ಕನಿಷ್ಠ 25 ಜನರ ಸಾವಿಗೆ ಕಾರಣವಾದ ಗೋವಾದ ಅರ್ಪೋರಾದ 'ಬಿರ್ಚ್ ಬೈ ರೋಮಿಯೋ ಲೇನ್' ನೈಟ್‌ಕ್ಲಬ್ ಬೆಂಕಿಗಾಹುತಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಟ್‌ಕ್ಲಬ್‌ನ ಮಾಲೀಕರಾದ ಗೌರವ್ ಲೂತ್ರಾ ಮತ್ತು ಸೌರಭ್ ಲೂತ್ರಾ ಅವರು ನಿರೀಕ್ಷಣಾ ಜಾಮೀನು ಕೋರಿ ದೆಹಲಿಯ ರೋಹಿಣಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ದೆಹಲಿ ನಿವಾಸಿಗಳಾದ ಈ ಇಬ್ಬರು ದುರಂತದ ನಂತರ ಬಂಧನದಿಂದ ತಪ್ಪಿಸಿಕೊಳ್ಳಲು ಥಾಯ್ಲೆಂಡ್‌ಗೆ ಪಲಾಯನ ಮಾಡಿದ್ದರು ಎಂದು ವರದಿಯಾಗಿದೆ.
ಡಿಸೆಂಬರ್ 6ರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿತ್ತು. ಮಧ್ಯರಾತ್ರಿ ಸುಮಾರಿಗೆ ಕ್ಲಬ್‌ನ ನೆಲಮಾಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡು ಬಾರ್ ಮತ್ತು ರೆಸ್ಟೋರೆಂಟ್ ಹೊಂದಿರುವ ಮೊದಲ ಮಹಡಿಗೂ ಬೆಂಕಿಯ ಕೆನ್ನಾಲಿಗೆ ಚಾಚಿತ್ತು.
ಮತ್ತೊಂದೆಡೆ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ಕೋರಿ ಸಾಮಾಜಿಕ ಕಾರ್ಯಕರ್ತೆ ಐಶ್ವರ್ಯಾ ಸಲಗಾಂವ್ಕರ್ ಅವರು ಬಾಂಬೆ ಹೈಕೋರ್ಟ್ ಗೋವಾ ಪೀಠಕ್ಕೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿದ್ದಾರೆ .
ಜನಸಂದಣಿ ನಿರ್ವಹಣೆಯ ವೈಫಲ್ಯ ಮತ್ತು ಆಡಳಿತ ನಿರ್ಲಕ್ಷ್ಯದ ಬಗ್ಗೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಅರ್ಜಿ ಕೋರಿದೆ.