ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯ ಕುರಿತು ಗುಜರಾತ್ ಹೈಕೋರ್ಟ್ ಶುಕ್ರವಾರ ಭಿನ್ನ ತೀರ್ಪು ನೀಡಿದೆ [ಆಶುಮಲ್ ಅಲಿಯಾಸ್ ಅಸಾರಂ ಥೌಮಲ್ ಸಿಂಧಿ ಮತ್ತು ಗುಜರಾತ್ ಸರ್ಕಾರ ನಡುವಣ ಪ್ರಕರಣ].
"ಈ ಪ್ರಕರಣದಲ್ಲಿ ನಾವು ಭಿನ್ನ ತೀರ್ಪು ನೀಡುತ್ತಿದ್ದೇವೆ. ಮೂರು ತಿಂಗಳ ಅವಧಿಗೆ ಜಾಮೀನು ನೀಡುವ ಮನಸ್ಥಿತಿಯಲ್ಲಿ ನಾನು ಇದ್ದೇನೆ. ಸಹೋದ್ಯೋಗಿ (ನ್ಯಾಯಮೂರ್ತಿ ಭಟ್) ಭಿನ್ನ ನಿಲುವು ತಳೆದಿದ್ದಾರೆ. ಆದ್ದರಿಂದ 10-15 ನಿಮಿಷಗಳಲ್ಲಿ ನಾವು ಆದೇಶಕ್ಕೆ ಸಹಿ ಹಾಕಿ ಅದನ್ನು ಪ್ರಕಟಿಸುತ್ತೇವೆ. ಅದನ್ನು ಮೂರನೇ ನ್ಯಾಯಮೂರ್ತಿಗಳಿಗೆ ವರ್ಗಾಯಿಸುವುದಕ್ಕಾಗಿ ಮುಖ್ಯ ನ್ಯಾಯಮೂರ್ತಿಗಳೆದುರು ಪ್ರಕರಣ ಮಂಡಿಸಬೇಕು” ಎಂದು ನ್ಯಾಯಾಲಯ ಸಂಬಂಧಪಟ್ಟವರಿಗೆ ಸೂಚಿಸಿತು.
ಸಮಯ ಬಹಳ ಮುಖ್ಯವಾಗಿರುವುದರಿಂದ ಮುಖ್ಯ ನ್ಯಾಯಮೂರ್ತಿಗಳಲ್ಲಿ ಪ್ರಕರಣ ಪ್ರಸ್ತಾಪಿಸುವುದಾಗಿ ಅಸಾರಾಂ ಪರ ವಕೀಲರು ಹೇಳಿದರು. ಮಾರ್ಚ್ 25ರಂದು ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು.
ಸೂರತ್ ಆಶ್ರಮದಲ್ಲಿ ಮಹಿಳಾ ಶಿಷ್ಯೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ಅಸಾರಾಂ ಬಾಪು ಅವರನ್ನು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೋಷಿ ಎಂದು ಜನವರಿ 2023 ರಲ್ಲಿ ಗಾಂಧಿನಗರ ಸೆಷನ್ಸ್ ನ್ಯಾಯಾಲಯ ಘೋಷಿಸಿತ್ತು.ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಗುಜರಾತ್ ಹೈಕೋರ್ಟ್‌ನಲ್ಲಿ ಬಾಕಿ ಇದೆ.
ಈ ಮಧ್ಯೆ, ಅಸಾರಾಂ ಅವರನ್ನು ಜೈಲಿನಿಂದ ಮಧ್ಯಂತರ ಬಿಡುಗಡೆ ಮಾಡುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಕಳೆದ ಆಗಸ್ಟ್‌ನಲ್ಲಿ, ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಲು ಹೈಕೋರ್ಟ್ ನಿರಾಕರಿಸಿತ್ತು. ಶಿಕ್ಷೆಯ ವಿರುದ್ಧದ ಮೇಲ್ಮನವಿ ಬಾಕಿ ಇರುವಾಗ ಅಸಾರಾಂ ಅವರನ್ನು ಜೈಲಿನಿಂದ ಮಧ್ಯಂತರ ಬಿಡುಗಡೆ ಮಾಡಲು ಯಾವುದೇ ಅಸಾಧಾರಣ ಕಾರಣಗಳಿಲ್ಲ ಎಂದು ಹೈಕೋರ್ಟ್ ತಿಳಿಸಿತ್ತು. ಹೀಗಾಗಿ ಅಸಾರಾಂ ಸುಪ್ರೀಂ ಕೋರ್ಟ್ ಮೊರೆ ಹೋಗುವಂತಾಗಿತ್ತು.
ಈ ವರ್ಷದ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಆಸಾರಾಮ್‌ಗೆ ವೈದ್ಯಕೀಯ ಕಾರಣದ ಮೇಲೆ ಮಾರ್ಚ್ 31ರವರೆಗೆ ಮಧ್ಯಂತರ ಜಾಮೀನು ನೀಡಿತ್ತು .