
ತಾವು ವಿದೇಶ ಪ್ರವಾಸ ಕೈಗೊಳ್ಳದಂತೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಪರಿಸರ ಹೋರಾಟಗಾರ್ತಿ ಭಾನು ತಟಾಕ್ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಅರ್ಜಿ ಆಲಿಸಿದ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ದೆಹಲಿ ಹೈಕೋರ್ಟ್‌ಗೆ ತಟಾಕ್ ಅವರ ಅರ್ಜಿಯ ವಿಚಾರಣೆ ನಡೆಸುವ ಪ್ರಾದೇಶಿಕ ವ್ಯಾಪ್ತಿ ಇಲ್ಲ ಎಂದರು.
ತಟಾಕ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಾನ್ಲಿನ್ ಗೊನ್ಸಾಲ್ವೆಸ್, ತಟಾಕ್ ಅವರು ವಿದೇಶ ಪ್ರವಾಸ ಮಾಡುವುದನ್ನು ತಡೆಯುವ ವಲಸೆ ಇಲಾಖೆಯ ಕ್ರಮ ಅವರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದ್ದು ಅವರ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದರು.
ಆದರೆ ಗೃಹ ಸಚಿವಾಲಯ ವಿದೇಶಾಂಗ ಸಚಿವಾಲಯ ಮತ್ತು ವಲಸೆ ಕಚೇರಿ ಪರ ಹಾಜರಾದ ಸ್ಥಾಯಿ ವಕೀಲ ಆಶಿಶ್ ದೀಕ್ಷಿತ್ , ಅರ್ಜಿಯ ನಿರ್ವಹಣೆ ಪ್ರಶ್ನಿಸಿದರು. ಮನವಿದಾರರ ವಿರುದ್ಧ ಅರುಣಾಚಲ ಪ್ರದೇಶ ದಲ್ಲಿ ಹಲವು ಪ್ರಕರಣಗಳಿವೆ ಎಂದು ದೂರಿದರು.
ಇಟಾನಗರದ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮಾಡಿದ ಮನವಿ ಮೇರೆಗೆ ಆಕೆಯ ವಿರುದ್ಧ ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ಹೊರಡಿಸಲಾಗಿತ್ತು ಎಂದು ತಿಳಿಸಲಾಯಿತು.
ವಾದ ಆಲಿಸಿದ ನ್ಯಾಯಾಲಯ ಮನವಿ ತಿರಸ್ಕರಿಸಿತು. ಬದಲಿಗೆ ಗುವಾಹಟಿ ಹೈಕೋರ್ಟ್‌ಗೆ ಮನವಿ ಸಲ್ಲಿಸುವಂತೆ ಸಲಹೆ ನೀಡಿತು.
ತಟಾಕ್ ಅವರು ಅರುಣಾಚಲ ಪ್ರದೇಶದ ಕಾನೂನು ವಿದ್ಯಾರ್ಥಿನಿ ಮತ್ತು ಹೋರಾಟಗಾರ್ತಿ. ಪ್ರಸ್ತಾವಿತ ಬೃಹತ್ ಜಲವಿದ್ಯುತ್ ಯೋಜನೆಯಾದ 11,500 ಮೆಗಾವ್ಯಾಟ್ ಸಿಯಾಂಗ್ ಮೇಲ್ಡಂಡೆ ಬಹುಪಯೋಗಿ ಯೋಜನೆ ಸೇರಿದಂತೆ ಅಣೆಕಟ್ಟು ವಿರೋಧಿ ಚಳುವಳಿಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.
ಕಳೆದ ವಾರ, ಅವರು ಡಬ್ಲಿನ್‌ಗೆ ಪ್ರಯಾಣಿಸಲು ಮುಂದಾದಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ಅವರನ್ನು ತಡೆಹಿಡಿಯಲಾಗಿತ್ತು.