ಕಳೆದ ಕೆಲ ದಶಕಗಳಲ್ಲಿ ಕೊಲೆಯಾದ ನೂರಾರು ಶವಗಳನ್ನು ಧರ್ಮಸ್ಥಳದಲ್ಲಿ ಹೂಳಲಾಗಿದೆ ಎನ್ನಲಾದ ದೂರಿನ ಸಂಬಂಧ ತಕ್ಷಣ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸುವುದು ಸದ್ಯದ ತುರ್ತು ಎಂದು ಸುಪ್ರೀಂ ಕೋರ್ಟ್ ವಕೀಲ ಎ ವೇಲನ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾನು ದೂರುದಾರರನ್ನು ಪ್ರತಿನಿಧಿಸುತ್ತಿಲ್ಲ. ಆದರೆ, ಸಾರ್ವಜನಿಕ ಹಿತಾಸಕ್ತಿ ಹಾಗೂ ಮಾಧ್ಯಮ ಮತ್ತು ಜನರಿಗೆ ಇಂಥ ಅತ್ಯಂತ ವಿಶೇಷ ಸಂದರ್ಭದಲ್ಲಿ ನಮ್ಮ ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದು ತಿಳಿಸುವ ಉದ್ದೇಶದಿಂದ ಈ ವಿವರಣೆ ನೀಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಒಬ್ಬ ವ್ಯಕ್ತಿ ಪೊಲೀಸ್ ಠಾಣೆಗೆ ತೆರಳಿ ಹಲವು ವರ್ಷಗಳಿಂದ ಕೊಲೆಯಾದ ನೂರಾರು ಶವಗಳನ್ನು ಹೂಳುವಂತೆ ಬಲವಂತ ಮಾಡಲಾಗಿತ್ತು. ಈಗ ಆ ಶವಗಳನ್ನು ಎಲ್ಲಿ ಹೂಳಲಾಗಿದೆ ಎಂಬುದನ್ನು ನಾನು ತೋರಿಸಬಲ್ಲೆ ಎಂದು ಹೇಳಿದರೆ ಇಂಥ ಸಂದರ್ಭದಲ್ಲಿ ಪೊಲೀಸರು ಏನು ಮಾಡಬೇಕು ಎಂದರೆ ತಕ್ಷಣ ಅವರು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದ್ದಾರೆ. ಎಫ್‌ಐಆರ್ ದಾಖಲಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಅತ್ಯಂತ ಘೋರ ಅಪರಾಧಗಳಾದ ಅತ್ಯಾಚಾರ ಮತ್ತು ಕೊಲೆ ಆರೋಪದ ಸಂಬಂಧ ಎಫ್‌ಐಆರ್ ದಾಖಲಿಸಿದ ನಂತರ ಪೊಲೀಸರಿಗೆ ಅಪರಾಧ ಪ್ರಕ್ರಿಯೆ ಸಂಹಿತಾ ಸೆಕ್ಷನ್ 156 ಅಡಿ ತನಿಖೆ ನಡೆಸುವ ಸಂಪೂರ್ಣ ಅಧಿಕಾರ ಲಭ್ಯವಾಗುತ್ತದೆ. ಇದು ಸೀಮಿತ ಅಧಿಕಾರವಲ್ಲ, ಬದಲಿಗೆ ಸಮಗ್ರ ಅಧಿಕಾರವಾಗಿದೆ. ಆನಂತರ ಘಟನಾ ಸ್ಥಳಕ್ಕೆ ಭೇಟಿ, ಅಪರಾಧಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸುವುದು, ಸೂಕ್ತ ಪ್ರಕ್ರಿಯೆಗಳ ಮೂಲಕ ಭೌತಿಕ ಸಾಕ್ಷ್ಯಗಳನ್ನು ದಾಖಲಿಸುವುದು ಹಾಗೂ ಸಾಕ್ಷ್ಯಗಳನ್ನು ರಕ್ಷಿಸುವಂತಹ ಅಗತ್ಯ ಕ್ರಮಕೈಗೊಳ್ಳಬಹುದಾಗಿದೆ ಎಂದಿದ್ದಾರೆ.
