Hathras Gang-rape case 
ಸುದ್ದಿಗಳು

ಹಾಥ್‌ರಸ್‌ ಅತ್ಯಾಚಾರ: ಸುಳ್ಳು ಸಂಕಥನ ನಿವಾರಣೆಗೆ ಸಿಬಿಐಗೆ ಪ್ರಕರಣದ ವಿಚಾರಣೆ; ಸುಪ್ರೀಂಗೆ ಯುಪಿ ಸರ್ಕಾರದ ಅಫಿಡವಿಟ್

Bar & Bench

ಉತ್ತರ ಪ್ರದೇಶ ಸರ್ಕಾರವು ಹಾಥ್‌ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿನ ತನ್ನ ನಡೆಯ ಕುರಿತು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿರುವ ಅಫಿಡವಿಟ್‌ನಲ್ಲಿ ಸಮರ್ಥಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತಮ ತನಿಖೆಯ ನಡುವೆಯೂ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವುದು ರಾಜಕೀಯ ಪಿತೂರಿಯ ಭಾಗವಾಗಿದ್ದು, ಇದಕ್ಕಾಗಿ ಸಾಮಾಜಿಕ, ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮದ ಮೂಲಕ ಅಪಪ್ರಚಾರ ನಡೆಸಲಾಗಿದೆ ಎಂದು ಹೇಳಿದೆ.

ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಯಾವುದೇ ಹಿತಾಸಕ್ತಿಗಳು ತಡೆಯೊಡ್ಡಲಾಗದು ಎಂದಿರುವ ರಾಜ್ಯ ಸರ್ಕಾರವು ಅದಕ್ಕಾಗಿಯೇ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಪ್ರಕರಣದ ವಿಚಾರಣೆ ಒಪ್ಪಿಸಲಾಗಿದೆ ಎಂದು ಹೇಳಿದೆ. ರಾಜ್ಯ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಹಲವು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಲಾಗಿದ್ದು, ಈ ಪೈಕಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಸೂರ್ಯೋದಯಕ್ಕೂ ಮುನ್ನ ಸಂತ್ರಸ್ತೆಯ ಕಳೇಬರವನ್ನು ದಹನ ಮಾಡಲಾಯಿತು ಎಂದು ಸರ್ಕಾರವು ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

ಸಂತ್ರಸ್ತೆ ಸೆಪ್ಟೆಂಬರ್ 29ರಂದು ಕೊನೆಯುಸಿರೆಳೆದ ದಿನ ಸರ್ಕಾರದ ಗುಪ್ತಚರ ವರದಿಯ ಪ್ರಕಾರ ಘಟನೆಗೆ ಜಾತಿ/ಕೋಮು ಬಣ್ಣ ನೀಡುವ ಮೂಲಕ ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸುವ ಪ್ರಯತ್ನ ನಡೆಸಲಾಗಿತ್ತು. ಸಂಭಾವ್ಯ ಹಿಂಸಾಚಾರ ತಪ್ಪಿಸುವ ಉದ್ದೇಶದಿಂದ ಸಂತ್ರಸ್ತೆಯ ಕುಟುಂಬಸ್ಥರು ಯುವತಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಮ್ಮತಿಸಿದ್ದರು ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.

ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿರುವ ಪ್ರಮುಖ ಅಂಶಗಳು ಇಂತಿವೆ.

  • ಅತ್ಯಂತ ಪರಿಶ್ರಮವಹಿಸಿ ತನಿಖೆ ನಡೆಸಲಾಗುತ್ತಿತ್ತು. ಹಾಗಿದ್ದರೂ ಕೆಲವು ಹಿತಾಸಕ್ತಿಗಳ ಸುಳ್ಳು ಸಂಕಥನವು ಬಲಗೊಳ್ಳುತ್ತಿದೆ.

  • ತನಿಖೆಯನ್ನು ನ್ಯಾಯಯುತ, ನಿಷ್ಟಕ್ಷಪಾತ ಮತ್ತು ತಟಸ್ಥವಾಗಿ ನಡೆಸುವ ಉದ್ದೇಶದಿಂದ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಎಸ್‌ಐಟಿಯ ನೇತೃತ್ವವನ್ನು ಗೃಹ ಕಾರ್ಯದರ್ಶಿ ದರ್ಜೆಯ ಅಧಿಕಾರಿ ವಹಿಸಿದ್ದು, ಇದರಲ್ಲಿ ಮಹಿಳಾ ಅಧಿಕಾರಿ ಮತ್ತು ಉಪ ಪೊಲೀಸ್‌ ಮಹಾನಿರ್ದೇಶಕರು ಇದ್ದಾರೆ.

