Kunal Kamra and Bombay High Court 
ಸುದ್ದಿಗಳು

ಐಟಿ ನಿಯಮಾವಳಿ: ಸತ್ಯ ಪರಿಶೀಲನಾ ಘಟಕ ಪತ್ತೆ ಹಚ್ಚಿದ ಸುಳ್ಳು ಸುದ್ದಿ ಸ್ವಯಂಚಾಲಿತವಾಗಿ ನಿರ್ಬಂಧವಾಗದು ಎಂದ ಕೇಂದ್ರ

ಸುಳ್ಳು ಮತ್ತು ತಪ್ಪುದಾರಿಗೆಳೆಯುವ ವಿಷಯ ಎಂದು ಸತ್ಯ ಪರಿಶೀಲನಾ ಘಟಕ ತಿಳಿಸಿದರೆ ಬಾಧಿತ ವ್ಯಕ್ತಿ ಕಾನೂನು ಪರಿಹಾರ ಪಡೆಯಲು ಅರ್ಹನಾಗುತ್ತಾನೆ. ಅಂತಹ ವಿವಾದದ ಅಂತಿಮ ತೀರ್ಪುಗಾರ ನ್ಯಾಯಾಲಯವೇ ಆಗಿರುತ್ತದೆ ಎಂದಿದೆ ಸರ್ಕಾರ.

Bar & Bench

ತಿದ್ದುಪಡಿ ಮಾಡಲಾದ ಮಾಹಿತಿ ತಂತ್ರಜ್ಞಾನ ನಿಯಮಾವಳಿ- 2021ರ ಅಡಿಯಲ್ಲಿ ಯಾವುದೇ ಮಾಹಿತಿಯನ್ನು ಸತ್ಯ ಪರಿಶೀಲನಾ ಘಟಕ (ಎಫ್‌ಸಿಯು) ಸುಳ್ಳು ಮತ್ತು ತಪ್ಪುದಾರಿಗೆಳೆಯುವುದು ಎಂದ ಮಾತ್ರಕ್ಕೆ ಆ ಮಾಹಿತಿಯನ್ನುಯ ಸ್ವಯಂಚಾಲಿತವಾಗಿ ತೆಗೆದು ಹಾಕಲು ಕಾರಣವಾಗದು ಎಂದು ಕೇಂದ್ರ ಸರ್ಕಾರ ಮಂಗಳವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ಯಾವುದೇ ಸಾಮಾಜಿಕ ಮಾಧ್ಯಮ ಮಧ್ಯಸ್ಥ ಸಂಸ್ಥೆ ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಮಾಹಿತಿ ಕುರಿತು ಸೂಚನೆ ನೀಡಿದರೆ, ವಿಷಯವನ್ನು ಪರಿಶೀಲಿಸಿದ ನಂತರ ಅದನ್ನು ಸಾಮಾಜಿಕ ಮಾಧ್ಯಮದ ಪ್ರಕಟಣೆಯಿಂದ ತೆಗೆದುಹಾಕಬಹುದು ಅಥವಾ ಮುಂದುವರೆಸಬಹುದು ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

"ನಿಯಮ 3(1)(b)(v) ಅಡಿಯಲ್ಲಿ ಕೇಂದ್ರ ಸರ್ಕಾರದ ಸತ್ಯ ಪರಿಶೀಲನಾ ಘಟಕ ಆಕ್ಷೇಪಾರ್ಹ ಮಾಹಿತಿ ಗುರುತಿಸುವಿಕೆಯು ಮಧ್ಯಸ್ಥ ಸಂಸ್ಥೆಯ ಮೇಲೆ ಯಾವುದೇ ನಿರ್ಬಂಧಿತ ಪರಿಣಾಮ ಬೀರುವುದಿಲ್ಲ ಅಥವಾ ಐಟಿ ಕಾಯಿದೆಯ ಸೆಕ್ಷನ್ 69ಎ ಅಡಿಯಲ್ಲಿ ಪರಿಗಣಿಸಿದಂತೆ ಅಂತಹ ಮಾಹಿತಿ/ವಿಷಯವನ್ನು ನಿರ್ಬಂಧಿಸುವ ನಿರ್ದೇಶನದ ಸ್ವರೂಪದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಅಫಿಡವಿಟ್‌ ಒತ್ತಿ ಹೇಳಿದೆ.

ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ಸಂಸ್ಥೆಗಳಿಗೆ ಮಾರ್ಗಸೂಚಿ ಮತ್ತು ಡಿಜಿಟಲ್‌ ಮಾಧ್ಯಮ ನೀತಿ ಸಂಹಿತೆ) ನಿಯಮಾವಳಿ 2021ರ ನಿಬಂಧನೆಗಳಿಗೆ ಮಾಡಲಾಗಿದ್ದ ಇತ್ತೀಚಿನ ತಿದ್ದುಪಡಿಗಳನ್ನು ಪ್ರಶ್ನಿಸಿ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಅವರು ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ಅಫಿಡವಿಟ್ ಸಲ್ಲಿಸಲಾಗಿದೆ.

ಸುಳ್ಳು ಮತ್ತು ತಪ್ಪುದಾರಿಗೆಳೆಯುವ ವಿಷಯ ಎಂದು ಸತ್ಯ ಪರಿಶೀಲನಾ ಘಟಕ ತಿಳಿಸಿದರೆ ಬಾಧಿತ ವ್ಯಕ್ತಿ ಕಾನೂನು ಪರಿಹಾರ ಪಡೆಯಲು ಅರ್ಹನಾಗುತ್ತಾನೆ. ಅಂತಹ ವಿವಾದದ ಅಂತಿಮ ತೀರ್ಪುಗಾರ ನ್ಯಾಯಾಲಯವೇ ಆಗಿರುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಜುಲೈ 6ರಂದು ಪ್ರಕರಣದ ವಿಚಾರಣೆ ನಡೆಯಲಿದೆ.