ಯಾವುದೇ ಕೊಲೆ ಆರೋಪದ ಸಂಬಂಧ ಎಫ್‌ಐಆರ್ ದಾಖಲಾದರೆ ಘಟನಾ ಸ್ಥಳಕ್ಕೆ ಭೇಟಿ ನೀಡಲು ಪೊಲೀಸರು ಅನುಮತಿ ಕಾಯಬೇಕಾದ ಅಗತ್ಯವಿಲ್ಲ. ಇದೇ ತತ್ವ ಇಲ್ಲಿಯುತ್ತದೆ ಅನ್ವಯಿಸುತ್ತದೆ ಎಂದು ವೇಲನ್ ವಿವರಿಸಿದ್ದಾರೆ.
ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ಮ್ಯಾಜಿಸ್ಟ್ರೇಟ್ ಮುಂದೆ ಯಾವಾಗ ಸಾಕ್ಷಿಯ ಹೇಳಿಕೆಯನ್ನು ದಾಖಲಿಸುವ ಅಗತ್ಯ ಬೀಳುತ್ತದೆ ಎನ್ನುವ ಬಗ್ಗೆಯೂ ಅವರು ಸ್ಪಷ್ಟೀಕರಣ ನೀಡಲು ಪ್ರಯತ್ನಿಸಿದ್ದಾರೆ. ಸೆಕ್ಷನ್ 164 ಅನ್ನು ಸಾಕ್ಷಿಗಳ ರಕ್ಷಣೆ ಮತ್ತು ಅವರ ಹೇಳಿಕೆಯು ಸ್ವಯಂಪ್ರೇರಿತ ಎನ್ನುವುದನ್ನು ಖಾತರಿಪಡಿಸಿಕೊಳ್ಳಲು ರೂಪಿಸಲಾಗಿದೆ. ಇದು ಪೊಲೀಸರ ತನಿಖೆಗೆ ಅಗತ್ಯವಾದ ಪೂರ್ವ ಷರತ್ತಲ್ಲ. ಪ್ರಾಸಿಕ್ಯೂಷನ್ ಪ್ರಕರಣವನ್ನು ಬಲಿಷ್ಠಗೊಳಿಸುವ ಉದ್ದೇಶ ಇದರ ಹಿಂದಿದೆಯೇ ಹೊರತು, ಸಾಕ್ಷ್ಯ ಸಂಗ್ರಹವನ್ನು ವಿಳಂಬವಾಗಿಸುವುದನ್ನಲ್ಲ. ಉದಾಹರಣೆಗೆ, ಬಾವಿಯಲ್ಲಿ ಶವವೊಂದು ಕಂಡುಬಂದ ಮಾಹಿತಿಯನ್ನು ಯಾರೋ ಬಾತ್ಮಿದಾರರು ಪೊಲೀಸರಿಗೆ ನೀಡಿದರೆ ಶವ ಮೇಲೆತ್ತುವುದಕ್ಕೂ ಮುನ್ನ ಪೊಲೀಸರು ಸೆಕ್ಷನ್ 164ರ ಅಡಿ ಹೇಳಿಕೆ ದಾಖಲಿಸುವುದಿಲ್ಲ. ಇದೇ ತರ್ಕ, ಯಾರೋ ಒಬ್ಬ ವ್ಯಕ್ತಿ ಶವಗಳನ್ನು ಹೂಳಲಾಗಿರುವ ಹಲವು ಸ್ಥಳಗಳನ್ನು ತೋರಿಸಲು ಮುಂದಾಗಿರುವ ಈ ಪ್ರಕರಣಕ್ಕೂ ಅನ್ವಯಿಸುತ್ತದೆ ಎಂದು ವೇಲನ್ ವಿವರಿಸಿದ್ದಾರೆ.
