Election commission of India and SC  
ಸುದ್ದಿಗಳು

ರಾಜಕೀಯ ಪಕ್ಷಗಳ ಉಚಿತ ಕೊಡುಗೆ: ಪ್ರಸ್ತಾವಿತ ತಜ್ಞರ ಸಮಿತಿಯಿಂದ ಹೊರಗುಳಿಯಲು ನಿರ್ಧರಿಸಿದ ಚುನಾವಣಾ ಆಯೋಗ

ಕಳೆದ ವಿಚಾರಣೆ ವೇಳೆ ನ್ಯಾಯಾಲಯ ಮಾಡಿದ ಮೌಖಿಕ ಅವಲೋನಗಳು “ ವರ್ಷಗಳ ಕಾಲದ ಈ ಸಂಸ್ಥೆಯ ಪ್ರತಿಷ್ಠೆಗೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡಿವೆ” ಎಂದು ಇಸಿಐ ಹೇಳಿದೆ.

Bar & Bench

ರಾಜಕೀಯ ಪಕ್ಷಗಳ ಉಚಿತ ಕೊಡುಗೆ ವಿಚಾರವಾಗಿ ರಚಿಸಲಾಗುತ್ತಿರುವ ತಜ್ಞರ ಸಮಿತಿಯ ಭಾಗವಾಗುವುದು ಸಾಂವಿಧಾನಿಕ ಸಂಸ್ಥೆಯಾಗಿರುವ ತನಗೆ ಸೂಕ್ತವಲ್ಲ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಇತ್ತೀಚೆಗೆ, ಚುನಾವಣಾ ವೇಳೆ ಮತದಾರರಿಗೆ ಉಚಿತ ಕೊಡುಗೆಗಳ ಆಮಿಷ ಒಡ್ಡುವ ರಾಜಕೀಯ ಪಕ್ಷಗಳ ನೋಂದಣಿ ರದ್ದುಗೊಳಿಸುವಂತೆ ಕೋರಿ ವಕೀಲ ಮತ್ತು ಬಿಜೆಪಿ ವಕ್ತಾರ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಮನವಿಯಲ್ಲಿ ಪ್ರಸ್ತಾಪಿಸಲಾದ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರ, ವಿರೋಧ ಪಕ್ಷಗಳ ಸದಸ್ಯರು, ಇಸಿಐ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಾಗೂ ಇತರ ಭಾಗೀದಾರರನ್ನೊಳಗೊಂಡ ಪರಿಣಿತ ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.

ತಜ್ಞರ ಸಮಿತಿಯಲ್ಲಿ ಸಚಿವಾಲಯಗಳು ಅಥವಾ ಸರ್ಕಾರಿ ಸಂಸ್ಥೆಗಳು ಇದ್ದರೆ. ತಾನು ಅಂತಹ ಸಮಿತಿಯ ಭಾಗವಾಗುವುದಿಲ್ಲ ಎಂದು ಇಸಿಐ ಹೇಳಿದೆ. "ತಜ್ಞರ ಸಮಿತಿಯಲ್ಲಿ ಸಚಿವಾಲಯಗಳು ಅಥವಾ ಸರ್ಕಾರಿ ಸಂಸ್ಥೆಗಳು ಇದ್ದರೆ ಅಲ್ಲಿ ಸಾಂವಿಧಾನಿಕ ಸಂಸ್ಥೆಯಗಿರುವ ತಾನು ಭಾಗಿಯಾಗುವುದು ಸೂಕ್ತವಲ್ಲ. ಮುಂದೆ ದೇಶದಲ್ಲಿ ನಿರಂತರ ಚುನಾವಣೆಗಳಿದ್ದು ಬಹು ಸದಸ್ಯ ಸಮಿತಿಯಲ್ಲಿ ನಡೆಯುವ ಚರ್ಚೆಯ ವೇಳೆ ಯಾವುದೇ ಅಭಿಪ್ರಾಯ,/ ದೃಷ್ಟಿಕೋನ/ ಹೇಳಿಕೆ ನೀಡುವುದರಿಂದ ಸಮಸ್ಯೆಯನ್ನು ಮೊದಲೇ ನಿರ್ಧರಿಸುವಂತಾಗಿ ಸಮಾನ ಸ್ಪರ್ಧೆಗೆ ತೊಂದರೆ ಎದುರಾಗಬಹುದು” ಎಂದು ಅದು ಪ್ರತಿಕ್ರಿಯೆಯಲ್ಲಿ ವಿವರಿಸಿದೆ.

ರಾಜಕೀಯ ಪಕ್ಷಗಳ ಉಚಿತ ಕೊಡುಗೆ ಕುರಿತಂತೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳದೇ ಇದ್ದುದರಿಂದಾಗಿ ಸುಪ್ರೀಂ ಕೋರ್ಟ್‌ ಪ್ರಕರಣವನ್ನು ವಿಚಾರಣೆ ನಡೆಸುವಂತಾಗಿದೆ ಎಂದು ಸಿಜೆಐ ಎನ್‌ ವಿ ರಮಣ ಹಿಂದಿನ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿದ್ದರು. ಆದರೆ ಈ ಅವಲೋಕನಗಳು “ವರ್ಷಗಳಿಂದ ಗಳಿಸಲಾದ ಸಂಸ್ಥೆಯ ಪ್ರತಿಷ್ಠೆಗೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡಿವೆ” ಎಂದು ಇಸಿಐ ಹೇಳಿದೆ. ತನ್ನ ವರ್ಚಸ್ಸಿಗೆ ಈ ಪ್ರಮಾಣದಲ್ಲಿ ಧಕ್ಕೆ ತಂದಿರುವುದು ಪ್ರಜಾಪ್ರಭುತ್ವದ ವಿಚಾರದಲ್ಲಿ ಕಿರಿಯ ದೇಶವಾದರೂ ವಿಶ್ವದ ಅತಿ ದೊಡ್ಡ ಮತ್ತು ಸ್ಥಿರ ಪ್ರಜಾಪ್ರಭುತ್ವ ಹೊಂದಿರುವ ಭಾರತಕ್ಕೆ ಒಳಿತಾಗದು ಎಂದು ಅದು ಪ್ರತಿಕ್ರಿಯಿಸಿದೆ.

