CJI DY Chandrachud and West Bengal CM, Mamata Banerjee  facebook
ಸುದ್ದಿಗಳು

ತಾವು ನ್ಯಾಯ ದೇವತೆಗಳು ಎಂದು ನ್ಯಾಯಾಧೀಶರು ಭಾವಿಸಿಕೊಂಡರೆ ಅದರಿಂದ ಗಂಭೀರ ಅಪಾಯ: ಸಿಜೆಐ ಚಂದ್ರಚೂಡ್

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅದೇ ಕಾರ್ಯಕ್ರಮದಲ್ಲಿ ನ್ಯಾಯಾಲಯಗಳನ್ನು ಪೂಜಾ ಸ್ಥಳಗಳಿಗೆ ಹೋಲಿಸಿದ ಬೆನ್ನಲ್ಲೇ ಸಿಜೆಐ ಈ ಹೇಳಿಕೆ ನೀಡಿದ್ದಾರೆ.

Bar & Bench

ನ್ಯಾಯಾಲಯಗಳನ್ನು ನ್ಯಾಯ ದೇಗುಲಗಳು ಎಂದು ಕರೆಯುವುದಕ್ಕೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಶನಿವಾರ ಆಕ್ಷೇಪ ವ್ಯಕ್ತಪಡಿಸಿದ್ದು ತಾವು ನ್ಯಾಯ ದೇಗುಲಗಳ ದೇವರುಗಳು ಎಂದು ನ್ಯಾಯಾಧೀಶರು ಭಾವಿಸುವುದರಲ್ಲಿ ಗಂಭೀರ ಅಪಾಯ ಇದೆ ಎಂದಿದ್ದಾರೆ.

ಕೋಲ್ಕತ್ತಾದಲ್ಲಿ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯ ಪ್ರಾದೇಶಿಕ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಸಿಜೆಐ ನಮ್ಮನ್ನು ಗೌರವಾನ್ವಿತ ನ್ಯಾಯಮೂರ್ತಿಗಳು ಇಲ್ಲವೇ ಲಾರ್ಡ್‌ಶಿಪ್‌ ಲೇಡಿಶಿಪ್‌ ಎಂದು ಕರೆಯುವುದು ಬಹಳ ಅಪಾಯಕಾರಿ. ಜನ ನ್ಯಾಯಾಲಯಗಳನ್ನು ನ್ಯಾಯ ದೇಗುಲಗಳು ಎನ್ನುತ್ತಾರೆ. ನಮ್ಮನ್ನು ನಾವು ಆ ದೇಗುಲಗಳ  ದೇವತೆಗಳು ಎಂದು ಗ್ರಹಿಸುವುದು ಗಂಭೀರ ಅಪಾಯಕಾರಿ. ಆದ್ದರಿಂದ ನನ್ನ ಬಗ್ಗೆ ಹೇಳುವುದಾದರೆ ಆಳದಲ್ಲಿ ವೈಯಕ್ತಿಕವಾಗಿರುವ ನನ್ನದೇ ಆದ ಮೌಲ್ಯಗಳಿದ್ದರೂ ನ್ಯಾಯಾಧೀಶರು ದೇವರಾಗಿಬಿಡುವ ಕಾರಣಕ್ಕೆ ನ್ಯಾಯದ ದೇಗುಲ ಎಂದು ಯಾರಾದರೂ ಕರೆಯುವುದಕ್ಕೆ  ನಾನು ಹಿಂಜರಿಕೆ ವ್ಯಕ್ತಪಡಿಸುತ್ತೇನೆ ಎಂದರು.

ಬದಲಿಗೆ ಸಹಾನುಭೂತಿ ಮತ್ತು ಕರುಣೆಯಿಂದ ಜನರ ಸೇವೆ ಮಾಡುವವರಂತೆ ನ್ಯಾಯಾಧೀಶರನ್ನು ಕಾಣಬಯಸುವುದಾಗಿ ಅವರು ನುಡಿದರು.

ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನ್ಯಾಯಾಲಯಗಳನ್ನು ಪೂಜಾ ಸ್ಥಳಗಳೊಂದಿಗೆ ಸಮೀಕರಿಸಿದ ಬೆನ್ನಲ್ಲೇ ಸಿಜೆಐ ಈ ಹೇಳಿಕೆ ನೀಡಿದ್ದಾರೆ.

"ನ್ಯಾಯಾಂಗ ನಮ್ಮ ಪಾಲಿನ ಪ್ರಮುಖ ದೇವಾಲಯ. ಮಂದಿರ, ಮಸೀದಿ, ಗುರುದ್ವಾರ ಮತ್ತು ಗಿರ್ಜಾದಂತೆಯೇ (ಚರ್ಚ್) ಇದು ಕೂಡ. ಇದು ಜನರಿಗೆ ನ್ಯಾಯ ತಲುಪಿಸುವ ಪರಮೋನ್ನತ ಸಂಸ್ಥೆ ... ನ್ಯಾಯವನ್ನು ಪಡೆಯುವ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯುವ ಕೊನೆಯ ತಾಣ "  ಎಂದು ಬ್ಯಾನರ್ಜಿ ಹೇಳಿದ್ದರು.

"ನ್ಯಾಯಾಂಗ ರಾಜಕೀಯ ಪಕ್ಷಪಾತದಿಂದ ಮುಕ್ತವಾಗಿರಬೇಕು. ಜೊತೆಗೆ ಶುದ್ಧ ಮತ್ತು ಪ್ರಾಮಾಣಿಕವಾಗಿರಬೇಕು” ಎಂದು ಮಮತಾ ಕರೆ ನೀಡಿದರು. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ನ್ಯಾಯಾಲಯಗಳು ಜನರ ಏಕೈಕ ಭರವಸೆಯಾಗಿವೆ” ಎಂದರು.

"ಯಾರನ್ನಾದರೂ ಅಮಾನುಷವಾಗಿ ನಡೆಸಿಕೊಳ್ಳುವುದು ಅಥವಾ ಅವಮಾನಿಸುವುದು ನನ್ನ ಉದ್ದೇಶವಲ್ಲ. ಆದರೆ ನನ್ನ ವಿನಯಪೂರ್ವಕ ಮನವಿ  ಏನೆಂದರೆ, ದಯವಿಟ್ಟು ನ್ಯಾಯಾಂಗದಲ್ಲಿ ಯಾವುದೇ ರಾಜಕೀಯ ಪಕ್ಷಪಾತವಿಲ್ಲದಂತೆ ನೋಡಿಕೊಳ್ಳಿ. ನ್ಯಾಯಾಂಗ ಶುದ್ಧವಾಗಿರಬೇಕು, ಪ್ರಾಮಾಣಿಕವಾಗಿರಬೇಕು, ಆತ್ಯಂತಿಕವಾಗಿ ಪರಿಶುದ್ಧವಾಗಿರಬೇಕು, ಪವಿತ್ರವಾಗಿರಬೇಕು ಮತ್ತು ಜನರು ಪೂಜಿಸುವಂತಿರಬೇಕು," ಎಂದು ಮುಖ್ಯಮಂತ್ರಿ ಹೇಳಿದ್ದರು.