ಗರ್ಭಧಾರಣೆ ಮುಂದುವರಿಸಲು ಒತ್ತಾಯಿಸುವುದು ಆಕೆಯ ದೈಹಿಕ ಸ್ವಾಯತ್ತತೆ ಮತ್ತು ಸಮಗ್ರತೆಯನ್ನು ಉಲ್ಲಂಘಿಸುತ್ತದೆ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಸಾನ್ಯಾ ಭಾಸಿನ್ ಮತ್ತು ರಾಜ್ಯ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .
ಗರ್ಭಧಾರಣೆ, ತನ್ನ ದೇಹದ ಮೇಲಿನ ನಿಯಂತ್ರಣ, ಸಂತಾನೋತ್ಪತ್ತಿ ಹಾಗೂ ತಾಯ್ತನದ ಆಯ್ಕೆ ಬಗೆಗಿನ ನಿರ್ಧಾರ ಕೈಗೊಳ್ಳುವುದನ್ನು ಮಹಿಳೆಗೇ ಬಿಡಬೇಕು ಎಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಹೇಳಿದರು.
“ಮಹಿಳೆಗೆ ಗರ್ಭಧಾರಣೆ ಮುಂದುವರಿಸುವ ಇಚ್ಛೆ ಇಲ್ಲದಿದ್ದರೆ, ಆಕೆಯನ್ನು ಅದಕ್ಕಾಗಿ ಬಲವಂತಗೊಳಿಸುವುದು ಆಕೆಯ ದೇಹಾತ್ಮಕ ಸಮಗ್ರತೆಯ ಉಲ್ಲಂಘನೆಯಾಗಿದ್ದು, ಆಕೆಗೆ ಮಾನಸಿಕ ಆಘಾತ ಹೆಚ್ಚಿಸುತ್ತದೆ. ಇದು ಆಕೆಯ ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಇದಲ್ಲದೆ, ʼಸ್ತ್ರೀದ್ವೇಷದಿಂದ ಕೂಡಿರುವ ಈ ಸಮಾಜದ ಕಠಿಣ ವಾಸ್ತವವನ್ನು ನಿರ್ಲಕ್ಷಿಸಲಾಗುವುದಿಲ್ಲ ಮತ್ತು ವೈವಾಹಿಕ ಸಮಸ್ಯೆ ಎದುರಿಸುತ್ತಿರುವ ಮಹಿಳೆ ಗರ್ಭಿಣಿಯಾಗಿದ್ದರೆ ಆಕೆಯ ಮಾನಸಿಕ ಆಘಾತ ಹೆಚ್ಚಾಗುತ್ತದೆ” ಎಂದು ಅದು ಹೇಳಿದೆ.
“ಆಕೆ ತನ್ನ ಬದುಕಿಗಾಗಿ ಸ್ವತಃ ಹೋರಾಡಬೇಕಾದ ಪರಿಸ್ಥಿತಿಗೆ ತಲುಪುತ್ತಾಳೆ. ಬಹುತೇಕ ಸಂದರ್ಭಗಳಲ್ಲಿ ಯಾವುದೇ ಮೂಲದಿಂದಲೂ ಬೆಂಬಲವಿಲ್ಲದೆ, ಮಗುವನ್ನು ಒಬ್ಬಳೇ ಬೆಳೆಸುವ ಹೊಣೆಗಾರಿಕೆ ಆಕೆಯ ಮೇಲೆಯೇ ಬೀಳುತ್ತದೆ. ಇಲ್ಲಿ ತೊಂದರೆ ಅನುಭವಿಸುವುದು ಮಹಿಳೆಯೇ. ಇಂತಹ ಗರ್ಭಧಾರಣೆ, ದುಸ್ತರ ಕಷ್ಟಗಳನ್ನು ತಂದೊಡ್ಡಿ, ಗಂಭೀರವಾದ ಮಾನಸಿಕ ಆಘಾತಕ್ಕೆ ಕಾರಣವಾಗುತ್ತದೆ,” ಎಂದು ನ್ಯಾಯಾಲಯ ತಿಳಿಸಿದೆ.
ಗರ್ಭಪಾತ ಮಾಡಿಸಿಕೊಂಡಿದ್ದಕ್ಕಾಗಿ ಐಪಿಸಿ ಸೆಕ್ಷನ್ 312ರ ಅಡಿಯಲ್ಲಿ ಮಹಿಳೆಯ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿದ ಪೀಠ ಈ ವಿಚಾರ ತಿಳಿಸಿತು.
ಮಹಿಳೆಯ 14 ವಾರಗಳ ಗರ್ಭಧಾರಣೆಯನ್ನು ತನ್ನ ಒಪ್ಪಿಗೆಯಿಲ್ಲದೆ ಅಂತ್ಯಗೊಳಿಸಿದ್ದಾಳೆ ಎಂದು ಆರೋಪಿಸಿ ಆಕೆಯ ಪರಿತ್ಯಕ್ತ ಪತಿ ಕ್ರಿಮಿನಲ್ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ, ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮಹಿಳೆಗೆ ಸಮನ್ಸ್ ಜಾರಿ ಮಾಡಿದತ್ತು. ಈ ಆದೇಶವನ್ನು ಸೆಷನ್ಸ್ ನ್ಯಾಯಾಲಯ ಎತ್ತಿಹಿಡಿದಿತ್ತು.
ಆದರೆ ಈ ಆದೇಶಗಳನ್ನು ರದ್ದುಪಡಿಸಿರುವ ಹೈಕೋರ್ಟ್ ವೈದ್ಯಕೀಯ ಮೇಲ್ವಿಚಾರಣೆಯಡಿ ಕಾನೂನುಬದ್ಧವಾಗಿ ಮಾಡಲಾಗಿರುವ ಗರ್ಭಪಾತವನ್ನು ಅಪರಾಧೀಕರಿಸುವುದು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾಗಿರುವ ಹಕ್ಕಿನ ಉಲ್ಲಂಘನೆಗೆ ಸಮ ಎಂದಿದೆ.
ಭ್ರೂಣದ ಹಕ್ಕುಗಳನ್ನು ಮಹಿಳೆಯ ಹಕ್ಕುಗಳಿಗಿಂತ ಮಿಗಿಲು ಎಂಬ ಪತಿಯ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು. ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು, ಮಾನವ ಹಕ್ಕುಗಳನ್ನು ಗರ್ಭಧಾರಣೆಯ ಕ್ಷಣದಿಂದಲ್ಲ, ಜನನದಿಂದ ಗುರುತಿಸುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
"ಹುಟ್ಟಲಿರುವ ಭ್ರೂಣವನ್ನು ಜೀವಂತ ಮಹಿಳೆಯ ಹಕ್ಕಿಗಿಂತ ಮಿಗಿಲಾಗಿ ಕಾಣಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ವೈದ್ಯಕೀಯ ಗರ್ಭಪಾತ ಕಾಯಿದೆಯ (ಎಂಟಿಪಿ ಕಾಯ್ದೆ) ದರಕ್ಷನ್‌ಗಳ ಪ್ರಕಾರ ಗರ್ಭಪಾತ ಕಾನೂನುಬದ್ಧವಾಗಿದ್ದು ಐಪಿಸಿಯ ಸೆಕ್ಷನ್ 312 ರ ಅಡಿಯಲ್ಲಿ ಯಾವುದೇ ಅಪರಾಧದ ಅಂಶ ಕಂಡುಬಂದಿಲ್ಲ ಎಂದ ಪೀಠ ಪ್ರಕರಣ ರದ್ದುಗೊಳಿಸಿತು.