ಆದರೂ ಚುನಾವಣಾ ಪ್ರಕ್ರಿಯೆ ಪರಿಶುದ್ಧವಾಗಿರಬೇಕು ಎಂಬ ಕಾರಣಕ್ಕೆ ತಜ್ಞರ ಸಮಿತಿ ರಚಿಸುತ್ತಿರುವುದನ್ನು ಚುನಾವಣಾ ಆಯೋಗ ಸ್ವಾಗತಿಸಿದೆ. ಇದೇ ವೇಳೆ ಕೆಲವು ಸಮುದಾಯಗಳ ದುರ್ಬಲತೆ ನೀಗುವಲ್ಲಿ ನೀತಿ ನಿರೂಪಣೆಯ ಅಂಗವಾಗಿರುವ ಉಚಿತ ಕೊಡುಗೆ ಅಥವಾ ವಿನಾಯಿತಿ ನೀಡುವಿಕೆ ಅಥವಾ ಪರಿಸ್ಥಿತಿ/ವಲಯ-ನಿರ್ದಿಷ್ಟ ಪರಿಹಾರದ ಇತರ ಉಪಯುಕ್ತತೆಯನ್ನು ಗೌಣಗೊಳಿಸಲಾಗದು ಎಂದು ಕೂಡ ಅದು ಹೇಳಿದೆ.

ಉದಾಹರಣೆಗೆ, ನೈಸರ್ಗಿಕ ವಿಪತ್ತುಗಳು/ಸಾಂಕ್ರಾಮಿಕ ಸಮಯದಲ್ಲಿ, ಜೀವರಕ್ಷಕ ಔಷಧ, ಆಹಾರ, ನಿಧಿ ಇತ್ಯಾದಿಗಳನ್ನು ಒದಗಿಸುವುದು. ಜೀವನ ಮತ್ತು ಆರ್ಥಿಕ ರಕ್ಷಣೆಯಾಗಿರಬಹುದು. ಆದರೆ ಸಾಮಾನ್ಯ ಅವಧಿಯಲ್ಲಿ ಇದನ್ನು "ಉಚಿತ ಕೊಡುಗೆ" ಎಂದು ಕರೆಯಬಹುದು ಎಂದು ಉತ್ತರದಲ್ಲಿ ಹೇಳಲಾಗಿದೆ.

ಹೀಗಾಗಿ, ಚುನಾವಣಾ ಸಮಯದಲ್ಲಿ ಸಮಾನ ಸ್ಪರ್ಧೆ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುವ ಉಚಿತ ಕೊಡುಗೆ ಕುರಿತು ಸಮಗ್ರ ದೃಷ್ಟಿಕೋನ ತೆಗೆದುಕೊಳ್ಳುವ ಅವಶ್ಯಕತೆ ಇದೆ ಎಂದಿರುವ ಇಸಿಐ ಸಾಮಾನ್ಯವಾಗಿ ರಾಜಕೀಯ ಪಕ್ಷಗಳು/ಅಭ್ಯರ್ಥಿಗಳು ಚುನಾವಣೆಗೆ ಸುಮಾರು ಒಂದು ವರ್ಷದ ಮೊದಲು ಪ್ರಚಾರ ಪ್ರಾರಂಭಿಸುತ್ತಾರೆ ಮತ್ತು ಸದನದ ಅವಧಿ ಮುಗಿಯುವ ಆರು ತಿಂಗಳ ಮೊದಲು ಪ್ರಚಾರವನ್ನು ಹೆಚ್ಚು ತೀವ್ರಗೊಳಿಸುತ್ತಾರೆ. ಇಂತಹ ಸಂದರ್ಭದಲ್ಲಿ ಉಚಿತ ಕೊಡುಗೆ ನಿಷೇಧಿಸಿದರೆ ರಾಜಕೀಯ ಪಕ್ಷಗಳು ನಕಾರಾತ್ಮಕ ಹೇಳಿಕೆಗಳನ್ನು ನೀಡಿ ಚುನಾವಣೆಯ ನಂತರದ ಅನುಷ್ಠಾನಕ್ಕಿಂತಲೂ ಹೆಚ್ಚಿನ ಪ್ರಚಾರ ಮತ್ತು ಮೈಲೇಜ್‌ ಪಡೆಯುತ್ತವೆ ಎಂದು ಇಸಿಐ ಆತಂಕ ವ್ಯಕ್ತಪಡಿಸಿದೆ.

“ವಾಸ್ತವದಲ್ಲಿ ಪ್ರಚಾರದ ಭಾವನಾತ್ಮಕ ವಿಶ್ಲೇಷಣೆ ಆಧರಿಸಿ ನಿಷೇಧಿಸಿದ ಉಚಿತ ಕೊಡುಗೆ ಘೋಷಣೆಯನ್ನು ಕ್ರಿಯಾತ್ಮಕವಾಗಿ ತೀವ್ರಗೊಳಿಸುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು” ಎಂದು ಅದು ವಾದಿಸಿದೆ.