Rajiv Gandhi with MF Hussain Indian Express
ಸುದ್ದಿಗಳು

ಯೆಸ್ ಬ್ಯಾಂಕ್‌ ಕ್ಷೇಮಕ್ಕಾಗಿ ಪ್ರಿಯಾಂಕಾ ಗಾಂಧಿ ಅವರಿಂದ ಕಲಾಕೃತಿ ಖರೀದಿ: ರಾಣಾ ಕಪೂರ್

ಕಲಾಕೃತಿ ಮಾರಾಟದಿಂದ ಬಂದ ಹಣವನ್ನು ನ್ಯೂಯಾರ್ಕ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವೈದ್ಯಕೀಯ ಚಿಕಿತ್ಸೆಗಾಗಿ ಬಳಸಲಾಗಿದೆ ಎಂದು ಮಿಲಿಂದ್ ದೇವ್ರಾ ತನಗೆ ತಿಳಿಸಿರುವುದಾಗಿ ಕಪೂರ್ ಹೇಳಿದ್ದಾರೆ.

Bar & Bench

ಯೆಸ್‌ ಬ್ಯಾಂಕ್‌ಗೆ ಅಹಿತಕರ ಸ್ಥಿತಿ ಉಂಟಾಗುವುದನ್ನು ತಪ್ಪಿಸಲು 2010ರಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಂದ ಕಲಾವಿದ ಎಂಎಫ್ ಹುಸೇನ್ ಅವರ ವರ್ಣಚಿತ್ರವನ್ನು ₹ 2 ಕೋಟಿಗೆ ಖರೀದಿಸುವುದಕ್ಕೆ ಕಾರಣವಾಯಿತು ಎಂದು ಬ್ಯಾಂಕ್‌ ಸಂಸ್ಥಾಪಕ ರಾಣಾ ಕಪೂರ್ ಜಾರಿ ನಿರ್ದೇಶನಾಲಯಕ್ಕೆ (ಇಡಿ) ತಿಳಿಸಿದ್ದಾರೆ.

ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ಗೆ (ಡಿಎಚ್‌ಎಫ್‌ಎಲ್) ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಕುರಿತು ಇ ಡಿ ಸಲ್ಲಿಸಿದ ಪೂರಕ ಆರೋಪಪಟ್ಟಿಯಲ್ಲಿ ಅವರು ಈ ಹೇಳಿಕೆ ನೀಡಿದ ಉಲ್ಲೇಖವಿದೆ.

Priyanka Gandhi, Milind Deora and Rana Kapoor

ಡಿಎಚ್‌ಎಫ್‌ಎಲ್‌ನ ಡಿಬೆಂಚರ್‌ಗಳಲ್ಲಿ ಬ್ಯಾಂಕ್‌ನಿಂದ ₹3,700 ಕೋಟಿಗಳ ಹೂಡಿಕೆ ಮಾಡಿದ ಪ್ರಕರಣದಲ್ಲಿ ಡಿಎಚ್‌ಎಫ್‌ಎಲ್‌ನಿಂದ ಅನಗತ್ಯ ಹಣದ ಲಾಭವ ಪಡೆದಿದ್ದಾರೆ ಮತ್ತು ಡಿಎಚ್‌ಎಫ್‌ಎಲ್‌ ಪ್ರವರ್ತಕರಲ್ಲಿ ಒಬ್ಬರಿಂದ ₹600 ಕೋಟಿ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪ ಕಪೂರ್‌ ಅವರ ಮೇಲಿದೆ.

ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಕಪೂರ್ , ಮಾಜಿ ಕಾಂಗ್ರೆಸ್ ನಾಯಕ ದಿವಂಗತ ಮುರಳಿ ದೇವ್ರಾ ಅವರ ಪುತ್ರ ಮಿಲಿಂದ್ ದೇವ್ರಾ ಅವರೊಂದಿಗಿನ ತಮ್ಮಒಡನಾಟವನ್ನು ಕೂಡ ಜಾರಿ ನಿರ್ದೇಶನಾಲಯಕ್ಕೆ ವಿವರಿಸಿದ್ದಾರೆ.

