ಸುದ್ದಿಗಳು

ಮಳಲಿ ಮಸೀದಿ ಪ್ರಕರಣ: ಸಿವಿಲ್‌ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಮೊದಲು ನಿರ್ಧರಿಸಲಿರುವ ಕೋರ್ಟ್‌

ಒಮ್ಮೆ ಮಸೀದಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಿದ ಬಳಿಕ ಅದನ್ನು ತೀರ್ಮಾನಿಸಬೇಕಿರುವುದು ವಕ್ಫ್ ನ್ಯಾಯಮಂಡಳಿ ಎನ್ನುವುದು ಮುಸ್ಲಿಂ ಪಕ್ಷಕಾರರ ವಾದ.

Bar & Bench

ಮಂಗಳೂರು ಮಳಲಿ ಮಸೀದಿ ಪ್ರಕರಣ ವಿಚಾರಣೆಗೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಮೊದಲು ನಿರ್ಧರಿಸುವುದಾಗಿ ನಗರದ ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಸೋಮವಾರ ಅಭಿಪ್ರಾಯಪಟ್ಟಿತು.

ಮಳಲಿ ಮಸೀದಿ ವಿವಾದ ಕುರಿತಂತೆ ಸಿವಿಲ್‌ ಕೋರ್ಟ್‌ನ ನ್ಯಾಯವ್ಯಾಪ್ತಿ ಪ್ರಶ್ನಿಸಿ ಮುಸ್ಲಿಂ ಪಕ್ಷಕಾರರು ಸಲ್ಲಿಸಿದ್ದ ಅರ್ಜಿಯನ್ನು ಮೊದಲು ಆಲಿಸಲಾಗುವುದು. ಇಂದು ಮಧ್ಯಾಹ್ನ ಎರಡೂ ಕಡೆಯ ವಕೀಲರು ಪ್ರಕರಣದ ನ್ಯಾಯವ್ಯಾಪ್ತಿ ಕುರಿತಂತೆ ವಾದ ಮಂಡಿಸಬೇಕು ಎಂದು ಸೋಮವಾರ ಪೂರ್ವಾಹ್ನ ನ್ಯಾಯಾಧೀಶೆ ಎಚ್‌ ಸುಜಾತಾ ಅವರು ತಿಳಿಸಿದ್ದರು. ಅದರಂತೆ ಮಧ್ಯಾಹ್ನ 3ರ ಸುಮಾರಿಗೆ ವಿಚಾರಣೆ ಆರಂಭವಾದಾಗ ಮಸೀದಿ ಪರ ನ್ಯಾಯವಾದಿ ಎಂ ಪಿ ಶೆಣೈ ವಾದ ಮಂಡಿಸಿದರು.

ಮಳಲಿಯ ಜುಮ್ಮಾ ಮಸೀದಿ ಸರ್ಕಾರಿ ಆಸ್ತಿಯಾಗಿದೆ. ಇದಕ್ಕೆ 400- 500 ವರ್ಷಗಳ ಇತಿಹಾಸವಿದೆ. 2001ರಲ್ಲಿ ಜುಮ್ಮಾ ಮಸೀದಿಗೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ಸರ್ಕಾರ ಒದಗಿಸಿದೆ ಎಂದು ಅವರು ವಿವರಿಸಿದರು.

ಪ್ರಶ್ನೆಯಲ್ಲಿರುವ ಮಸೀದಿಯನ್ನು ವಕ್ಫ್‌ ಆಸ್ತಿ ಎಂದು ಕರ್ನಾಟಕ ಸರ್ಕಾರ ಈಗಾಗಲೇ ನೋಟಿಫೈ ಮಾಡಿದೆ. ಒಮ್ಮೆ ಮಸೀದಿ ವಕ್ಫ್‌ ಮಂಡಳಿಯ ಆಸ್ತಿಯಾದರೆ ಅದನ್ನು ವಕ್ಫ್‌ ನ್ಯಾಯಮಂಡಳಿಯೇ ವಿಚಾರಣೆ ನಡೆಸಬೇಕು. ಹೀಗಾಗಿ ವಕ್ಫ್‌ ಮಂಡಳಿಯ ಆಸ್ತಿಯಾಗಿರುವ ಜುಮ್ಮಾ ಮಸೀದಿ ಸಿವಿಲ್‌ ನ್ಯಾಯಾಲಯ ವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಸಿದರು.