  • ರಾಜ್ಯ ಸರ್ಕಾರದ ಆಡಳಿತಾತ್ಮಕ ವ್ಯಾಪ್ತಿಗೆ ಒಳಪಡದ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಯು ನ್ಯಾಯಯುತ ಮತ್ತು ನಿಷ್ಪಕ್ಷಪಾತ ನಡೆಸಲಿದ್ದು, ಕೆಲವು ಸ್ಥಾಪಿತ ಹಿತಾಸಕ್ತಿಗಳು ಸೃಷ್ಟಿಸಿರುವ ಕಥನಗಳನ್ನು ತನಿಖೆ ಬಯಲು ಮಾಡಲಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಮೂಲಕ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದೆ.

  • ಇತ್ತೀಚಿನ ಘಟನೆಯನ್ನು ಹಿನ್ನೆಲೆಯಾಗಿಸಿಕೊಂಡು ಸಾಮಾಜಿಕ ಮಾಧ್ಯಮ, ಕೆಲವು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳನ್ನು ಬಳಸಿಕೊಂಡು ಕೆಲವು ರಾಜಕೀಯ ಪಕ್ಷಗಳು ಉದ್ದೇಶಪೂರ್ವಕ ಮತ್ತು ಯೋಜಿತ ಪ್ರಯತ್ನಗಳ ಮೂಲಕ ಜಾತಿ ಅಥವಾ ಕೋಮು ದಂಗೆ ನಡೆಸಲು ಯತ್ನ ನಡೆಸಿವೆ.

  • ಹಾಥ್‌ರಸ್ ಘಟನೆಯನ್ನು ಇಟ್ಟುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಆಧಾರರಹಿತ ಪ್ರತಿಕ್ರಿಯೆಗಳು ಮತ್ತು ಕಲ್ಪಿತ ಸಂಕಥನಗಳ ಮೂಲಕ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವ ವ್ಯವಸ್ಥಿತ ಯತ್ನ ಮಾಡಲಾಗುತ್ತಿದೆ.

  • ಉತ್ತರ ಪ್ರದೇಶ ಸರ್ಕಾರಕ್ಕೆ ಅಪಕೀರ್ತಿ ತರುವ ಯತ್ನವನ್ನು ವಿರೋಧಿ ರಾಜಕೀಯ ಪಕ್ಷಗಳು ಮಾಡುತ್ತಿವೆ. ಸುಳ್ಳು ಸುದ್ದಿಗಳನ್ನು 'ಕಾಪಿ ಮಾಡಿ ಪೇಸ್ಟ್ ಮಾಡುವ' ಮೂಲಕ ಪರೋಕ್ಷ ರಾಜಕೀಯ ಯುದ್ಧವನ್ನೇ ನಡೆಸಲಾಗುತ್ತಿದೆ. ಅಪಪ್ರಚಾರದ ಮೂಲಕ ಉತ್ತರ ಪ್ರದೇಶದ ಘನತೆಯನ್ನು ಕುಂದಿಸುವ ಕೆಲಸ ಮಾಡಲಾಗುತ್ತಿದೆ.

  • ಈ ಹಿನ್ನೆಲೆಯಲ್ಲಿ ಕೇಂದ್ರೀಯ ಸಂಸ್ಥೆ ತನಿಖೆ ನಡೆಸುವುದು ಅತ್ಯಂತ ಮುಖ್ಯವಾಗಿದೆ. ತನಿಖೆ ಆರಂಭಿಸುವಂತೆ ಸಿಬಿಐಗೆ ಮನವಿ ಮಾಡಿದ್ದು, ಈ ಮೂಲಕ ಸ್ಥಾಪಿತ ಹಿತಾಸಕ್ತಿಗಳ ಹುಸಿ ಸಂಕಥನ ಹಾಗೂ ದುರುದ್ದೇಶಪೂರಿತ ಯತ್ನಗಳನ್ನು ವಿಫಲಗೊಳಿಸಬೇಕಿದೆ.