ಆರೋಪಿ ಅಥವಾ ಸಾಕ್ಷಿಯು ಸ್ವಯಂಪ್ರೇರಿತವಾಗಿ ಸಾಕ್ಷ್ಯ ಎಲ್ಲಿದೆ ಎಂದು ಹೇಳಲು ಮುಂದಾಗುವುದು ನ್ಯಾಯಾಲಯದಲ್ಲಿ ಒಪ್ಪಿತವಾಗುತ್ತದೆ. ಹಾಲಿ ಪ್ರಕರಣದಲ್ಲಿ ದೂರುದಾರ ಸ್ವಯಂಪ್ರೇರಿತವಾಗಿ ಪೊಲೀಸರನ್ನು ಸಂಪರ್ಕಿಸಿದ್ದಾನೆ. ಶವಗಳನ್ನು ಹೂತಿರುವ ನಿರ್ದಿಷ್ಟ ಸ್ಥಳಗಳನ್ನು ಗುರುತಿಸಲು ಆತ ಮುಂದಾಗಿದ್ದಾನೆ. ಸಾಕ್ಷಿಯಾಗಿ ಅಸ್ತಿಯ ಪಳೆಯುಳಿಕೆಗಳನ್ನು ದೊರಕಿಸಿಕೊಡಲು ಆತ ಮುಂದೆ ಬಂದಿದ್ದಾನೆ ಎಂದು ವೇಲನ್ ವಿಶ್ಲೇಷಿಸಿದ್ದಾರೆ.
ತನಿಖೆ ನಡೆಸುವಲ್ಲಿ ಪೊಲೀಸರ ಅಧಿಕಾರ ಮೊಟಕುಗೊಳಿಸಲಾಗದು ಎಂದು ಸುಪ್ರೀಂ ಕೋರ್ಟ್ ಪದೇ ಪದೇ ಪುನರುಚ್ಚರಿಸಿದೆ. ನಿರ್ದಿಷ್ಟ ಮಾಹಿತಿ ಇರುವಾಗ ಸಾಕ್ಷ್ಯಗಳನ್ನು ಸಂಗ್ರಹಿಸುವುದನ್ನು ವಿಳಂಬಗೊಳಿಸುವುದು ಕರ್ತವ್ಯ ಲೋಪವಾಗುತ್ತದೆ. ಸುದ್ದಿ ಹಬ್ಬುತ್ತಿದ್ದಂತೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇರುತ್ತದೆ. ತಡವಾದಷ್ಟೂ ವಿಧಿವಿಜ್ಞಾನ ಪರೀಕ್ಷೆ ಕಷ್ಟವಾಗುತ್ತದೆ. ಹೀಗಾಗಿ, ತನಿಖೆ ತಕ್ಷಣ ಆರಂಭವಾಗಬೇಕು ಎಂದಿದ್ದಾರೆ.
ಶವ ಹೂತಿರುವ ಪ್ರತಿ ಸ್ಥಳದ ಪಂಚನಾಮೆ, ಸ್ವತಂತ್ರ ಸಾಕ್ಷಿಗಳ ಉಪಸ್ಥಿತಿ, ಘಟನಾ ಸ್ಥಳದಲ್ಲಿನ ಸಂಪೂರ್ಣ ವಿಡಿಯೊ, ಎಲ್ಲಾ ಸಾಕ್ಷಿಗಳನ್ನು ಸೂಕ್ತ ರೀತಿಯಲ್ಲಿ ಸಿದ್ಧಪಡಿಸುವುದು, ಶವದ ಅಳಿದುಳಿದ ಭಾಗದ ನಿರ್ವಹಣೆಗೆ ವಿಧಿವಿಜ್ಞಾನ ಸಂಹಿತೆ ಪಾಲಿಸಬೇಕು ಎಂದು ಹೇಳಿದ್ದಾರೆ.
ಒಂದೊಮ್ಮೆ ಪೊಲೀಸರು ಕೊಲೆಯಾದವರನ್ನು ಎಲ್ಲಿ ಹೂಳಲಾಗಿದೆ ಎಂಬುದು ತಿಳಿದಿದೆ. ಆದರೆ, ಅದನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕೂ ಮುನ್ನ ಔಪಚಾರಿಕ ಪ್ರಕ್ರಿಯೆ ಮುಗಿಯುವವರೆಗೆ ಕಾಯುತ್ತೇವೆ ಎಂದು ಹೇಳಿದರೆ ಆಗ ಸಾರ್ವಜನಿಕ ಆಕ್ರೋಶ ಸಮರ್ಥನೀಯವಾಗುತ್ತದೆ. ತಮ್ಮವರನ್ನು ಕಳೆದುಕೊಂಡಿರುವ ಕುಟುಂಬದವರ ದೃಷ್ಟಿಯಿಂದ ತಕ್ಷಣ ಕ್ರಮಕೈಗೊಳ್ಳುವುದು ಅಗತ್ಯವಾಗಿದೆ ಎಂದಿದ್ದಾರೆ.
