ತಾನು ವಿವಾಹವಾಗಬೇಕಿದ್ದ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಬಿ ವಿ ಗಿರೀಶ್ ಅವರನ್ನು 2003ರಲ್ಲಿ ಪ್ರಿಯಕರನ ಸಹಾಯದೊಂದಿಗೆ ಕೊಲೆ ಮಾಡಿದ್ದ ಶುಭಾ ಶಂಕರ್‌ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ [ಕು. ಶುಭಾ @ ಶುಭಾಶಂಕರ್ ಮತ್ತುಕರ್ನಾಟಕ ಸರ್ಕಾರ ನಡುವಣ ಪ್ರಕರಣ].
ಶುಭಾ ತನ್ನ ಕಾಲೇಜು ಗೆಳೆಯ ಹಾಗೂ ಉಳಿದ ಇಬ್ಬರೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ್ದರು ಎಂದು ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠ ತೀರ್ಪಿನಲ್ಲಿ ವಿವರಿಸಿದೆ.
ರಿಂಗ್ ರೋಡ್ ಕೊಲೆ ಪ್ರಕರಣ ಎಂದೇ ಕೃತ್ಯ ಜನಜನಿತವಾಗಿತ್ತು. ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಅಪರಾಧಿಗಳು ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿದ ನ್ಯಾಯಾಲಯ ಭಾವನಾತ್ಮಕ ಮತ್ತು ಸಾಮಾಜಿಕ ಮೌಲ್ಯದ ಅಧಃಪತನದ ಬಗ್ಗೆ ಕಳವಳ ವ್ಯಕ್ತಪಡಿಸಿತು. ಇದೊಂದು (ಗಿರೀಶ್ ಜೊತೆ ನಿಶ್ಷಿತಾರ್ಥ ಏರ್ಪಡಿಸಿದ್ದ ತನ್ನ ಪೋಷಕರ ವಿರುದ್ಧ ಶುಭಾ ಕೈಗೊಂಡ) ತಪ್ಪು ನಿರ್ಧಾರದ ದಂಗೆ ಮತ್ತು ಪ್ರೇಮ ಭ್ರಾಂತಿಯ ಪ್ರಕರಣ ಎಂದು ಅದು ಬಣ್ಣಿಸಿತು.
"ಕುಟುಂಬ ತಳೆದ ಬಲವಂತದ ನಿರ್ಧಾರದಿಂದ ಉಡುಗಿಹೋದ ಮಹತ್ವಾಕಾಂಕ್ಷಿ ಹುಡುಗಿಯ ಧ್ವನಿ ಅವಳ ಮನಸ್ಸಿನಲ್ಲಿ ತೀವ್ರ ತಳಮಳಗಳನ್ನುಂಟು ಮಾಡಿತು. ಮಾನಸಿಕ ಹೊಯ್ದಾಟ ಮತ್ತು ತೀವ್ರ ಪ್ರಣಯದ ಅಪವಿತ್ರ ಮೈತ್ರಿ ಮುಗ್ಧ ಯುವಕನ ದುರಂತ ಕೊಲೆಗೆ ಕಾರಣವಾಯಿತು, ಇದೇ ವೇಳೆ ಉಳಿದ ಮೂವರ ಬದುಕನ್ನೂ ಹಾಳುಗೆಡವಿತು" ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ಶುಭಾ ಇತರ ಆರೋಪಿಗಳೊಂದಿಗೆ ಸೇರಿ ತನ್ನ ಭಾವಿ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದಳು ಎಂದ ನ್ಯಾಯಾಲಯ ಮೊಬೈಲ್ ಕರೆ ದಾಖಲೆಗಳು ಮತ್ತು ಆಕೆಯ ಆಪ್ತ ಸ್ನೇಹಿತನ ಸಾಕ್ಷ್ಯಆಧರಿಸಿ, ಸಾಂದರ್ಭಿಕ ಸಾಕ್ಷ್ಯಗಳ ಸರಮಾಲೆ ಪೂರ್ಣಗೊಂಡಿದೆ ಎಂದಿತು.
ನವೆಂಬರ್ 30, 2003ರಂದು ಕಾನೂನು ವಿದ್ಯಾರ್ಥಿನಿ ಶುಭಾ ಜೊತೆ ಸಾಫ್ಟ್‌ವೇರ್ ಎಂಜಿನಿಯರ್ ಬಿ ವಿ ಗಿರೀಶ್ ನಿಶ್ಚಿತಾರ್ಥ ನಡೆದಿತ್ತು. ಎರಡು ದಿನಗಳ ನಂತರ, ಡಿಸೆಂಬರ್ 3ರ ಸಂಜೆ, ಶುಭಾ ಆತನನ್ನು ಊಟಕ್ಕೆ ಕರೆದೊಯ್ಯಯ್ಯುವಂತೆ ಕೇಳಿಕೊಂಡರು. ಊಟ ಮುಗಿಸಿ ಮರಳುವಾಗ ಬೆಂಗಳೂರಿನ ವಿಮಾನ ನಿಲ್ದಾಣ ರಿಂಗ್ ರಸ್ತೆಯ ಬಳಿ ವಾಹನ ನಿಲ್ಲಿಸಿದ್ದರು. ಅಲ್ಲಿ ಗಿರೀಶ್ ಮೇಲೆ ಉಕ್ಕಿನ ರಾಡ್‌ನಿಂದ ಹಲ್ಲೆ ನಡೆದ ಪರಿಣಾಮ ಆತ ಸಾವನ್ನಪ್ಪಿದ್ದರು.
