ಘಟಿಸಿದ ಅಪರಾಧ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯಿದೆಯ ವ್ಯಾಪ್ತಿಯಲ್ಲಿದ್ದರೆ ಆಗ ಜಿಎಸ್‌ಟಿ ಅಧಿಕಾರಿಗಳು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ಗಳನ್ನು ಅನ್ವಯಿಸುವಂತಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ ದೀಪಕ್ ಸಿಂಘಾಲ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಅಂತೆಯೇ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಉದ್ಯಮಿ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ನ್ಯಾಯಮೂರ್ತಿಗಳಾದ ಎಸ್ ಎ ಧರ್ಮಾಧಿಕಾರಿ ಮತ್ತು ಡಿ ವಿ ರಮಣ ಅವರಿದ್ದ ಪೀಠ ರದ್ದುಗೊಳಿಸಿದೆ. ಅರ್ಜಿದಾರ ಉದ್ಯಮಿ ಸರಕು ಅಥವಾ ಸೇವಾ ತೆರಿಗೆ ಪಾವತಿಸದೆ; ಆದರೆ ಸರಕುಪಟ್ಟಿ ಅಥವಾ ಬಿಲ್ ನೀಡುವ ನಕಲಿ ಮತ್ತು ವಂಚಕ ನೋಂದಣಿ ಸಂಸ್ಥೆಯನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.
ಜಿಎಸ್‌ಟಿ ಕಾಯಿದೆ- 2017 ಒಂದು ವಿಶೇಷ ಕಾಯಿದೆಯಾಗಿದ್ದು, ಇದು ಪ್ರಕ್ರಿಯೆ, ದಂಡ ಮತ್ತು ಅಪರಾಧಗಳ ಬಗ್ಗೆ ಸಮಗ್ರವಾಗಿ ವ್ಯವಹರಿಸುತ್ತದೆ. ಈ ಕಾಯಿದೆ ಮೀರಿ ತನಿಖೆ ನಡೆಸಲು ಜಿಎಸ್‌ಟಿ ಅಧಿಕಾರಿಗಳಿಗೆ ಅನುಮತಿಸಲಾಗದು ಎಂದು ಅದು ಹೇಳಿದೆ.
ಜಿಎಸ್‌ಟಿ ಅಧಿಕಾರಿಗಳು, ಜಿಎಸ್‌ಟಿ ಕಾಯಿದೆಯಡಿ ಸೂಚಿಸಲಾದ ಪ್ರಕ್ರಿಯೆಗಳನ್ನು ನಡೆಸುವ ಬದಲು ಸ್ಥಳೀಯ ಪೊಲೀಸರಿಗೆ ತನಿಖೆ ವಹಿಸಿದರೆ ಆಗ ಅದು ಕಾಯಿದೆಯ ಉದ್ದೇಶವನ್ನು ವಿಫಲಗೊಳಿಸುತ್ತದೆ ಎಂದು ಕೂಡ ಪೀಠ ನುಡಿದಿದೆ.
ಅರ್ಜಿದಾರರ ವಿರುದ್ಧ ನೇರವಾಗಿ ಐಪಿಸಿ ಸೆಕ್ಷನ್‌ಗಳನ್ನು ಅನ್ವಯಿಸುವ ಮೂಲಕ ಜಿಎಸ್‌ಟಿ ಅಧಿಕಾರಿಗಳು ಜಿಎಸ್‌ಟಿ ಕಾಯಿದೆಯ ಪ್ರಕ್ರಿಯಾತ್ಮಕ ಅವಶ್ಯಕತೆಗಳನ್ನು ಮೀರಿದ್ದಾರೆ. ಆದರೆ ಜಿಎಸ್‌ಟಿ ಕಾಯಿದೆ ಸೆಕ್ಷನ್ 132(6) ಅಡಿಯಲ್ಲಿ ತನಿಖೆ ಆರಂಭಕ್ಕೂ ಮುನ್ನ ಜಿಎಸ್‌ಟಿ ಆಯುಕ್ತರ ಅನುಮತಿ ಪಡೆಯುವುದು ಕಡ್ಡಾಯ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ಪ್ರತಿವಾದಿಗಳ ಪರ ವಕೀಲರು, ಜಿಎಸ್‌ಟಿ ಕಾಯಿದೆ ಮತ್ತು ಐಪಿಸಿ ಕಾಯಿದೆಯಡಿಯ ಅಪರಾಧಗಳು ಭಿನ್ನವಾಗಿದ್ದು ಜಿಎಸ್‌ಟಿ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪೊಲೀಸ್ ಅಧಿಕಾರಿಗಳು ಐಪಿಸಿ ಸೆಕ್ಷನ್‌ಗಳ ಅಡಿ ಅಪರಾಧ ದಾಖಲಿಸಿಕೊಳ್ಳಲು ಯಾವುದೇ ನಿರ್ಬಂಧ ಇಲ್ಲ ಎಂದಿದ್ದರು.
ಈ ವಾದವನ್ನು ತಿರಸ್ಕರಿಸಿರುವ ನ್ಯಾಯಾಲಯ ಅರ್ಜಿದಾರರ ವಿರುದ್ಧದ ಆರೋಪಗಳನ್ನು ಪರಿಗಣಿಸಿದರೂ ಅದು ಜಿಎಸ್‌ಟಿ ಕಾಯಿದೆಯ ಸೆಕ್ಷನ್ 132ರ ವ್ಯಾಪ್ತಿಯ ಅಪರಾಧವಾಗಿದೆ ಎಂದು ನುಡಿದಿದೆ. ಅಲ್ಲದೆ ಎಫ್‌ಐಆರ್ ದಾಖಲಿಸುವ ಮುನ್ನ ಜಿಎಸ್‌ಟಿ ಕಾಯಿದೆಯಲ್ಲಿ ತಿಳಿಸಿರುವಂತೆ ಆಯುಕ್ತರಿಂದ ಅನುಮತಿ ಪಡೆದಿರಲಿಲ್ಲ ಎಂದು ಹೇಳಿದ ನ್ಯಾಯಾಲಯ ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಿತು.