Supreme Court of India
Supreme Court of India  
ಸುದ್ದಿಗಳು

ಕೈದಿಗಳ ಬಿಡುಗಡೆ ಲೆಕ್ಕ ಹಾಕುವಾಗ ಪೆರೋಲ್ ಅವಧಿಯನ್ನು ಶಿಕ್ಷೆಯ ಭಾಗವಾಗಿ ಪರಿಗಣಿಸುವಂತಿಲ್ಲ: ಸುಪ್ರೀಂ ಕೋರ್ಟ್‌

Bar & Bench

ಗೋವಾ ಕಾರಾಗೃಹ ನಿಯಮಾವಳಿ- 2006ರ ಅಡಿಯಲ್ಲಿ ಜೈಲಿನಿಂದ ಕೈದಿಗಳನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡುವ ಸಂದರ್ಭಗಳಲ್ಲಿ ಅವರು ಪಡೆದ ಪೆರೋಲ್‌ ಅವಧಿಯನ್ನು ಶಿಕ್ಷೆಯ ಅಂಗವಾಗಿ ಪರಿಗಣಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿಹಿಡಿದಿದೆ [ರೋಹನ್ ಧುಂಗತ್ ಮತ್ತು ಗೋವಾ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಶಿಕ್ಷೆಯ ಅವಧಿಯನ್ನು ಲೆಕ್ಕಾಚಾರ ಮಾಡುವಾಗ ಕೈದಿಗಳು ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಅವಧಿಯನ್ನು 1984ರ ಕಾರಾಗೃಹ ಕಾಯಿದೆಯ ಸೆಕ್ಷನ್ 55 ಕೂಡ  ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.

"ಹದಿನಾಲ್ಕು ವರ್ಷಗಳ ವಾಸ್ತವಿಕ ಜೈಲುವಾಸವನ್ನು ಪರಿಗಣಿಸುವಾಗ ಪೆರೋಲ್ ಅವಧಿಯನ್ನು ಸೇರಿಸಬೇಕೆಂದು ಕೈದಿಗಳ ಪರವಾಗಿ ಸಲ್ಲಿಸಿದ ವಾದವನ್ನು ಮನ್ನಿಸಿದರೆ, ಆಗ ನಿರ್ಬಂಧಗಳು ಇಲ್ಲದೆ ಹೋಗುವುದರಿಂದ  ಪ್ರಭಾವಿ ಕೈದಿಯೊಬ್ಬ ಕಾರಣವೇ ಇಲ್ಲದೆ ಹಲವು ಬಾರಿ ಪೆರೋಲ್ ಪಡೆಯಬಹುದು ಮತ್ತು ಹಾಗೆ ಪರೋಲನ್ನು ಹಲವಾರು ಬಾರಿ ನೀಡಬಹುದು. ಜೊತೆಗೆ ಕೈದಿಗಳ ಪರವಾದ ವಾದವನ್ನು ಪುರಸ್ಕರಿಸಿದರೆ  ಅದು ವಾಸ್ತವಿಕ ಸೆರೆವಾಸದ  ಉದ್ದೇಶ ಮತ್ತು ಗುರಿಯನ್ನು ಮಣಿಸಬಹುದು. ವಾಸ್ತವಿಕ ಸೆರೆವಾಸವನ್ನು ಪರಿಗಣಿಸುವ ಸಲುವಾಗಿ ಪೆರೋಲ್‌ ಅವಧಿಯನ್ನು ಲೆಕ್ಕಹಾಕಬಾರದು ಎಂಬ ದೃಢವಾದ ಅಭಿಪ್ರಾಯ ನಮ್ಮದು" ಎಂದು ನ್ಯಾಯಾಲಯ ಹೇಳಿದೆ.

ಅವಧಿಪೂರ್ವವಾಗಿ ತಮ್ಮನ್ನು ಬಿಡುಗಡೆ ಮಾಡಬೇಕೆಂಬ ತಮ್ಮ ಕೋರಿಕೆ ಒಪ್ಪದ ಗೋವಾ ಸರ್ಕಾರದ ನಿಲುವು ಪ್ರಶ್ನಿಸಿ ಕೆಲವು ಕೈದಿಗಳು ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ತಿರಸ್ಕರಿಸಿತ್ತು ಹೈಕೋರ್ಟ್‌ ತೀರ್ಪು ಗೋವಾ ಜೈಲು ನಿಯಮಾವಳಿ 335 ಮತ್ತು 1984ರ ಕಾರಾಗೃಹ  ಕಾಯಿದೆಯ ಸೆಕ್ಷನ್ 55ರ ವ್ಯಾಖ್ಯಾನವನ್ನು ಆಧರಿಸಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ, ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ ದವೆ ಅವರು “ಪೆರೋಲ್‌ನಲ್ಲಿರುವಾಗಲೂ ಅಪರಾಧಿಗಳು ಕಸ್ಟಡಿ/ನ್ಯಾಯಾಂಗ ಬಂಧನದಲ್ಲಿದ್ದಾರೆ  ಎನ್ನಬಹುದು. ಹೀಗಾಗಿ ಕನಿಷ್ಠ 14 ವರ್ಷಗಳ ವಾಸ್ತವಿಕ ಜೈಲುವಾಸವನ್ನು ಪರಿಗಣಿಸುವಾಗ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಅವಧಿಯನ್ನೂ ಸೇರಿಸಿರಬೇಕು ಎಂದು ವಾದಿಸಿದರು. ಆದರೆ ಪೆರೋಲ್‌ ಷರತ್ತುಬದ್ಧ ಬಿಡುಗಡೆ ಎಂದ ಸುಪ್ರೀಂ ಕೋರ್ಟ್‌ ಒಬ್ಬ ವ್ಯಕ್ತಿಯನ್ನು ಜೈಲಿನಿಂದ ಕರೆದೊಯ್ಯುವಾಗ ಮಾತ್ರ ಕಾಯಿದೆಯ ಸೆಕ್ಷನ್ 55 ಅನ್ವಯಿಸುತ್ತದೆ ಎಂಬುದಾಗಿ ತಿಳಿಸಿ ಮೇಲ್ಮನವಿಗಳನ್ನು ವಜಾಗೊಳಿಸಿತು.