Hijab, Supreme Court
Hijab, Supreme Court 
ಸುದ್ದಿಗಳು

ನ್ಯಾಯಮೂರ್ತಿಗಳ ಅನಾರೋಗ್ಯದಿಂದಾಗಿ ಹಿಜಾಬ್ ಪ್ರಕರಣದ ವಿಚಾರಣೆ ವಿಳಂಬ ಎಂದ ಸಿಜೆಐ: ವಿಚಾರಣೆ ದಿನಾಂಕ ತಿಳಿಸಲು ನಕಾರ

Bar & Bench

ಕಾಲೇಜು ಕ್ಯಾಂಪಸ್‌ನಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸುವ ಶಿಕ್ಷಣ ಸಂಸ್ಥೆಗಳ ಹಕ್ಕನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್‌ನ ಹಿಜಾಬ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳ ವಿಚಾರಣೆಯು ನ್ಯಾಯಮೂರ್ತಿಗಳ ಅನಾರೋಗ್ಯದಿಂದಾಗಿ ವಿಳಂಬವಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಮಂಗಳವಾರ ಹೇಳಿದರು.

ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಒಂದು ಅರ್ಜಿ ಸೇರಿದಂತೆ ಕನಿಷ್ಠ ಮೂರು ಮೇಲ್ಮನವಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಎದುರು ನೋಡುತ್ತಿವೆ.

ಪ್ರಕರಣವನ್ನು ವಿಚಾರಣೆಗಾಗಿ ಪಟ್ಟಿ ಮಾಡುವಂತೆ ಸಿಜೆಐ ಅವರನ್ನು ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಕೋರಿದರು. ಆದರೆ ನ್ಯಾಯಮೂರ್ತಿಗಳಲ್ಲಿ ಒಬ್ಬರು ಅಸ್ವಸ್ಥರಾಗಿದ್ದಾರೆ ಎಂದು ಸಿಜೆಐ ರಮಣ ತಿಳಿಸಿದರು. ಅಲ್ಲದೆ ಪ್ರಕರಣದ ವಿಚಾರಣೆಗೆ ಪೀಠ ರಚಿಸಬೇಕಿದೆ ಎಂಬ ವಿಚಾರವನ್ನು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಮಾರ್ಚ್‌ನಿಂದ ಪ್ರಕರಣದ ವಿಚಾರಣೆ ಬಾಕಿ ಇದೆ ಎಂದು ಮೀನಾಕ್ಷಿ ಅವರು ಹೇಳಿದಾಗ ನ್ಯಾ. ರಮಣ “ನ್ಯಾಯಮೂರ್ತಿಗಳ ಆರೋಗ್ಯ ಸರಿ ಇದ್ದಿದ್ದರೆ ಪ್ರಕರಣದ ವಿಚಾರಣೆ ನಡೆಸಬಹುದಾಗಿತ್ತು” ಎಂದು ಪ್ರತಿಕ್ರಿಯಿಸಿದರು. ಪ್ರಕರಣವನ್ನು ಜುಲೈನಲ್ಲಿ ಪಟ್ಟಿ ಮಾಡಲಾಗುವುದು ಈ ಹಿಂದೆ ಸಿಜೆಐ ತಿಳಿಸಿದ್ದರು.

ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸುವ ಕುರಿತಂತೆ ಸರ್ಕಾರಿ ಕಾಲೇಜುಗಳ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಪರಿಣಾಮಕಾರಿ ಅಧಿಕಾರ ನೀಡುವ ರಾಜ್ಯ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಮಾರ್ಚ್ 15ರಂದು ಎತ್ತಿಹಿಡಿದಿತ್ತು.

ಮುಸ್ಲಿಮ್‌ ಮಹಿಳೆಯರು ಹಿಬಾಜ್‌ ಧರಿಸುವುದು ಇಸ್ಲಾಮ್‌ನಲ್ಲಿ ಅಗತ್ಯ ಧಾರ್ಮಿಕ ಆಚರಣೆಯಲ್ಲ. ಶಾಲೆಯಲ್ಲಿ ಸಮವಸ್ತ್ರ ಸೂಚಿಸಿರುವುದು ಒಂದು ಸಮಂಜಸವಾದ ನಿರ್ಬಂಧವಾಗಿದ್ದು, ವಿದ್ಯಾರ್ಥಿಗಳು ಅದನ್ನು ಆಕ್ಷೇಪಿಸುವಂತಿಲ್ಲ. ಆದೇಶ ನೀಡಲು ಸರ್ಕಾರಕ್ಕೆ ಅಧಿಕಾರವಿದೆ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್‌ ಹಾಗೂ ಜೆ ಎಂ ಖಾಜಿ ಅವರಿದ್ದ ತ್ರಿಸದಸ್ಯ ಪೀಠ ಹೇಳಿತ್ತು.