ಸಂತ್ರಸ್ತೆಯ ಅಂತ್ಯಕ್ರಿಯೆಗೆ ಸಂಬಂಧಿಸಿದ್ದಕ್ಕೆ ಪ್ರತಿಕ್ರಿಯೆ:

ಮೊದಲ ದೂರು: ಸೆಪ್ಟೆಂಬರ್‌ 14ರಂದು ವರದಿಯಾದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿದ್ದಾರೆ. ತನ್ನ ಸಹೋದರಿಯ ಕತ್ತು ಹಿಸುಕಿ ಕೊಲೆ ಮಾಡುವ ಯತ್ನ ನಡೆದಿದೆ ಎಂದು ಸಂತ್ರಸ್ತೆಯ ಸಹೋದರ ಕೈಬರಹದಲ್ಲಿ ದೂರು ನೀಡಿದ್ದಾರೆ. ಮುಂದುವರೆದು, ಕುಟುಂಬಗಳ ನಡುವಿನ ವೈಷಮ್ಯದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ದೂರುದಾರರು ಉಲ್ಲೇಖಿಸಿದ್ದಾರೆ. ಸಂತ್ರಸ್ತೆ ದಲಿತ ಸಮುದಾಯಕ್ಕೆ ಸೇರಿದ್ದು, ಆಕೆಯ ತಾಯಿ ಠಾಕೂರ್ ಸಮುದಾಯದ ವ್ಯಕ್ತಿ ಅಪರಾಧ ಎಸಗಿದ್ದಾರೆ ಎಂದು ಹೇಳಿದ್ದಾರೆ. ಕೊಲೆ ಯತ್ನ ಹಾಗೂ ಎಸ್‌ ಸಿ/ಎಸ್‌ ಟಿ ಕಾಯಿದೆಯ ಅನುಸಾರ ಎಫ್ಐಆರ್ (ನಂಬರ್ 136) ದಾಖಲಿಸಲಾಗಿದೆ.

ಮೊದಲ ವೈದ್ಯಕೀಯ ಪರೀಕ್ಷೆ: ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ವೈದ್ಯಕೀಯ ಪರೀಕ್ಷೆಯಲ್ಲಿ ಸಂತ್ರಸ್ತೆ ಕತ್ತಿನ ಭಾಗದಲ್ಲಿ ಗಂಭೀರ ಗಾಯವಾಗಿದೆ ಎಂದು ವರದಿ ಬಂದಿದೆ. ಯಾವುದೇ ತೆರನಾದ ವೈದ್ಯಕೀಯ ಕಾನೂನು (ಎಂಎಲ್ ‌ಸಿ) ದಾಖಲೆ ಸಿದ್ಧಪಡಿಸಲಾಗಿಲ್ಲ. ತಕ್ಷಣ ಸಂತ್ರಸ್ತೆಯನ್ನು ಅಲಿಗಢ ಜೆ ಎಂ ವೈದ್ಯಕೀಯ ಕಾಲೇಜಿಗೆ ದಾಖಲಿಸುವಂತೆ ಸೂಚಿಸಲಾಗಿದ್ದು, ಅದಕ್ಕೆ ಸಂತ್ರಸ್ತೆಯ ತಂದೆ ಒಪ್ಪಿಗೆ ನೀಡಿದ್ದಾರೆ. ಅಲಿಗಢದಲ್ಲಿ ವೈದ್ಯರು ಸಂತ್ರಸ್ತೆಯ ಕತ್ತಿನ ಹಿಂದಿನ ಭಾಗದಲ್ಲಿ ಮೂಳೆ ಮುರಿತವಾಗಿದೆ ಎಂದು ತಿಳಿಸಿದ್ದಾರೆ. ಸಂತ್ರಸ್ತೆಯ ಪೋಷಕರು ನಿರಾಕರಿಸಿದ ಹಿನ್ನೆಲೆಯಲ್ಲಿ 15 ದಿನ ಸಂತ್ರಸ್ತೆಯು ಅಲಿಗಢದ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲೇ ಕಳೆದಿದ್ದು, ಬೆನ್ನುಮೂಳೆಗೆ ಸಂಬಂಧಿಸಿದಂತೆ ವಿಶೇಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿಲ್ಲ.

ಸಿಆರ್‌ಪಿಸಿ ಸೆಕ್ಷನ್ 161ರ ಅಡಿ ಪೊಲೀಸರಿಗೆ ಹೇಳಿಕೆ ನೀಡಿದ ಸಂತ್ರಸ್ತೆ: ಸಿಆರ್‌ಪಿಸಿ ಸೆಕ್ಷನ್ 161ರ ಅಡಿ ಪೊಲೀಸರು ಸೆಪ್ಟೆಂಬರ್ 19ರಂದು ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆರೋಪಿ ಸಂದೀಪ್ ತನಗೆ ಕಿರುಕುಳ ನೀಡಿದ್ದು, ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ದಾನೆ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. ಇದರ ಆಧಾರದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ರ ಅಡಿ ಪೊಲೀಸರು ದೂರು ದಾಖಲಿಸಿದ್ದಾರೆ.

