ಮಂಡಿಸಿದರು. ಶರ್ಮಾ ಅವರು ತಾವು ಮುಖ್ಯಮಂತ್ರಿಯಾಗಿ ಮಾಡಿದ್ದ ಪ್ರತಿಜ್ಞಾವಿಧಿಯನ್ನು ಉಲ್ಲಂಘಿಸಿದ್ದಾರೆ. ಸಂವಿಧಾನದ ವಿಧಿ 14, 15 ಹಾಗೂ ಪ್ರಸ್ತಾವನೆಯ ಧರ್ಮನಿರಪೇಕ್ಷತೆ ಮತ್ತು ಸೌಹಾರ್ದತಾ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ದೂರಿದರು.

"ಮಿಯಾ" ಎಂಬ ಪದವನ್ನು ಮುಸ್ಲಿಮರನ್ನು ಅವಹೇಳನಕಾರಿಯಾಗಿ ಸಂಬೋಧಿಸಲು ಬಳಸಿರುವುದನ್ನು ನ್ಯಾಯಾಲಯದ ಗಮನಕ್ಕೆ ಅರ್ಜಿದಾರರ ಪರ ವಕೀಲರು ತಂದರು. ಆ ಮೂಲಕ ನಿರ್ದಿಷ್ಟ ಸಮುದಾಯಕ್ಕೆ ಸಂದೇಶ ರವಾನಿಸಿರುವ ಬಗ್ಗೆ ತಿಳಿಸಲಾಯಿತು. "ಮಿಯಾ ಮುಸ್ಲಿಮರನ್ನು ಇಲ್ಲಿ ಮತಚಲಾಯಿಸಲು ಬಿಡಬಾರದು, ಅವರ ಮತದಾನದ ಹಕ್ಕು ಬಾಂಗ್ಲಾದೇಶದಲ್ಲಿದೆ" ಎಂದು ಹೇಳಿರುವುದನ್ನು ಪೀಠಕ್ಕೆ ವಿವರಿಸಲಾಯಿತು.

ಹಿರಿಯ ವಕೀಲ ಸಿಂಘ್ವಿ ಅವರು, "ಶರ್ಮಾ ಅವರು ಮಿಯಾ ಮುಸ್ಲಿಮರ ಮತಗಳನ್ನು ಕದಿಯವುದಾಗಿ ತಿಳಿಸಿದ್ದು, ಅವರಲ್ಲಿ ಅನೇಕರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುವುದು," ಎಂದು ಹೇಳಿರುವುದನ್ನು ಪೀಠದ ಗಮನಕ್ಕೆ ತಂದರು.

ಇಷ್ಟೇ ಅಲ್ಲದೆ, ಶರ್ಮಾ ಅವರು ಇಬ್ಬರು ಮುಸ್ಲಿಂ ವ್ಯಕ್ತಿಗಳ ಚಿತ್ರಗಳಿಗೆ ಗುಂಡು ಹಾರಿಸುವ ರೀತಿಯ ಆನಿಮೇಟೆಡ್‌ ವಿಡಿಯೋವೊಂದನ್ನು ಸಹ ಬಿಜೆಪಿಯ ಅಧಿಕೃತ ಖಾತೆಯಿಂದ ಹಂಚಿಕೊಂಡದ್ದು ವಿವಾದಕ್ಕೆ ಕಾರಣವಾಗಿತ್ತು.

ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ, ಅಸ್ಸಾಂನ ವಿದ್ವಾಂಸ ಹಿರೇನ್ ಗೊಹೈನ್ ಹಾಗೂ ಸಿಪಿಎಂ ಸೇರಿದಂತೆ ಹಲವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್‌ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತ್ತು. ಹೈಕೋರ್ಟ್‌ಗೇ ಮೊದಲು ಅರ್ಜಿ ಸಲ್ಲಿಸುವಂತೆ ಆಗ ಅದು ಸೂಚಿಸಿತ್ತು.