Gauhati High Court 
ಸುದ್ದಿಗಳು

ಅತ್ಯಾಚಾರ ಪ್ರಕರಣ: ಡಿಎನ್‌ಎ ಪರೀಕ್ಷೆಗೆ ವಿರೋಧಿಸಿದ್ದ ಆರೋಪಿ ಅಂತಿಮವಾಗಿ ಖುಲಾಸೆಗೊಂಡಿದ್ದು ಹೇಗೆ?

ಆರೋಪಿ 2023ರಲ್ಲಿ ಡಿಎನ್ಎ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ್ದರು. ಆದರೆ ಪರೀಕ್ಷೆಗೆ ಒಳಗಾಗುವಂತೆ ಹೈಕೋರ್ಟ್ ಅವರಿಗೆ ಆದೇಶಿಸಿತ್ತು. ಪರೀಕ್ಷೆಗೊಳಪಟ್ಟ ಆರೋಪಿಗೆ ಅದುವೇ ವರವಾಯಿತು.

Bar & Bench

ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆಗೆ ಜನಿಸಿದ ಮಗುವಿನ ತಂದೆಯಲ್ಲ ಎಂದು ಡಿಎನ್‌ಎ (ಡಿಆಕ್ಸಿರೈಬೊನ್ಯೂಕ್ಲಿಕ್ ಆಸಿಡ್‌) ಪರೀಕ್ಷೆಯಲ್ಲಿ  ಬಹಿರಂಗವಾದ ಹಿನ್ನೆಲೆಯಲ್ಲಿ ಆತ ತಪ್ಪಿತಸ್ಥ ಎಂದು ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಮೂರು ವರ್ಷಗಳ ಬಳಿಕ ಗುವಾಹಟಿ ಹೈಕೋರ್ಟ್ ರದ್ದುಪಡಿಸಿ ಆರೋಪಿಯನ್ನು ಖುಲಾಸೆಗೊಳಿಸಿದೆ [ಸುದೀಪ್ ಬಿಸ್ವಾಸ್ @ ಬುರಾ ಮತ್ತು ದಿ ಸ್ಟೇಟ್ ಆಫ್ ಅಸ್ಸಾಂ ಇನ್ನಿತರರ ನಡುವಣ ಪ್ರಕರಣ].

ಕುತೂಹಲಕಾರಿ ಅಂಶವೆಂದರೆ, ಅಪರಾಧಿ ಸುದೀಪ್ ಬಿಸ್ವಾಸ್ 2023ರಲ್ಲಿ ಡಿಎನ್ಎ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ್ದರು. ಆದರೆ ಪರೀಕ್ಷೆಗೆ ಒಳಗಾಗುವಂತೆ ಹೈಕೋರ್ಟ್ ಅವರಿಗೆ ಆದೇಶಿಸಿತ್ತು , ವೈಯಕ್ತಿಕ ಗೌಪ್ಯತೆ ಎಂಬುದು ಸತ್ಯವನ್ನು ಕಂಡುಹಿಡಿಯುವ ಉದ್ದೇಶಕ್ಕೆ ದಾರಿ ಮಾಡಿಕೊಡಬೇಕು ಎಂದು ಹೇಳಿತ್ತು.

ಶಿಕ್ಷೆ ಪ್ರಶ್ನಿಸಿ ಅವರು ಸಲ್ಲಿಸಿದ್ದ ಮೇಲ್ಮನವಿಯ ಅಂತಿಮ ತೀರ್ಪಿನಲ್ಲಿ, ನ್ಯಾಯಮೂರ್ತಿ ಮೈಕೆಲ್ ಜೋಥನ್‌ಖುಮಾ ಮತ್ತು ನ್ಯಾಯಮೂರ್ತಿ ಅಂಜನ್ ಮೋನಿ ಕಲಿತಾ ಅವರಿದ್ದ ವಿಭಾಗೀಯ ಪೀಠ , ಪರೀಕ್ಷೆಯ ನಂತರ, ಬಿಸ್ವಾಸ್ ಮಗುವಿನ ತಂದೆಯಲ್ಲ ಎಂದು ಕಂಡುಬಂದಿದೆ ಎಂಬುದಾಗಿ ತಿಳಿಸಿತು.