ಕೆಲವರು ದೂರುದಾರರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವುದು ಸೂಕ್ತವಾಗಿದೆ. ಆದರೆ, ತನಿಖೆಯನ್ನು ವಿಳಂಬಿಸುವುದು ದೂರುದಾರನ ಸುರಕ್ಷತೆ ಹೆಚ್ಚಿಸುವುದಿಲ್ಲ. ಶರವೇಗದಲ್ಲಿ ಸಾಕ್ಷ್ಯ ಸಂಗ್ರಹ ಮಾಡುವುದರಿಂದ ಅವರಿಗೆ ರಕ್ಷಣೆ ದೊರೆಯಲಿದ್ದು, ಅವರ ಆರೋಪ ಸಿಂಧುವಾಗುತ್ತದೆ. ತನಿಖೆಯ ಜೊತೆಜೊತೆಗೇ ಸಾಕ್ಷಿಯ ರಕ್ಷಣೆಯನ್ನೂ ಮಾಡಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.
ಈ ಪ್ರಕರಣದಲ್ಲಿ ಸಮಾಜದ ಬಡಜನರನ್ನು ವ್ಯವಸ್ಥಿತವಾಗಿ ಕೊಲೆಗೈದಿರುವುದು, ಮಹಿಳೆ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು, ದಶಕಗಳ ಕಾಲ ಸಂಘಟಿತವಾಗಿ ಅಪರಾಧ ಕೃತ್ಯ ಬಚ್ಚಿಟ್ಟಿರುವ ಆರೋಪ ಸೇರಿದೆ. ಇಂಥ ಬ್ರಹ್ಮಾಂಡ ಅಪರಾಧ ಎದುರಾಗಿರುವಾಗ ಕಾನೂನಿನ ಚೌಕಟ್ಟಿನಲ್ಲಿ ತಕ್ಷಣ ಮತ್ತು ನಿರ್ಣಾಯಕ ಕ್ರಮ ಅಗತ್ಯವಾಗಿದೆ ಎಂದು ವೇಲನ್ ಹೇಳಿದ್ದಾರೆ.
ನಮ್ಮ ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯಲ್ಲಿ ಸವಾಲುಗಳ ನಡುವೆಯೂ ಅತ್ಯಂತ ಸಂಕೀರ್ಣ ಪ್ರಕರಣಗಳನ್ನು ನಿರ್ವಹಿಸಲು ಅಗತ್ಯವಾದ ವಿಧಾನಗಳು ಮತ್ತು ಚೌಕಟ್ಟುಗಳಿವೆ. ತಡ ಮಾಡದೇ ಹೂಳಲಾದ ಶವಗಳ ಅಸ್ತಿ ಪಳೆಯುಳಿಕೆಗಳನ್ನು ಸಂಗ್ರಹಿಸುವ ಕೆಲಸವನ್ನು ಮಾಡಬೇಕಿದೆ. ಮ್ಯಾಜಿಸ್ಟ್ರೇಟ್ ಮುಂದೆ ಸೆಕ್ಷನ್ 164 ಅಡಿ ಹೇಳಿಕೆ ದಾಖಲಿಸಲು ಪೊಲೀಸರು ಕಾಯಬಾರದು. ನ್ಯಾಯದಾನ ವಿಳಂಬಗೊಳಿಸುವುದು ನ್ಯಾಯ ನಿರಾಕರಿಸಿದಂತಾಗುತ್ತದೆ. ಹಾಲಿ ಪ್ರಕರಣದಲ್ಲಿ ವಶಕ್ಕೆ ಪಡೆಯುವ ಪ್ರತಿಯೊಂದು ಪಳೆಯುಳಿಕೆಯೂ ಸಂತ್ರಸ್ತರ ಕುಟುಂಬಸ್ಥರಿಗೆ ನ್ಯಾಯ ದೊರಕಿಸುವ ಅವಕಾಶವಾಗಿದ್ದು, ಪ್ರತಿಯೊಂದು ದಿನವೂ ಮುಖ್ಯವಾಗಿದೆ ಎಂದು ವಿಶ್ಲೇಷಿಸಿದ್ದಾರೆ.