Supreme Court 
ಸುದ್ದಿಗಳು

ಉತ್ಪಾದನಾ ಕೇಂದ್ರವಾಗುವ ಭಾರತದ ಯತ್ನಕ್ಕೆ ಕಠಿಣ ಸ್ಪರ್ಧಾ ಕಾನೂನು ಜಾರಿ ಮಾರಕವಾಗಬಹುದು: ಸುಪ್ರೀಂ ಕೋರ್ಟ್

ಮಾರುಕಟ್ಟೆಯಲ್ಲಿ ಪ್ರಬಲ ಸ್ಥಾನ ಪಡೆದುಕೊಂಡಿರುವ ಉದ್ಯಮಗಳ ರೆಕ್ಕೆ ಕತ್ತರಿಸಲು ಸ್ಪರ್ಧಾ ಕಾಯಿದೆ ವಿನ್ಯಾಸವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

Bar & Bench

ಕಠಿಣ ರೀತಿಯ ಸ್ಪರ್ಧಾ ಕಾನೂನು ಜಾರಿಯಾಗುವುದನ್ನು ಒಪ್ಪದ ಸುಪ್ರೀಂ ಕೋರ್ಟ್‌ ಹಾಗೆ ಮಾಡುವುದರಿಂದ ಜಾಗತಿಕ ಉತ್ಪಾದನಾ ಮತ್ತು ತಂತ್ರಜ್ಞಾನ ಕೇಂದ್ರವಾಗುವ ಭಾರತದ ಮಹತ್ವಾಕಾಂಕ್ಷೆ ಹಳಿತಪ್ಪಬಹುದು ಎಂದು ಮಂಗಳವಾರ ಎಚ್ಚರಿಕೆ ನೀಡಿದೆ [ಭಾರತದ ಸ್ಪರ್ಧಾ ಆಯೋಗ ಮತ್ತು ಸ್ಕಾಟ್ ಗ್ಲಾಸ್ ಇಂಡಿಯಾ ನಡುವಣ ಪ್ರಕರಣ].

“ಇಂದಿನ ಜಾಗತಿಕ ಆರ್ಥಿಕ ಸಂದರ್ಭದಲ್ಲಿ, ವಿವೇಕ ಅತ್ಯಗತ್ಯ. ಅಮೆರಿಕ ಮತ್ತು ಯೂರೋಪ್‌ ಹೊಸದಾಗಿ ರೂಪಿಸಲಾದ ರಕ್ಷಣಾತ್ಮಕ ನೀತಿಗಳ ವಾಣಿಜ್ಯ ಗೋಡೆಗಳಿಂದ ಹಿಂದೆ ಸರಿಯುತ್ತಿವೆ…  (ಕಾನೂನಿನ ಮೂಲಕ ಹೇರಲಾಗುವ) ನಿಯಂತ್ರಣದ ಪ್ರತಿಫಲವು ವಿಸ್ತರಣೆಗೆ ಪೂರಕವಾಗಿದ್ದು, ನೈಜ ಸ್ಪರ್ಧಾತ್ಮಕ ಹಾನಿಯ ಸಂದರ್ಭದಲ್ಲಿ ಮಾತ್ರವೇ ಮಧ್ಯಪ್ರದೇಶ ಮಾಡಿದಾಗಲಷ್ಟೇ ಉತ್ಪಾದನಾ ಕ್ಷೇತ್ರ, ಜೀವ ವಿಜ್ಞಾನ ಮತ್ತು ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುವಲ್ಲಿ ಭಾರತದ ಯತ್ನ ಯಶ್ವಸಿಯಾಗುತ್ತದೆ” ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪ್ರಸನ್ನ ಬಿ ವರಾಳೆ ಅವರಿದ್ದ ಪೀಠ ತಿಳಿಸಿದೆ.