ಮೊದಲ ಆರೋಪಿಯ ಬಂಧನ: ಸಂತ್ರಸ್ತೆ ಹೇಳಿದ ಮೊದಲ ಆರೋಪಿ ಸಂದೀಪ್ ನನ್ನು ಸೆಪ್ಟೆಂಬರ್ 20ರಂದು ಕೊಲೆ ಯತ್ನ, ಕಿರುಕುಳ ಮತ್ತು ಎಸ್‌ ಸಿ/ಎಸ್‌ ಟಿ ಕಾಯಿದೆ ಅಡಿ ಬಂಧಿಸಲಾಗಿದೆ.

ಸಂತ್ರಸ್ತೆಯ ಪರಿಷ್ಕೃತ ಹೇಳಿಕೆ: ಸೆಪ್ಟೆಂಬರ್ 22ರಂದು ಸಂತ್ರಸ್ತೆ ಪರಿಷ್ಕೃತ ಹೇಳಿಕೆ ನೀಡಿದ್ದು, ಸಂದೀಪ್‌ ದುಪ್ಪಟದಿಂದ ಕತ್ತು ಹಿಸುಕಿ ಕೊಲೆ ಯತ್ನ ಮಾಡುವುದಕ್ಕೂ ಮುನ್ನ ಸಂದೀಪ್‌ ಹೊರತುಪಡಿಸಿ ರಾಮು, ಲವಕುಶ, ರವಿ ತನ್ನ ಮೇಲೆ ಅತ್ಯಾಚಾರ ಎಸಗಿದರು ಎಂದು ಹೇಳಿಕೆ ನೀಡಿದ್ದರು. ಬಳಿಕ ಸೆಕ್ಷನ್ 376ಡಿ ಅನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗಿದ್ದು, ಸಂತ್ರಸ್ತೆ ಹೇಳಿದ ಮೂವರನ್ನೂ ಬಂಧಿಸಲಾಗಿದೆ. ಪ್ರಕರಣದಿಂದ ಐಪಿಸಿ ಸೆಕ್ಷನ್ 354 ಅನ್ನು ತೆಗೆದು ಹಾಕಲಾಗಿದೆ.

ಲೈಂಗಿಕ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿಲ್ಲ: ಸಂತ್ರಸ್ತೆಯ ಸಾಮೂಹಿಕ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ವಿಧಿವಿಜ್ಞಾನ ಪರೀಕ್ಷೆ ನಡೆಸಲಾಗಿದೆ. ಆದರೆ, ತರಚುವಿಕೆ, ಜಜ್ಜುವಿಕೆ, ಚರ್ಮ ಅಥವಾ ಮಾಂಸ ಖಂಡದ ಮೇಲೆ ಆಳವಾದ ಗಾಯ, ಊತ ಕಾಣಿಸಿಕೊಂಡಿಲ್ಲ ಮತ್ತು ಮೇಲ್ನೋಟಕ್ಕೆ ಅತ್ಯಾಚಾರದ ಸುಳಿವುಗಳು ಕಂಡಿಲ್ಲ.

ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಸಂತ್ರಸ್ತೆ ಕೊನೆಯುಸಿರು: ಪೋಷಕರ ಒಪ್ಪಿಗೆ ಪಡೆದು ಸಂತ್ರಸ್ತೆಯನ್ನು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಂಎಲ್‌ಸಿ ದಾಖಲೆಯ ಪ್ರಕಾರ ಕತ್ತಿನ ಭಾಗದಲ್ಲಿ ಸಂತ್ರಸ್ತೆಗೆ ಗಾಯಗಳಾಗಿದ್ದವು. ಮೂಗು, ಕಿವಿ, ಬಾಯಿ ಅಥವಾ ಇನ್ಯಾವುದೇ ಭಾಗದಲ್ಲಿ ಗಾಯವಿರಲಿಲ್ಲ. ಸಂತ್ರಸ್ತೆಯು ಸೆಪ್ಟೆಂಬರ್ 29ರ ಬೆಳಿಗ್ಗೆ 6.55ಕ್ಕೆ ಕೊನೆಯುಸಿರೆಳೆದಿದ್ದರು.

