2012ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ವಕಾಲತ್ತು ವಹಿಸಿದ್ದ ನ್ಯಾಯವಾದಿ ಸೀಮಾ ಕುಶ್ವಾಹಾ ಹಾಥ್‌ರಸ್ ಅತ್ಯಾಚಾರ ಸಂತ್ರಸ್ತೆ ಕುಟುಂಬದವರ ಪರವಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
‘ಬಾರ್ & ಬೆಂಚ್’ ಜೊತೆ ಮಾತನಾಡಿದ ಕುಶ್ವಾಹಾ, ಹಾಥ್‌ರಸ್ ಪ್ರಕರಣದ ಪರ ವಕಾಲತ್ತು ವಹಿಸುವಂತೆ ಸಂತ್ರಸ್ತೆಯ ಕುಟುಂಬ ತಮ್ಮನ್ನು ಕೋರಿರುವುದಾಗಿ ಕುಶ್ವಾಹಾ ದೃಢಪಡಿಸಿದ್ದಾರೆ.
ತಾವು ಮೃತ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗದಂತೆ ಉತ್ತರಪ್ರದೇಶ ಪೊಲೀಸರು ಮತ್ತು ಅಧಿಕಾರಿಗಳು ತಡೆದಿದ್ದರೂ ವಕಾಲತ್ತಿಗೆ ಸಂಬಂಧಿಸಿದ ಆರಂಭಿಕ ಪ್ರಕ್ರಿಯೆಗಳು ಮತ್ತು ದಾಖಲೀಕರಣದ ಕಾರ್ಯಗಳು ಅಕ್ಟೋಬರ್ 4ರ ಭಾನುವಾರದೊಳಗೆ ಪೂರ್ಣಗೊಳ್ಳಲಿವೆ ಎಂದು ಕುಶ್ವಾಹಾ ತಿಳಿಸಿದ್ದಾರೆ.
ಮಾಧ್ಯಮಗಳು ಘಟನೆಯನ್ನು ಎತ್ತಿ ತೋರಿಸುವ ಮೊದಲೇ ನಾನು ಸಂತ್ರಸ್ತೆಯ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೆ ಎಂದು ಕುಶ್ವಾಹಾ ಮಾಹಿತಿ ನೀಡಿದ್ದಾರೆ. ಸಂತ್ರಸ್ತೆಯ ಕುಟುಂಬದ ಹತ್ತಿರದ ಸದಸ್ಯರನ್ನು ಇನ್ನೂ ಭೇಟಿಯಾಗಿಲ್ಲವಾದರೂ ಆ ಕುಟುಂಬದ ಸದಸ್ಯರೊಬ್ಬರು ದೆಹಲಿಯಲ್ಲಿ ತಮ್ಮನ್ನು ಭೇಟಿಯಾಗಿದ್ದಾಗಿ ಹೇಳಿದ್ದಾರೆ.
‘ಹಾಥ್‌ರಸ್ ಮಗಳಿಗೆ ನ್ಯಾಯ ಒದಗಿಸುವ ಜೊತೆಗೆ ವರ್ತಮಾನ ಮತ್ತು ಭವಿಷ್ಯದಲ್ಲಿ ಮಹಿಳಾ ಸುರಕ್ಷತೆ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸುವುದಕ್ಕಾಗಿ ನಾನು ಹೋರಾಡುತ್ತೇನೆ’ ಎಂದು ಕುಶ್ವಾಹಾ ಅವರು ವಿವರಿಸಿದರು.
'ದೇಶದ ಹೆಣ್ಣುಮಕ್ಕಳ ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು ಮತ್ತು ಅವರ ಸುರಕ್ಷತೆ ಖಾತರಿಪಡಿಸುವುದು ನನ್ನ ಗುರಿ ಮತ್ತು ಪ್ರಯತ್ನ. ಅಧಿಕಾರದಲ್ಲಿರುವವರು ಮಹಿಳೆಯರ ಸುರಕ್ಷತೆಯ ಹೊಣೆ ಹೊರಬೇಕಾಗುತ್ತದೆ' ಎಂದು ಕುಶ್ವಾಹಾ ಹೇಳಿದ್ದಾರೆ.