ಅಂತೆಯೇ ಸ್ಕಾಟ್ ಗ್ಲಾಸ್ ಇಂಡಿಯಾ ವಿರುದ್ಧ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಮತ್ತು ಕಪೂರ್ ಗ್ಲಾಸ್ ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಾಲಯ ವಜಾಗೊಳಿಸಿತು. ಜೊತೆಗೆ ಪ್ರಾಬಲ್ಯದ ದುರುಪಯೋಗದ ಪ್ರಕರಣಗಳನ್ನು ಹೇಗೆ ಮೌಲ್ಯಮಾಪನ ಮಾಡಬೇಕು ಎಂಬುದಕ್ಕೆ ನಿರ್ಣಾಯಕ ಪೂರ್ವನಿದರ್ಶನಗಳನ್ನು ರೂಪಿಸಿತು.

ಸ್ಕಾಟ್ ಇಂಡಿಯಾ ಕಂಪನಿ ರಿಯಾಯಿತಿ ನೀಡುವ ಮೂಲಕ ತನ್ನ ಪ್ರಾಬಲ್ಯ ದುರುಪಯೋಗಪಡಿಸಿಕೊಂಡಿದೆ ಎಂದು 2010 ರಲ್ಲಿ ಕಪೂರ್ ಗ್ಲಾಸ್ ಮಾಹಿತಿ ಸಲ್ಲಿಸುವ ಮುಖೇನ ಪ್ರಕರಣ ಆರಂಭವಾಗಿತ್ತು.

ಸ್ಪರ್ಧಾ ಕಾಯಿದೆಯ ಸೆಕ್ಷನ್ 4(2) ರ (ಎ) ರಿಂದ (ಇ) ಷರತ್ತುಗಳನ್ನು ಸ್ಕಾಟ್‌ ಇಂಡಿಯಾ ಉಲ್ಲಂಘಿಸಿದೆ ಎಂದು ಮಹಾನಿರ್ದೇಶಕರ ವರದಿ ಆಧರಿಸಿ ತಿಳಿಸಿದ್ದ ಸಿಸಿಐ ₹5.66 ಕೋಟಿ ದಂಡ ವಿಧಿಸಿತ್ತು. ಈಗ ಕಾರ್ಯ ನಿರ್ವಹಣೆ ನಿಲ್ಲಿಸಿರುವ ಈ ಹಿಂದೆ ಅಸ್ತಿತ್ವದಲ್ಲಿದ್ದ ಸ್ಪರ್ಧಾ ಮೇಲ್ಮನವಿ ನ್ಯಾಯಮಂಡಳಿ (ಕಾಂಪ್ಯಾಟ್‌) 2014 ರಲ್ಲಿ ಈ ನಿರ್ಧಾರ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಸಿಐ ಮತ್ತು ಕಪೂರ್ ಗ್ಲಾಸ್ ಎರಡೂ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದವು.

ಮೇಲ್ಮನವಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌ ಕಾಂಪ್ಯಾಟ್‌ ತೀರ್ಪನ್ನು ಎತ್ತಿಹಿಡಿದಿದೆ. ಪ್ರಾಬಲ್ಯ ಎಂಬುದು ಖುದ್ದು ಕಾನೂನುಬಾಹಿರವಲ್ಲ ಎಂದು ಪುನರುಚ್ಚರಿಸಿದ ಸುಪ್ರೀಂ ಕೋರ್ಟ್‌, ಸ್ಪರ್ಧೆಯ ಮೇಲೆ ಗಮನಾರ್ಹ ಪ್ರತಿಕೂಲ ಪರಿಣಾಮ ಬೀರುವ ನಡವಳಿಕೆ ಮಾತ್ರ ಸೆಕ್ಷನ್ 4 ರ ಅಡಿಯಲ್ಲಿ ದುರುಪಯೋಗ ಎನಿಸಿಕೊಳ್ಳಲಿದೆ ಎಂದಿದೆ.

ಅಲ್ಲದೆ ಮಾರುಕಟ್ಟೆಯಲ್ಲಿ ಪ್ರಬಲ ಸ್ಥಾನ ಪಡೆದುಕೊಂಡಿರುವ ಉದ್ಯಮಗಳ ರೆಕ್ಕೆ ಕತ್ತರಿಸಲು ಸ್ಪರ್ಧಾ ಕಾಯಿದೆ ವಿನ್ಯಾಸವಾಗಿಲ್ಲ ಎಂದು ಅದು ಹೇಳಿತು.