ಸೆಪ್ಟೆಂಬರ್ 29ರಂದು ಮರಣೋತ್ತರ ಪರೀಕ್ಷೆ: ಸಂತ್ರಸ್ತೆಯ ಮರಣೋತ್ತರ ಪರೀಕ್ಷೆ ಬೆಳಿಗ್ಗೆ 10.15ಕ್ಕೆ ಆರಂಭವಾಗುತ್ತಿದ್ದಂತೆ ರಾಜಕಾರಣಿಗಳು ಸೇರಿದಂತೆ ಸಾಕಷ್ಟು ಜನರು ತಮ್ಮ ಬೆಂಬಲಿಗರ ಜೊತೆ ಆಸ್ಪತ್ರೆಯ ಆವರಣದಲ್ಲಿ ಜಮಾಯಿಸಿದ್ದರು. ಪ್ರತಿಭಟನಾಕಾರರು ಘೋಷಣೆ ಕೂಗಲಾರಂಭಿಸಿದರು. ಸಾಮಾಜಿಕ ಕಾರ್ಯಕರು ಸೇರಿದಂತೆ ಬಹುದೊಡ್ಡ ಸಂಖ್ಯೆಯಲ್ಲಿ ಮಾಧ್ಯಮದವರು ಜಮಾವಣೆಗೊಂಡರು. ಸೆಪ್ಟೆಂಬರ್ 29ರ ಬೆಳಿಗ್ಗೆ ನಡೆಸಲಾದ ಸಂತ್ರಸ್ತೆಯ ಮರಣೋತ್ತರ ಪರೀಕ್ಷೆಯಲ್ಲಿ ಕತ್ತಿನ ಭಾಗದಲ್ಲಿ ಮೂಳೆ ಮುರಿತದಿಂದ ಯುವತಿ ಸಾವನ್ನಪ್ಪಿದರು ಎಂದು ತಿಳಿದುಬಂದಿದೆ ಎಂದು ಹೇಳಲಾಗಿದೆ.

ನೆರದಿದ್ದ ದೊಡ್ಡ ಗುಂಪು: ವಿಶೇಷವಾಗಿ ಚಂದ್ರಶೇಖರ್ ಆಜಾದ್ ನೇತೃತ್ವದ ಭೀಮ ಸೇನೆಯ ಕಾರ್ಯಕರ್ತರಿಂದ ಸಂತ್ರಸ್ತೆಯ ಮೃತ ದೇಹ ಹೊತ್ತಿದ್ದ ಆಂಬುಲೆನ್ಸ್ ಗೆ ಭದ್ರತೆ ಕಲ್ಪಿಸಿದ್ದ ಪೊಲೀಸ್ ವಾಹನಗಳಿಗೆ ಪ್ರತಿರೋಧ ಒಡ್ಡಲಾಗಿದೆ. ಸಂತ್ರಸ್ತೆಯ ಕಳೇಬರವು ಮಧ್ಯರಾತ್ರಿ 12.45ಕ್ಕೆ ಹಾಥ್‌ರಸ್‌ನ ಯುವತಿಯ ಗ್ರಾಮ ತಲುಪಿತು. ಈ ವೇಳೆಗಾಗಲೇ ಅಲ್ಲಿ 200-250 ಮಂದಿ ನೆರೆದಿದ್ದರು. ಅಲ್ಲಿ ನೆರೆದಿದ್ದವರು ಆಂಬುಲೆನ್ಸ್ ತಡೆದು, ಯುವತಿ ಶವದ ಅಂತ್ಯಕ್ರಿಯೆ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಮಧ್ಯರಾತ್ರಿ 2.30ರ ವರೆಗೆ ಸಂತ್ರಸ್ತೆಯ ಶವವು ಅವರ ಕುಟುಂಬ ಸದಸ್ಯರ ಬಳಿ ಇತ್ತು.