ಕಲಾವಿದ ಎಂಎಫ್ ಹುಸೇನ್ ಅವರ ವರ್ಣಚಿತ್ರವನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಮಾರಾಟ ಮಾಡಿದ ಸಂದರ್ಭದಲ್ಲಿ ಮಾತ್ರ ತನಗೆ ದೇವ್ರಾ ಅವರೊಂದಿಗೆ ನಂಟಿತ್ತು ಎಂಬುದಾಗಿ ಅವರು ವಿವರಿಸಿದ್ದಾರೆ. ಈ ವ್ಯವಹಾರವನ್ನು ʼಒತ್ತಾಯಪೂರ್ವಕ ಮಾರಾಟʼ ಎಂದು ಬಣ್ಣಿಸಿದ್ದಾರೆ.

“ಈ ಒಪ್ಪಂದ ತಪ್ಪಿಸಲು ನಾನು ಸಾಕಷ್ಟು ಯತ್ನಿಸಿದೆನಾದರೂ ಮುರಳಿ ದೇವ್ರಾ ಮತ್ತು ಮಿಲಿಂದ್ ದೇವ್ರಾ ತ್ವರಿತವಾಗಿ ವಹಿವಾಟು ಮುಗಿಸಲು ಅಸಾಧಾರಣ ರೀತಿಯಲ್ಲಿ ಪಟ್ಟು ಹಿಡಿದರು. (ಸಭೆಯೊಂದು ನಡೆದಾಗ) ದಿ. ಮುರಳಿ ದೇವ್ರಾ ಅವರು ಕಲಾಕೃತಿ ಖರೀದಿಸುವಲ್ಲಿ ವಿಳಂಬ ಉಂಟಾದರೆ ಅದು ತಮ್ಮ ಮೇಲೆ ಮತ್ತು ಯೆಸ್‌ ಬ್ಯಾಂಕ್‌ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಬಹುದು. ಇದರಿಂದ ದೇವ್ರಾ ಕುಟುಂಬದೊಂದಿಗಿನ ನಿಮ್ಮ ಸಂಬಂಧ ಅಪಾಯಕ್ಕೀಡಾಗಬಹುದು ಎಂದು ಕಠೋರವಾಗಿ ಹೇಳಿದರು. ಅಲ್ಲದೆ ಹಾಗೆ ಮಾಡದಿದ್ದರೆ ಗಾಂಧಿ ಕುಟುಂಬದೊಂದಿಗೆ ನಂಟು ಬೆಳೆಸಿಕೊಳ್ಳಲು ಕೂಡ ಸಾಧ್ಯವಾಗದು” ಎಂದರು ಎಂಬುದಾಗಿ ವಿವರಿಸಿದ್ದಾರೆ.

Rana Kapoor - ED Page 1
Rana Kapoor - ED Page 2
Rana Kapoor - ED Page 3

“ಇದರಿಂದ ಹಿಂದೆ ಸರಿದರೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪುರಸ್ಕಾರ ದಕ್ಕುವುದಿಲ್ಲ ಎಂದು ದೇವ್ರಾ ಹೇಳಿದ್ದರು. ಎರಡು ಶಕ್ತಿಶಾಲಿ ಕುಟುಂಬಗಳನ್ನು ಎದುರುಹಾಕಿಕೊಳ್ಳಲು ಬಯಸದೇ ಒಪ್ಪಂದ ಮುಂದುವರೆಸಿದೆ. ಮಿಲಿಂದ್‌ ದೇವ್ರಾ ಅವರ ನೇತೃತ್ವದಲ್ಲಿ ಅಂತಿಮ ಸಭೆ ನಡೆಯಿತು. ಈ ಒಪ್ಪಂದಕ್ಕಾಗಿ ನಾನು ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿನ ನನ್ನ ವೈಯಕ್ತಿಕ ಖಾತೆಯ ಚೆಕ್ ಮೂಲಕ ₹2 ಕೋಟಿಗಳನ್ನು ಪಾವತಿಸಿದ್ದೆ” ಎಂದು ಅವರು ಹೇಳಿದ್ದಾರೆ.

