ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಸಂಖ್ಯೆ ದ್ವಿಗುಣಗೊಳಿಸಲು ನಿರ್ದೇಶನ ಕೋರಿ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಪರಿಗಣಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರಿದ್ದ ಪೀಠ ಅರ್ಜಿ ಗುಣಮಟ್ಟದಿಂದ ಕೂಡಿಲ್ಲ ಎಂದು ಪರಿಗಣಿಸಿ, ಅರ್ಜಿದಾರರು ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸುತ್ತಿದ್ದಾರೆ ಎಂದರು.
"ನೀವು ನೋಡುವ ಪ್ರತಿಯೊಂದು ಕೆಟ್ಟದ್ದೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಅರ್ಹವಲ್ಲ. ನಿಮ್ಮ ರಾಮಬಾಣ ಸಮರ್ಥನೀಯವಾಗಲಾರದು. ಅಸ್ತಿತ್ವದಲ್ಲಿರುವ ಖಾಲಿ ಹುದ್ದೆಗಳಿಗೆ ನ್ಯಾಯಾಧೀಶರನ್ನು ಭರ್ತಿ ಮಾಡಲು ಪ್ರಯತ್ನಿಸಿ ಆಗ ಅದು ಎಷ್ಟು ಕಷ್ಟ ಎಂದು ನಿಮಗೆ ಅರ್ಥವಾಗುತ್ತದೆ" ಎಂದು ಸಿಜೆಐ ಹೇಳಿದರು.
ಅರ್ಜಿದಾರರದ್ದು ʼಜನಪ್ರಿಯ ವಿಧಾನʼ ಎಂದು ಟೀಕಿಸಿದ ನ್ಯಾಯಾಲಯ ಹೈಕೋರ್ಟ್‌ಗಳಲ್ಲಿ ಈಗ ಇರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿನ ತೊಂದರೆಯನ್ನು ವಿವರಿಸಿತು.
"160 ನ್ಯಾಯಾಧೀಶರನ್ನು (ಅಲಾಹಾಬಾದ್ ಹೈಕೋರ್ಟ್) ಪಡೆಯುವುದೇ ಕಷ್ಟಕರವಾಗಿದೆ; ಹೀಗಿರುವಾಗ ಅಲಾಹಾಬಾದ್ ಹೈಕೋರ್ಟ್‌ನಲ್ಲಿ 320 ನ್ಯಾಯಾಧೀಶರನ್ನು ಹೇಗೆ ಪಡೆಯುವುದು? ಹೆಚ್ಚಿನ ನ್ಯಾಯಾಧೀಶರನ್ನು ಪಡೆಯುವುದು ರಾಮಬಾಣವಾಗದು. ಈ ರೀತಿಯ ಸಾಮಾನ್ಯೀಕರಿಸಿದ ಅರ್ಜಿಗಳನ್ನು ನಾವು ಪರಿಗಣಿಸಲು ಸಾಧ್ಯವಿಲ್ಲ" ಎಂದಿತು.
ಅರ್ಜಿಯು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ್ದು ಅದಕ್ಕೆ ವ್ಯತಿರಿಕ್ತವಾಗಿಲ್ಲ ಎಂದು ಉಪಾಧ್ಯಾಯ ವಾದಿಸಿದರು. ಆದರೆ ಸಿಜೆಐ ಈ ವಾದ ಒಪ್ಪಲು ನಿರಾಕರಿಸಿದರು.
"ಇದು ಸಂಸತ್ತು ಕಾಯಿದೆಯೊಂದರಲ್ಲಿ ಎಲ್ಲಾ ಪ್ರಕರಣಗಳನ್ನು 6 ತಿಂಗಳೊಳಗೆ ವಿಲೇವಾರಿ ಮಾಡುವುದಾಗಿ ಹೇಳುವಂತೆ ಇದೆ. ಇದು ಆ ರೀತಿ ಆಗದು" ಎಂದು ಸಿಜೆಐ ಚಂದ್ರಚೂಡ್ ಹೇಳಿದರು.