ಕಾನೂನು ಸುವ್ಯವಸ್ಥೆಗೆ ಭಂಗ ಎಂದು ಗುಪ್ತಚರ ಮಾಹಿತಿ: ಪ್ರಕರಣಕ್ಕೆ ಜಾತಿ ಅಥವಾ ಕೋಮು ಬಣ್ಣ ನೀಡುವ ಮೂಲಕ ಘೋಷಣೆ ಕೂಗುತ್ತಿದ್ದ ಸಮೂಹವು ಹಿಂಸಾಚಾರಕ್ಕೆ ಇಳಿಯುವ ಮೂಲಕ ಕಾನೂನು ಸುವ್ಯವಸ್ಥೆಗೆ ದೊಡ್ಡ ಮಟ್ಟದಲ್ಲಿ ತೊಡಕುಂಟು ಮಾಡಬಹುದು ಎಂದು ಸೆಪ್ಟೆಂಬರ್ 29ರಂದಲೂ ಗುಪ್ತಚರ ಮಾಹಿತಿ ನೀಡಲಾಗಿತ್ತು. ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಪ್ರಕಟವಾಗುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವ್ಯಾಪಕ ಬಿಗಿಭದ್ರತೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮತ್ತು ಸಾಂಕ್ರಾಮಿಕತೆಯ ಕಾರಣದಿಂದ ಹಾಗೂ “ಸಂತ್ರಸ್ತೆಯ ಮರಣೋತ್ತರ ಪರೀಕ್ಷೆ ನಡೆದು ಅದಾಗಲೇ 20 ಗಂಟೆಗಳಾಗಿದ್ದ ಕಾರಣ ಪೋಷಕರ ಮನವೊಲಿಸಿ ಧಾರ್ಮಿಕ ವಿಧಿವಿಧಾನಗಳ ಮೂಲಕ ರಾತ್ರೋರಾತ್ರಿ ಅಂತ್ಯಕ್ರಿಯೆ ನಡೆಸುವ ನಿರ್ಧಾರವನ್ನು ಜಿಲ್ಲಾಡಳಿತ ಕೈಗೊಂಡಿದ್ದು, ಅ ಮೂಲಕ ಬೆಳಗಿನ ವೇಳೆ ಬೃಹತ್‌ ಹಿಂಸಾಚಾರವನ್ನು ತಪ್ಪಿಸುವ ಉದ್ದೇಶ ಹೊಂದಲಾಗಿತ್ತು.”

ಸೆಪ್ಟೆಂಬರ್ 30ರಂದು ಸೂರ್ಯೋದಯಕ್ಕೂ ಮುನ್ನ ಅಂತ್ಯಕ್ರಿಯೆ: ಅಸಾಮಾನ್ಯ ಪರಿಸ್ಥಿತಿ ಮತ್ತು ಕಾನೂನು ಬಾಹಿರ ಘಟನಾವಳಿಗಳ ಹಿನ್ನೆಲೆಯಲ್ಲಿ ಸಂತ್ರಸ್ತೆಯ ಕುಟುಂಬಸ್ಥರ ಅನುಮತಿಯ ಮೇರೆಗೆ ಹೆಚ್ಚಿನ ಹಿಂಸಾಚಾರ ತಪ್ಪಿಸುವ ಉದ್ದೇಶದಿಂದ ಕುಟುಂಬಸ್ಥರ ಸಮ್ಮುಖದಲ್ಲಿ ಸಂತ್ರಸ್ತೆಯ ಅಂತ್ಯಕ್ರಿಯೆ ನಡೆಸುವ ಅಸಾಧಾರಣ ನಿರ್ಧಾರವನ್ನು ಜಿಲ್ಲಾಡಳಿತ ಕೈಗೊಂಡಿತ್ತು.

ಸಂತ್ರಸ್ತೆಯ ಅಂತ್ಯಕ್ರಿಯೆ ಬಳಿಕ ಪ್ರಕರಣದ ಸೂಕ್ಷ್ಮತೆಯನ್ನು ಅರಿತು ಸತ್ಯವನ್ನು ಭೇದಿಸುವ ಉದ್ದೇಶದಿಂದ ಮೇಲಧಿಕಾರಿಗಳನ್ನು ಒಳಗೊಂಡ ಎಸ್‌ಐಟಿಯನ್ನು ರಚಿಸಲಾಗಿತ್ತು. ಇದರ ಜೊತೆಗೆ ಎಫ್‌ಐಆರ್‌ಗೆ ಕೊಲೆ ಆರೋಪವನ್ನು ಸೇರಿಸಲಾಗಿದೆ.

ನಿರ್ದಿಷ್ಟ ಕಾಲಮಿತಿಯೊಳಗೆ ಸುಪ್ರೀಂ ಕೋರ್ಟ್ ನಿಗಾವಣೆಯಲ್ಲಿ ಸಿಬಿಐ ತನಿಖೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರವು ಅರ್ಜಿಯಲ್ಲಿ ಮನವಿ ಮಾಡಿದ್ದು ಈಗಾಗಲೇ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬದಿಗಿರಿಸುವಂತೆ ನ್ಯಾಯಾಲಯವನ್ನು ಕೋರಿದೆ.