‘ಅಂತಿಮವಾಗಿ ನಿರ್ಭಯಾ ಪ್ರಕರಣದಲ್ಲಿ ನ್ಯಾಯ ದೊರೆತ ನಂತರ, ಜನ ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಮರಳಿ ವಿಶ್ವಾಸ ಇರಿಸಿದ್ದಾರೆ’ ಎಂದ ಕುಶ್ವಾಹಾ ‘ ಆದರೆ ಪ್ರತಿ ಪ್ರಕರಣವೂ ತ್ವರಿತ ನ್ಯಾಯ ಪಡೆಯುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.
ಈಗ ಹಾಥ್‌ರಸ್ ನಲ್ಲಿ ನಡೆದ ದುರದೃಷ್ಟಕರ ಮತ್ತು ಆಘಾತಕಾರಿ ಘಟನೆ ಬಳಿಕ, ಮಹಿಳೆಯರ ಸುರಕ್ಷತೆಗಾಗಿ ಕಾನೂನುಗಳನ್ನು ಜಾರಿಗೊಳಿಸುವಲ್ಲಿನ ಕೊರತೆ ಮತ್ತಷ್ಟು ಹೆಚ್ಚಾಗಿದೆ ಎಂದು ಕುಶ್ವಾಹಾ ಹೇಳುತ್ತಾರೆ. ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಹೆಚ್ಚು ಅಗತ್ಯ ಬದಲಾವಣೆ ತರುವ ಜೊತೆಗೆ ಕಾನೂನಿನ ಸೂಕ್ತ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಆಡಳಿತ ವ್ಯವಸ್ಥೆಯ ಸುಧಾರಣೆಗೆ ಅವರು ಕರೆ ನೀಡಿದ್ದಾರೆ.
ಸೆ.14ರಂದು 19 ವರ್ಷದ ದಲಿತ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರವೆಸಗಿ ಪೈಶಾಚಿಕ ಹಲ್ಲೆ ನಡೆಸಲಾಗಿತ್ತು. ಸೆ. 29ರಂದು ಆಕೆ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದಳು. ಕುಟುಂಬದ ಸಮ್ಮತಿ ಇಲ್ಲದಿದ್ದರೂ ರಾತ್ರೋರಾತ್ರಿ ಉತ್ತರ ಪ್ರದೇಶದ ಅಧಿಕಾರಿಗಳೇ ಆಕೆಯ ಮೃತದೇಹದ ಅಂತ್ಯಕ್ರಿಯೆ ನಡೆಸಿದ್ದರು. ಇದು ಮಾಧ್ಯಮಗಳ ಮೂಲಕ ದೇಶದೆಲ್ಲೆಡೆ ಪ್ರಸಾರವಾಗಿ ತೀವ್ರ ಆಕ್ರೋಶ ಉಂಟುಮಾಡಿತ್ತು. ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಂಡ ಅಲಹಾಬಾದ್ ಹೈಕೋರ್ಟಿನ ಲಖ್ನೋ ಪೀಠ ಈ ಆರೋಪಗಳು ಸತ್ಯವಾಗಿದ್ದರೆ ಅದು ಮಾನವ ಹಕ್ಕುಗಳನ್ನು ಉಲ್ಲಂಘಿಸಿವುದರ ಜೊತೆಗೆ ಸರ್ಕಾರವೇ ಹಸ್ತಕ್ಷೇಪ ನಡೆಸಿದ ದೊಡ್ಡ ಪ್ರಕರಣವಾಗಿದೆ ಎಂದು ಅಭಿಪ್ರಾಯಪಟ್ಟಿತು.
ಮಾಧ್ಯಮ ಪ್ರತಿನಿಧಿಗಳು, ರಾಜಕೀಯ ಮುಖಂಡರು ಕುಟುಂಬವನ್ನು ತಲುಪದಂತೆ ಹಾಥ್‌ರಸ್ ಗ್ರಾಮವನ್ನು ಪೊಲೀಸರು ಸುತ್ತುವರೆದಿದ್ದರು. ಕುಟುಂಬದವರೇ ತಮ್ಮ ಪರ ವಕಾಲತ್ತು ವಹಿಸುವಂತೆ ಕೇಳಿಕೊಂಡಿದ್ದರೂ ಅವರನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ ಎಂದು ಕುಶ್ವಾಹಾ ಹೇಳಿದ್ದಾರೆ.