ಇದಲ್ಲದೆ, ಇಂತಹ ಪಿಐಎಲ್‌ಗಳು ದಂಡದೊಂದಿಗೆ ವಜಾಗೊಳಿಸಲು ಅರ್ಹ ಎಂದು ಸಿಜೆಐ ಅಭಿಪ್ರಾಯಪಟ್ಟಿದ್ದಾರೆ.
"ನಿಮ್ಮ ಪಿಐಎಲ್ ಆಲಿಸುವಂತೆ ಮಾಡಿದ್ದಕ್ಕಾಗಿ ನಾವು ನಿಮಗೆ ಮೂಲಸೌಕರ್ಯ ದಂಡ ಪಾವತಿಸುವಂತೆ ಸೂಚಿಸುತ್ತಿದ್ದೇವೆ. ಇದು ಸಾರ್ವಜನಿಕ ಸಮಯವಾಗಿದ್ದು ನಾವು ನಿಜವಾದ ಪ್ರಕರಣಗಳನ್ನು ಆಲಿಸಲಾಗಿಲ್ಲ" ಎಂದರು.
ನ್ಯಾಯಮೂರ್ತಿಗಳನ್ನು ಹೆಚ್ಚಿಸಿದ ಮಾತ್ರಕ್ಕೆ ಪ್ರಕರಣಗಳು ಬಾಕಿ ಉಳಿಯುವುದಿಲ್ಲ ಎಂದು ನ್ಯಾಯಮೂರ್ತಿ ನರಸಿಂಹ ವಿವರಿಸಿದರು. ಅಧೀನ ನ್ಯಾಯಾಲಯಗಳಿಗೆ ನೇಮಕಾತಿಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದು ಇಂತಹ ಸರಳ ಪರಿಹಾರಗಳಿಂದ ಅವು ನಿವಾರಣೆಯಾಗುವುದಿಲ್ಲ ಎಂದರು.
"ನಾನು ಅಲಾಹಾಬಾದ್ ಹೈಕೋರ್ಟ್‌ನಲ್ಲಿದ್ದಾಗ, ಕಾನೂನು ಸಚಿವರು ನ್ಯಾಯಾಧೀಶರನ್ನು ಶೇಕಡಾ 25 ಕ್ಕೆ ಹೆಚ್ಚಿಸುವಂತೆ ಕೇಳಿದ್ದರು. ಅಯ್ಯೋ ದೇವರೆ, ಆಗ ನಾನು ಇರುವ 160 ಹುದ್ದೆಗಳನ್ನೇ ಭರ್ತಿ ಮಾಡಲಾಗುತ್ತಿಲ್ಲವಲ್ಲ ಎಂದು ಭಾವಿಸಿದ್ದೆ. ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಕೇಳಿ ಎಷ್ಟು ಯುವ ವಕೀಲರು ಪದೋನ್ನತಿ ಬಯಸಿದ್ದಾರೆ ಎಂದು," ಎಂಬುದಾಗಿ ಸಿಜೆಐ ವಿವರಿಸಿದರು. ಈ ಹಿನ್ನೆಲೆಯಲ್ಲಿ ಉಪಾಧ್ಯಾಯ ಅವರು ಅರ್ಜಿ ಹಿಂಪಡೆಯಲು ಒಪ್ಪಿದರು.
"ಅರ್ಜಿ ಹಿಂಪಡೆಯುವುದಕ್ಕೆ ಅನುಮತಿಸಲಾಗಿದೆ. ನೇಮಕಾತಿ, ಖಾಲಿ ಹುದ್ದೆ ಇತ್ಯಾದಿಗಳ ಅಂಕಿಅಂಶಗಳ ಕುರಿತು ಸಂಶೋಧನೆ ಮಾಡಿದ್ದರೆ ಅದರೊಂದಿಗೆ ಹೊಸ ಮನವಿ ಸಲ್ಲಿಸಲು ಸ್ವಾತಂತ್ರ್ಯ ನೀಡಲಾಗಿದೆ," ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.