ಈ ಮದುವೆ ತನಗೆ ಇಷ್ಟವಿಲ್ಲ ಎಂದು ಶುಭಾ ತನ್ನ ಕಾಲೇಜು ಸ್ನೇಹಿತ ಅರುಣ್ ವರ್ಮಾ ಬಳಿ ಹೇಳಿಕೊಂಡಿದ್ದಳು. ಪರಿಣಾಮ ಅರುಣ್ ತನ್ನ ಸಂಬಂಧಿ ದಿನಕರ್, ಸ್ನೇಹಿತ ಹದಿಹರೆಯದ ವೆಂಕಟೇಶ್ ಜೊತೆಗೂಡಿ ಕೊಲೆ ಮಾಡಿದ್ದರು. ಗಿರೀಶ್ ಎಲ್ಲೆಲ್ಲಿ ಓಡಾಡುತ್ತಿದ್ದರು ಎಂಬ ಮಾಹಿತಿಯನ್ನು ಶುಭಾ ನೀಡಿದ್ದಳು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.
ವಿಚಾರಣಾ ನ್ಯಾಯಾಲಯ ಎಲ್ಲಾ ನಾಲ್ವರು ಆರೋಪಿಗಳನ್ನು ದೋಷಿಗಳು ಎಂದು ತೀರ್ಪು ನೀಡಿತು. ವೆಂಕಟೇಶ್‌ನನ್ನು ಕೊಲೆ ಆರೋಪದಲ್ಲಿ ತಪ್ಪಿತಸ್ಥನೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತು. ಶುಭಾಗೆ ಸಾಕ್ಷ್ಯ ನಾಶಪಡಿಸಿದ್ದಕ್ಕಾಗಿ ಶಿಕ್ಷೆ ವಿಧಿಸಲಾಯಿತು. ನಂತರ ಕರ್ನಾಟಕ ಹೈಕೋರ್ಟ್ ಈ ತೀರ್ಪನ್ನು ಮಾರ್ಪಡಿಸಿತ್ತು. ನಾಲ್ವರನ್ನೂ ಕೊಲೆಗಾರರು ಎಂದು ಘೋಷಿಸಿದ ಅದು, ಪಿತೂರಿಯನ್ನು ಜಂಟಿಯಾಗಿ ಕಾರ್ಯಗತಗೊಳಿಸಲಾಗಿದೆ ಎಂದಿತ್ತು.
ಪ್ರಮುಖ ಪ್ರತ್ಯಕ್ಷ ಸಾಕ್ಷಿಗಳು ಮತ್ತು ಪ್ರಾಸಿಕ್ಯೂಷನ್ ಮಂಡಿಸಿದ ಎಲೆಕ್ಟ್ರಾನಿಕ್ ಸಾಕ್ಷ್ಯಗಳು ಸ್ವೀಕಾರಾರ್ಹವಲ್ಲ ಎಂದು ಆರೋಪಿಗಳು ಸುಪ್ರೀಂ ಕೋರ್ಟ್ ಮುಂದೆ ವಾದಿಸಿದರು. ಆದರೆ ನ್ಯಾಯಾಲಯ ಅವರ ವಾದವನ್ನು ತಿರಸ್ಕರಿಸಿತು.
ಪ್ರಕರಣದಲ್ಲಿ ಇಬ್ಬರು ಪ್ರತ್ಯಕ್ಷ ಸಾಕ್ಷಿಗಳು ನುಡಿದಿದ್ದ ಸಾಕ್ಷ್ಯವನ್ನು ನ್ಯಾಯಾಲಯ ಅವುಗಳೊಳಗಿನ ಅಸಂಗತತೆಯ ಕಾರಣದಿಂದಾಗಿ ಪರಿಗಣಿಸಲಿಲ್ಲ. ಪ್ರತ್ಯಕ್ಷದರ್ಶಿ ಸಾಕ್ಷ್ಯಗಳನ್ನು ನಂಬಲರ್ಹವಲ್ಲದ ಕಾರಣ ಪ್ರಕರಣವು ಸಂಪೂರ್ಣವಾಗಿ ಸಾಂಧರ್ಭಿಕ ಸಾಕ್ಷ್ಯಗಳನ್ನು ಅವಲಂಬಿಸಿದೆ. ಇಂತಹ ಪ್ರಕರಣಗಳನ್ನು ಅಪರಾಧದ ಉದ್ದೇಶವನ್ನು ಸಾಬೀತುಪಡಿಸುವುದು ಬಹುಮುಖ್ಯವಾಗುತ್ತದೆ ಎಂದು ನ್ಯಾಯಪೀಠ ಹೇಳಿತು.