ಅಲ್ಲದೆ ಧಾರ್ಮಿಕ ಸ್ಥಳಗಳ ಆರಾಧನಾ ಕಾಯಿದೆಯ ಸೆಕ್ಷನ್‌ 4ರ ಅಡಿ ಪ್ರಸ್ತುತ ವ್ಯಾಜ್ಯವನ್ನು ನಿರ್ಬಂಧಿಸಲಾಗಿರುವುದರಿಂದ ಇದನ್ನು ವಿಚಾರಣೆಗೆ ಪರಿಗಣಿಸಬಾರದು ಎಂದು ಶೆಣೈ ಈ ಸಂದರ್ಭದಲ್ಲಿ ಗಂಭೀರ ಆಕ್ಷೇಪಣೆ ಎತ್ತಿದರು. ಇದಕ್ಕೆ ಸಂಬಂಧಿಸಿದಂತೆ 2021ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪು, 1995ರ ವಕ್ಫ್‌ ಕಾಯಿದೆಯ 85ನೇ ಸೆಕ್ಷನ್‌ ಅನ್ನು ಅವರು ನ್ಯಾಯಾಲಯದೆದುರು ಪ್ರಸ್ತಾಪಿಸಿದರು.

ಈ ಸಂದರ್ಭದಲ್ಲಿ ನ್ಯಾಯಾಲಯ “ಬೇರೆ ಅರ್ಜಿಗಳ ವಿಚಾರಣೆಗೂ ಮುನ್ನ ಪ್ರಕರಣದಲ್ಲಿ ಸಿವಿಲ್‌ ನ್ಯಾಯಾಲಯದ ನ್ಯಾಯವ್ಯಾಪ್ತಿಯನ್ನು ಮೊದಲು ನಿರ್ಧರಿಸಬೇಕು" ಎಂದು ಅಭಿಪ್ರಾಯಪಟ್ಟಿತು. “ಪ್ರತಿವಾದಿಯು (ಮುಸ್ಲಿಂ ಪಕ್ಷಕಾರರು) ಯಾವುದೇ ಹಂತದಲ್ಲಿ ಅರ್ಜಿಯನ್ನು ತಿರಸ್ಕರಿಸುವಂತೆ ಮನವಿ ಸಲ್ಲಿಸಲು ಅರ್ಹರಾಗಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಒಂದು ವೇಳೆ ಪ್ರಕರಣ ಆಲಿಸಲು ಈ ನ್ಯಾಯಾಲಯಕ್ಕೆ ಸಾಧ್ಯವಾಗದಿದ್ದರೆ ಇತರೆ ಅರ್ಜಿಗಳನ್ನು ಆಲಿಸುವುದು ಅಸಮರ್ಪಕವಾಗುತ್ತದೆ. ಆದ್ದರಿಂದ ಫಿರ್ಯಾದುದಾರರ (ಹಿಂದೂ ಪಕ್ಷಕಾರರ) ಮನವಿ ತಿರಸ್ಕರಿಸುವಂತೆ ಕೋರಿ ಪ್ರತಿವಾದಿಗಳು ಸಿಪಿಸಿಯ 7 ನಿಯಮ 11(ಡಿ) ಅಡಿಯಲ್ಲಿ ಸಲ್ಲಿಸಿರುವ ಅರ್ಜಿಯನ್ನು ಮೊದಲು ಆಲಿಸಬೇಕಾಗುತ್ತದೆ….” ಎಂದಿತು.

ಈ ವೇಳೆ ವಾದ ಮಂಡಿಸುವಂತೆ ಹಿಂದೂ ಪಕ್ಷಕಾರರ ಪರ ವಕೀಲ ಚಿದಾನಂದ ಎಂ ಕೆದಿಲಾಯ ಅವರನ್ನು ನ್ಯಾಯಾಲಯ ಕೇಳಿದಾಗ ಅವರು ಕಾಲಾವಕಾಶ ಕೋರಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಕರಣವನ್ನು ಜೂನ್‌ 9ಕ್ಕೆ ಮುಂದೂಡಿತು. ಮಸೀದಿ ನವೀಕರಣಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿರುವ ಮಧ್ಯಂತರ ತಡೆಯಾಜ್ಞೆ ಮುಂದಿನ ವಿಚಾರಣೆಯವರೆಗೂ ಮುಂದುವರೆಯಲಿದೆ ಎಂದು ಅದು ಇದೇ ವೇಳೆ ನ್ಯಾಯಾಲಯ ಸ್ಪಷ್ಟಪಡಿಸಿತು.