ಕೆಲವು ವಾರಗಳ ಬಳಿಕ ಕಲಾಕೃತಿ ಮಾರಾಟದಿಂದ ಬಂದ ಹಣವನ್ನು ನ್ಯೂಯಾರ್ಕ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವೈದ್ಯಕೀಯ ಚಿಕಿತ್ಸೆಗಾಗಿ ಬಳಸಲಾಗಿದೆ ಎಂದು ಮಿಲಿಂದ್ ನನಗೆ ತಿಳಿಸಿದರು ಎಂಬುದಾಗಿ ಕಪೂರ್‌ ಹೇಳಿದ್ದಾರೆ.

ತರುವಾಯ, ಸೋನಿಯಾ ಗಾಂಧಿಯವರ ನಿಕಟವರ್ತಿ ಅಹ್ಮದ್ ಪಟೇಲ್ ಕೂಡ “ಸೂಕ್ತ ಸಮಯದಲ್ಲಿ ಗಾಂಧಿ ಕುಟುಂಬವನ್ನು ಬೆಂಬಲಿಸಿದ್ದಕ್ಕಾಗಿ ಪದ್ಮಭೂಷಣ ಪ್ರಶಸ್ತಿಗೆ ತಮ್ಮ ಹೆಸರನ್ನು ಪರಿಗಣಿಸಲಾಗುವುದು” ಎಂದರು. ಆದರೆ ತಮಗೆಂದಿಗೂ ಪ್ರಶಸ್ತಿ ದೊರೆಯಲಿಲ್ಲ ಈ ವಿಚಾರದಲ್ಲಿ ಮೋಸಹೋಗಿದ್ದಾಗಿ ಆರೋಪಪಟ್ಟಿಯಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

ಸಕಾಲಕ್ಕೆ ಸೋನಿಯಾ ಗಾಂಧಿಯವರ ವೈದ್ಯಕೀಯ ಚಿಕಿತ್ಸೆಗೆ ಒದಗಿಬಂದದ್ದಕ್ಕಾಗಿ ತಮ್ಮ ಹೆಸರನ್ನು ಪದ್ಮಭೂಷಣಕ್ಕೆ ಪರಿಗಣಿಸಲಾಗುವುದು ಎಂದು ನನಗೆ ತಿಳಿಸಲಾಯಿತು.
ಜಾರಿ ನಿರ್ದೇಶನಾಲಯಕ್ಕೆ ರಾಣಾ ಕಪೂರ್‌

ಹುಸೇನ್‌ ಕಲಾಕೃತಿಯನ್ನು ₹ 2 ಕೋಟಿಗೆ ಖರೀದಿಸಿದ ಕುರಿತಂತೆ ಪ್ರಿಯಾಂಕಾ ಅವರು ಕಪೂರ್‌ ಅವರಿಗೆ ಬರೆದಿದ್ದರೆನ್ನಲಾದ ಹಳೆಯ ಪತ್ರವನ್ನು ಬಿಜೆಪಿ ನಾಯಕ ಆರ್‌ ಪಿ ಸಿಂಗ್‌ ಈ ಹಿಂದೆ ಬಹಿರಂಗಪಡಿಸಿದ್ದು ಇದು ಕಪೂರ್‌ ಅವರ 2020ರ ಹೇಳಿಕೆಯನ್ನು ದೃಢಪಡಿಸುತ್ತದೆ.

ಹೇಳಿಕೆಯನ್ನು ರಾಜಕೀಯ ಸೇಡಿನ ಕ್ರಮ ಎಂದು ಕರೆದಿರುವ ಕಾಂಗ್ರೆಸ್ ಸದಸ್ಯರು ಕಪೂರ್ ಹಲವು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಆರೋಪಿಯಾಗಿರುವುದರಿಂದ ಅವರ ಹೇಳಿಕೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.