ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ನ್ಯಾಯಾಲಯದ ಆಯುಕ್ತರ ಸಮೀಕ್ಷೆ ವೇಳೆ ಪತ್ತೆ ಹಚ್ಚಲಾಗಿದ್ದ ಶಿವಲಿಂಗಕ್ಕೆ ಪೂಜೆ ಸಲ್ಲಿಸುವ ಹಕ್ಕು ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಪ್ರಕರಣವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರ ಪೀಠದ ಮುಂದೆ ಹಿಂದೂ ಪಕ್ಷಕಾರರ ಪರ ವಕೀಲ ವಿಷ್ಣು ಜೈನ್ ಅವರು ಪ್ರಸ್ತಾಪಿಸಿದರು.
ಮಸೀದಿಯಲ್ಲಿ ಕೋರ್ಟ್ ಕಮಿಷನರ್ ನಡೆಸಿರುವ ಸಮೀಕ್ಷೆ ಪ್ರಶ್ನಿಸಿ ಮುಸ್ಲಿಂ ಪಕ್ಷಕಾರರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಸರ್ವೋಚ್ಚ ನ್ಯಾಯಾಲಯದಲ್ಲಿ ಜುಲೈ 21ರಂದು ನಡೆಯಲಿದೆ. ಅಂದೇ ಈ ಅರ್ಜಿಯ ವಿಚಾರಣೆ ನಡೆಸಲುವಂತೆ ವಿಷ್ಣು ಅವರು ನ್ಯಾಯಾಲಯವನ್ನು ಕೋರಿದರು. ಈ ಹಿನ್ನೆಲೆಯಲ್ಲಿ ಒಟ್ಟಿಗೆ ವಿಚಾರಣೆ ನಡೆಸಲು ನ್ಯಾಯಾಲಯ ಸಮ್ಮತಿಸಿತು. ಹೊಸ ಅರ್ಜಿಯನ್ನು ವಕೀಲರಾದ ಹರಿ ಶಂಕರ್ ಜೈನ್ ಮತ್ತು ವಿಷ್ಣು ಶಂಕರ್ ಜೈನ್ ಸಲ್ಲಿಸಿದ್ದಾರೆ.
ಹೊಸ ಅರ್ಜಿಯಲ್ಲಿ ಏನಿದೆ?
ಕೋರ್ಟ್ ಕಮಿಷನರ್ ಸಮೀಕ್ಷೆ ವೇಳೆ ಪತ್ತೆಯಾದ ಶಿವಲಿಂಗ ಸ್ವಾಧೀನಕ್ಕೆ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟ್ ಮಂಡಳಿಗೆ ನಿರ್ದೇಶನ ನೀಡಬೇಕು.
ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳ ಹಾಗೂ ಅವಶೇಷಗಳ ಕಾಯಿದೆ ಪ್ರಕಾರ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಶಿವಲಿಂಗದ ಕಾರ್ಬನ್ ಡೇಟಿಂಗ್ ನಡೆಸಬೇಕು.
ಶಿವಲಿಂಗದ ಕೆಳಗಿರುವ ನಿರ್ಮಾಣದ ಸ್ವರೂಪವನ್ನು ನಿರ್ಧರಿಸಲು ಎಎಸ್‌ಐಗೆ ನಿರ್ದೇಶನ ನೀಡಬೇಕು.
ಭಕ್ತರು ವರ್ಚುವಲ್ ವಿಧಾನದಲ್ಲಿ ಶಿವಲಿಂಗದ ದರ್ಶನ ಪಡೆಯಲು ಮತ್ತು ಸಾಂಕೇತಿಕ ಪೂಜೆ ನೆರವೇರಿಸಲು ನೇರ ಪ್ರಸಾರ ಅಳವಡಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು.