Karnataka HC , Lord Rama in exile 
ಸುದ್ದಿಗಳು

ಮೇಲ್ಮನವಿ ಸಲ್ಲಿಸಲು 14 ವರ್ಷ ವಿಳಂಬ: ರಾಜ್ಯ ಸರ್ಕಾರವನ್ನು ವನವಾಸ ಮಾಡಿದ ರಾಮನಂತೆ ಕಾಣಲಾಗದು ಎಂದ ಕರ್ನಾಟಕ ಹೈಕೋರ್ಟ್

ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್‌ನ ದಿವಾಳಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಫೆಬ್ರವರಿ 2011ರಂದು ನೀಡಲಾಗಿದ್ದ ಆದೇಶವನ್ನು ರಾಜ್ಯ ಸರ್ಕಾರ ಪ್ರಶ್ನಿಸಲು ಹೊರಟಿತ್ತು.

Bar & Bench

ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸುವಲ್ಲಿ 14 ವರ್ಷ ವಿಳಂಬ ಉಂಟುಮಾಡಿರುವುದನ್ನು ಮನ್ನಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ [ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ನಿಜಿಂಜಯ್ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ ನಡುವಣ ಪ್ರಕರಣ].

ಸರ್ಕಾರವನ್ನು 14 ವರ್ಷಗಳ ಕಾಲ ವನವಾಸದಲ್ಲಿದ್ದ ಶ್ರೀರಾಮನಂತೆ ಪರಿಗಣಿಸಲಾಗದು ಎಂದು ನ್ಯಾಯಮೂರ್ತಿಗಳಾದ ಡಿಕೆ ಸಿಂಗ್ ಮತ್ತು ವೆಂಕಟೇಶ್ ನಾಯಕ್ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು.

“ಸರ್ಕಾರ 14 ವರ್ಷಗಳಾದ ಮೇಲೆ ಎಚ್ಚೆತ್ತು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಅಗತ್ಯವಿದೆ ಎಂದು ಕಂಡುಕೊಂಡಿದೆ. 14 ವರ್ಷ ಎಂದರೆ ರಾಮ ವನವಾಸದಲ್ಲಿದ್ದು ಅಯೋಧ್ಯೆಗೆ ಮರಳಿದ ಅವಧಿ. ಆದರೆ ವಿಳಂಬ ಕ್ಷಮಿಸುವುದಕ್ಕೆ ಸರ್ಕಾರ 14 ವರ್ಷ ವನವಾಸದಲ್ಲಿ ಇರಲಿಲ್ಲ. ಹೀಗಾಗಿ ಇಷ್ಟು ಅತಿಯಾದ ವಿಳಂಬವನ್ನು ಮನ್ನಿಸಲು ಯಾವುದೇ ಆಧಾರ ಕಂಡುಬರುತ್ತಿಲ್ಲ” ಎಂದು ನ್ಯಾಯಾಲಯ ಹೇಳಿತು.

ಕಂದಾಯ ಇಲಾಖೆ ಮುದ್ರಾಂಕ ಮತ್ತು ನೋಂದಣಿ ವಿಭಾಗದ ಪ್ರಧಾನ ಕಾರ್ಯದರ್ಶಿ, ನೋಂದಣಿ ಇಲಾಖೆ ಮಹಾನಿರೀಕ್ಷಕರು ಹಾಗೂ ಮುದ್ರಾಂಕ ಆಯುಕ್ತರು ಹಾಗೂ ದಾವಣಗೆರೆ ಜಿಲ್ಲಾ ರಿಜಿಸ್ಟ್ರಾರ್‌ ಮೇಲ್ಮನವಿ ಸಲ್ಲಿಸಿದ್ದರು. ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್ನ ದಿವಾಳಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಫೆಬ್ರವರಿ 2011ರಂದು ನೀಡಲಾಗಿದ್ದ ಆದೇಶವನ್ನು ರಾಜ್ಯ ಸರ್ಕಾರ ಪ್ರಶ್ನಿಸಲು ಹೊರಟಿತ್ತು.

ಸರ್ಕಾರ ನೀಡಿದ ಕಾರಣಗಳು ಲಿಮಿಟೇಷನ್‌ ಕಾಯಿದೆಯ ಸೆಕ್ಷನ್ 5ರ ಅಡಿಯಲ್ಲಿ ಸಮರ್ಪಕ ಕಾರಣ ಮಾನದಂಡವನ್ನು ಪೂರೈಸಿಲ್ಲ. ಸಮಂಜಸ ವಿವರಣೆ ನೀಡಿದರೆ ವಿಳಂಬವಾಗಿರುವುದನ್ನು ಮನ್ನಿಸಬಹುದು. ಆದರೆ ಸರ್ಕಾರದ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯ ಮಾಡಿದ್ದಾಗ ಮನ್ನಿಸಲಾಗದು ಎಂದು ನ್ಯಾಯಾಲಯ ತಿಳಿಸಿತು. ಆದ್ದರಿಂದ, ಸರ್ಕಾರದ ಮೇಲ್ಮನವಿ ಹಾಗೂ ತಡವನ್ನು ಮನ್ನಿಸುವ ಅರ್ಜಿ ಎರಡನ್ನೂ ಹೈಕೋರ್ಟ್ ತಿರಸ್ಕರಿಸಿತು.

ಪ್ರತಿವಾದಿ ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್ ಪರವಾಗಿ ವಕೀಲ ಜಗೈಸ್‌ಗೌಡ್ ಪಾಟೀಲ್ ವಾದ ಮಂಡಿಸಿದರು.

[ತೀರ್ಪಿನ ಪ್ರತಿ]

PS_Government_Department_of_Revenue_V_Niijinoy_Trading.pdf
Preview