ಅಪರಿಚಿತ ಆಕ್ರಮಣಕಾರರು ದಾಳಿ ನಡೆಸಿದರು ಎಂದು ಶುಭಾ ಹೇಳಿದ್ದರೂ ದಾಳಿ ಸಮಯದಲ್ಲಿ ಗಿರೀಶ್‌ಗೆ ಮಾತ್ರವೇ ಮಾರಣಾಂತಿಕ ಗಾಯವಾಗಿರುವುದು ಹಾಗೂ ಶುಭಾಗೆ ಯಾವುದೇ ಗಾಯಗಳಾಗದೆ ಇರುವುದನ್ನು ನ್ಯಾಯಾಲಯ ಗಮನಿಸಿತು. ಈ ನಡೆ ಜೊತೆಗೆ ಮೊಬೈಲ್ ಕರೆಯ ದಾಖಲೆಗಳು ಹಾಗೂ ಕೃತ್ಯಕ್ಕಾಗಿ ಬಳಸಿದ ಆಯುಧಗಳು ಪಿತೂರಿಯ ಉದ್ದೇಶವನ್ನು ಸುಸ್ಥಾಪಿತವಾಗಿ ಸಾಬೀತುಪಡಿಸಿವೆ ಎಂದು ನ್ಯಾಯಾಲಯ ಹೇಳಿತು.
ಆರೋಪಿಗಳ ನಡುವಿನ ಕರೆಗಳ ಕುರಿತಾದ ದತ್ತಾಂಶಗಳು (ಸಿಡಿಆರ್) ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಪರಿಗಣಿತವಾಗುವುದಿಲ್ಲ ಎನ್ನುವ ವಾದವನ್ನು ತಿರಸ್ಕರಿಸಿದ ನ್ಯಾಯಾಲಯವು ಭಾರತೀಯ ಸಾಕ್ಷ್ಯ ಅಧಿನಿಯಮದ ಸೆಕ್ಷನ್ 65ಬಿ ಅಡಿ ಅವು ಒಪ್ಪಿತವಾಗಿದ್ದು, ಅದನ್ನು ನೀಡಿದ ಅಧಿಕಾರಿಗಳು ಸಮರ್ಥರಾಗಿದ್ದಾರೆ ಎಂದು ತಿಳಿಸಿತು.
ಆದರೆ ಆರೋಪಿಗಳು ಹುಟ್ಟು ಅಪರಾಧಿಗಳಲ್ಲ. ತಪ್ಪು ನಿರ್ಧಾರದ ಮೂಲಕ ಅಪಾಯಕಾರಿ ಸಾಹಸಕ್ಕಿಳಿದದ್ದು ಘೋರ ಅಪರಾಧಕ್ಕೆ ಇಂಬು ನೀಡಿತು ಎಂದು ಪೀಠ ನುಡಿಯಿತು.
ಹೈಕೋರ್ಟ್ ವಿಧಿಸಿದ್ದ ಶಿಕ್ಷೆಯನ್ನು ನ್ಯಾಯಾಲಯ ಎತ್ತಿ ಹಿಡಿಯಿತಾದರೂ ಸಂವಿಧಾನದ 161ನೇ ವಿಧಿಯ ಅಡಿಯಲ್ಲಿ ಕ್ಷಮಾದಾನಕ್ಕಾಗಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಲು ಅಪರಾಧಿಗಳು ಸ್ವತಂತ್ರರು ಎಂದಿತು. ಅರ್ಜಿ ಸಲ್ಲಿಸುವುದಕ್ಕಾಗಿ ಸಮಯಾವಕಾಶ ನೀಡಲು ಶಿಕ್ಷೆಯನ್ನು ಎಂಟು ವಾರಗಳ ಕಾಲ ಅಮಾತ್ತಿನಲ್ಲಿರಿಸಿ ಆದೇಶಿಸಿತು.
ಮೇಲ್ಮನವಿದಾರರನ್ನು ಹಿರಿಯ ವಕೀಲರಾದ ಆರ್ ನೆಡುಮಾರನ್ , ಎಸ್ ನಾಗಮುತ್ತು , ಸಿದ್ಧಾರ್ಥ ದವೆ , ರಂಜಿತ್ ಕುಮಾರ್ , ಜಯಂತ್ ಕೆ ಸೂದ್ ಮತ್ತವರ ತಂಡ ಪ್ರತಿನಿಧಿಸಿತ್ತು.
ಪ್ರತಿವಾದಿಗಳನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಮುಹಮ್ಮದ್ ಅಲಿ ಖಾನ್ , ಹಿರಿಯ ವಕೀಲರಾದ ಟಾಮಿ ಸೆಬಾಸ್ಟಿಯನ್, ಕಿರಣ್ ಸೂರಿ ಹಾಗೂ ಅವರ ತಂಡ ಪ್ರತಿನಿಧಿಸಿತ್ತು.
[ತೀರ್ಪಿನ ಪ್ರತಿ]