ಸಂವಿಧಾನದ 25ನೇ ವಿಧಿಯ ವ್ಯಾಪ್ತಿ ಪರಿಶೀಲಿಸುವಾಗ ಸಂವಿಧಾನ ರಚನಾ ಸಭೆಯ ಚರ್ಚೆಗಳನ್ನು (ಸಿಎಡಿ) ನ್ಯಾಯಾಲಯ ಎಷ್ಟರ ಮಟ್ಟಿಗೆ ಅವಲಂಬಿಸಬಹುದು ಎಂದು ಕರ್ನಾಟಕ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಪ್ರಶ್ನಿಸಿದ್ದ ಅರ್ಜಿದಾರರನ್ನು ಸುಪ್ರೀಂ ಕೋರ್ಟ್ ಸೋಮವಾರ ಕೇಳಿತು.
ಪ್ರಸ್ತುತ ಸಂವಿಧಾನವನ್ನು ಅರ್ಥಮಾಡಿಕೊಳ್ಳಲುʼ ಸಂವಿಧಾನ ರಚನಾ ಸಭೆಯ ಚರ್ಚೆಗಳು ಎಷ್ಟರ ಮಟ್ಟಿಗೆ ಸಹಾಯ ಮಾಡುತ್ತವೆ ಎಂದು ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ ಅವರನ್ನು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಪ್ರಶ್ನಿಸಿತು.
ಸಂವಿಧಾನ ರಚಿಸಿದವರ ಉದ್ದೇಶ ಮತ್ತು ಇಚ್ಛೆಯನ್ನು ಸಂವಿಧಾನ ರಚನಾ ಸಭೆಯ ಚರ್ಚೆ ಬಿಂಬಿಸುತ್ತದೆ ಎಂದು ದವೆ ಹೇಳಿದರು. "ಸಂವಿಧಾನವು ಬದಲಾಗುವ ದಾಖಲೆಯಲ್ಲ. ಅವರೇ (ರಚನಾ ಸಭೆಯ ಸದಸ್ಯರು) ಅದನ್ನು ರಚಿಸಿದರು. ಪೀಠಿಕೆ ಹಾಗೂ ಮೂಲ ರಚನೆ ಸಂವಿಧಾನದ ಭಾಗವಾಗಿವೆ" ಎಂದು ಅವರು ವಿವರಿಸಿದರು.
ಆದರೂ, ಪ್ರಸ್ತುತ ಪ್ರಕರಣ ಅರ್ಥೈಸುವಲ್ಲಿ ಸಂವಿಧಾನ ಸಭೆಯ ಚರ್ಚೆಗಳು ನ್ಯಾಯಾಲಯಕ್ಕೆ ಎಷ್ಟರ ಮಟ್ಟಿಗೆ ಮಾರ್ಗದರ್ಶನ ನೀಡಬಹುದು ಎಂಬುದನ್ನು ಸಾಬೀತುಪಡಿಸಲು ನ್ಯಾಯಾಲಯಕ್ಕೆ ಪೂರ್ವನಿದರ್ಶನಗಳನ್ನು ಸಲ್ಲಿಸುವಂತೆ ಪೀಠವು ಅರ್ಜಿದಾರರಿಗೆ ಸೂಚಿಸಿತು.
ಕಾಲೇಜು ಕ್ಯಾಂಪಸ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಲು ಕರ್ನಾಟಕದ ಸರ್ಕಾರಿ ಕಾಲೇಜುಗಳ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಪರಿಣಾಮಕಾರಿಯಾಗಿ ಅಧಿಕಾರ ನೀಡುವ ಸರ್ಕಾರಿ ಆದೇಶವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್‌ನ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಅಲ್ಪಸಂಖ್ಯಾತರನ್ನು ಸಮಾಜದ ಅಂಚಿಗೆ ತಳ್ಳುವ ಮಾದರಿಯಂತಿದೆ ಹಿಜಾಬ್ ನಿಷೇಧ. ಸಮವಸ್ತ್ರಕ್ಕಾಗಿ ತೀರ್ಪು ಜಾರಿ ಮಾಡುತ್ತಿದ್ದೀರಿ. ಆದರೆ ಅದರ ಹಿಂದಿನ ಉದ್ದೇಶ ಬೇರೆಯೇ ಇದೆ. ಬಿಜೆಪಿಯ ಇಬ್ಬರು ಹಿರಿಯ ನಾಯಕರು ಮುಸ್ಲಿಮರಾಗಿದ್ದು ಅವರು ಹಿಂದೂಗಳನ್ನು ಮದುವೆಯಾಗಿದ್ದಾರೆ. ಕಾನೂನಿನ ಹಿಂದಿನ ದುರುದ್ದೇಶವನ್ನು ನ್ಯಾಯಾಲಯ ಅರ್ಥ ಮಾಡಿಕೊಳ್ಳಬೇಕು. ನಾವು ನಿಮಗೆ ಹೇಳುವುದನ್ನು ನೀವು ಮಾಡಿ ಎಂದು ಅಲ್ಪಸಂಖ್ಯಾತ ಸಮುದಾಯಕ್ಕೆ ತಾಕೀತು ಮಾಡಲಾಗುತ್ತಿದೆ.
ನಾನು ಕ್ರೈಸ್ತ ಸಂಸ್ಥೆಯಲ್ಲಿ 14 ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿದೆ. ಆದರೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಯಾರೂ ನನಗೆ ಒತ್ತಾಯಿಸಲಿಲ್ಲ. ನನ್ನ ಮಕ್ಕಳೂ ಅಲ್ಲಿಗೇ ಹೋದರು. ಅತಿ ಹೆಚ್ಚು ಸೊಳ್ಳೆಗಳಿರುವ ಪ್ರದೇಶಗಳಿಗೆ ಹೋಗುವವರು ಯಾರು ಎಂದರೆ ಅದು ಕ್ರೈಸ್ತ ಮಿಷನರಿಗಳು.
ವ್ಯಕ್ತಿ ಹುಟ್ಟುತ್ತಿದ್ದಂತೆಯೇ ಸಂವಿಧಾನ ವ್ಯಕ್ತಿಯೊಂದಿಗೆ ನಂಟು ಬೆಳೆಸಿಕೊಳ್ಳುತ್ತದೆ. ಅದಕ್ಕಾಗಿಯೇ ನಂಬಿಕೆಯ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯ ಎಂಬ ಸುಂದರವಾದ ಪದಗಳನ್ನು ಸಂವಿಧಾನ ರಚನಕಾರರು ಬಳಸಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಉಡುಪನ್ನು ಆಯ್ಕೆ ಮಾಡುವ ಹಕ್ಕಿದೆ. ನಮ್ಮ ಪ್ರಧಾನಿ ಪ್ರತಿ, ಸ್ವಾತಂತ್ರ್ಯ ದಿನದಂದು ಸೊಗಸಾಗಿ ಪೇಟ ಧರಿಸುತ್ತಾರೆ. ಇದು ವೈವಿಧ್ಯತೆಯನ್ನು ಬಿಂಬಿಸುವುದಕ್ಕಾಗಿ, ಎಷ್ಟು ಸುಂದರ ಕಲ್ಪನೆ ಅಲ್ಲವೇ.