2023 ಅಕ್ಟೋಬರ್ 10ರಂದು ಆರೋಪಿಯ ಶಿಕ್ಷೆ ಅಮಾನತು ಮಾಡಲು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್‌ ಡಿಎನ್‌ಎ ಪರೀಕ್ಷೆ ಮಾಡದೇ ಬಿಡುಗಡೆಗೊಳಿಸುವುದು ಸರಿಯಲ್ಲ ಎಂದಿತ್ತು. ಅದಾದ ಒಂದು ವರ್ಷದ ಬಳಿಕ ಕಹಿಲಿಪಾರಾದಲ್ಲಿನ ವಿಧಿ ವಿಜ್ಞಾನ ನಿರ್ದೇಶನಾಲಯ ನೀಡಿದ ವರದಿಯಲ್ಲಿ ಆರೋಪಿ ಮಗುವಿನ ತಂದೆಯಲ್ಲ ಎಂಬುದು ದೃಢಪಟ್ಟಿತ್ತು.

ಅತ್ಯಾಚಾರ ನಡೆದಾಗ ಸಂತ್ರಸ್ತೆ ಆರೋಪಿಯ ಮುಖ ನೋಡಿರಲಿಲ್ಲ. ಆರೋಪಿಯ ಮುಖವನ್ನು ಬೇರೊಬ್ಬರಿಂದ ತಿಳಿದಿರುವುದಾಗಿ ಹೇಳಿದ್ದಾಳೆ. ಆದರೆ ಆ ಬೇರೊಬ್ಬ ವ್ಯಕ್ತಿಯನ್ನು ಪ್ರಾಸಿಕ್ಯೂಷನ್‌ ಸಾಕ್ಷಿಯನ್ನಾಗಿ ಮಾಡಲಾಗಿಲ್ಲ. ಅಥವಾ ಆ ವ್ಯಕ್ತಿ ಪುರಾವೆ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಮೇಲ್ಮನವಿ ಸಲ್ಲಿಸಿರುವ ವ್ಯಕ್ತಿಯೇ ಅತ್ಯಾಚಾರಿ ಎಂದು ಸಂತ್ರಸ್ತೆ ಹೇಗೆ ತೀರ್ಮಾನಿಸಿದರು ಎಂದು ಅರಿಯುವಲ್ಲಿ ದೊಡ್ಡ ಕಂದರವಿದೆ. ಪಾಟಿಸವಾಲಿನ ವೇಳೆ ಬೇರೆ ಯಾರೋ ಅತ್ಯಾಚಾರ ಎಸಗಿದ್ದಾರೆ ಎಂಬ ಸಲಹೆಯನ್ನು ಆಕೆ ನಿರಾಕರಿಸಿದ್ದರೂ ಡಿಎನ್‌ಎ ವರದಿಯಂತೆ ಮೇಲ್ಮನವಿ ಸಲ್ಲಿಸಿದಾತ ಸಂತ್ರಸ್ತೆಯ ಮಗುವಿನ ತಂದೆಯಲ್ಲವಾದ್ದರಿಂದ ಆಕೆಯ ನಿಲುವು ಸುಳ್ಳು ಎಂದು ಕಂಡುಬಂದಿದೆ ಎಂಬುದಾಗಿ ನ್ಯಾಯಾಲಯ ವಿವರಿಸಿದೆ.

ಹೀಗಾಗಿ ಆರೋಪಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ ತಕ್ಷಣವೇ ಆತನನ್ನು ಬಂಧನದಿಂದ ಬಿಡುಗಡೆ ಮಾಡುವಂತೆ ಆದೇಶಿಸಿತು.

[ಆದೇಶದ ಪ್ರತಿ]

Sudip_Biswas___Bura_v__The_State_of_Assam_and_Anr.pdf
Preview