ಆಸ್ತಿ ತೆರಿಗೆ, ನೀರಿನ ತೆರಿಗೆ ಮತ್ತು ವಿದ್ಯುತ್ ಶುಲ್ಕ ವಿಧಿಸುವುದಕ್ಕಾಗಿ ಉದ್ಯೋಗ ನಿರತ ಸ್ತ್ರೀ, ಪುರುಷರ ಹಾಸ್ಟೆಲ್‌ಗಳನ್ನು ವಾಣಿಜ್ಯ ಆಸ್ತಿ ಎಂದು ವರ್ಗೀಕರಿಸಲಾಗದು ಎಂದು ಮದ್ರಾಸ್ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ [ಎಂ ದಿವ್ಯಾ ಮತ್ತು ಹಿರಿಯ ಕಂದಾಯ ಅಧಿಕಾರಿ ನಡುವಣ ಪ್ರಕರಣ ].
ಆ ತೆರಿಗೆಗಳನ್ನು ಪಾವತಿಸುವ ಹೊರೆ ಅಂತಿಮವಾಗಿ ಆ ಹಾಸ್ಟೆಲ್‌ಗಳ ನಿವಾಸಿಗಳ ಮೇಲೆ ಬೀಳುತ್ತದೆ ಎಂದ ನ್ಯಾಯಮೂರ್ತಿ ಕೃಷ್ಣನ್ ರಾಮಸಾಮಿ ಈ ತೀರ್ಪು ನೀಡಿದರು.
ತೆರಿಗೆ ವಿಧಿಸುವಾಗ ಸೇವೆ ಪೂರೈಸುವವರ ದೃಷ್ಟಿಯಿಂದಲ್ಲದೆ ಸೇವೆ ಪಡೆಯುವವರ ನೆಲೆಯಿಂದ ಅಧಿಕಾರಿಗಳು ಪರಿಗಣಿಸಬೇಕು ಎಂದು ನ್ಯಾಯಾಲಯ ಕಿವಿಮಾತು ಹೇಳಿತು.
ಅರ್ಜಿದಾರರಾದ ಹಾಸ್ಟೆಲ್ ಮಾಲೀಕರು ನಡೆಸುವ ಚಟುವಟಿಕೆಗಳ ಸ್ವರೂಪ ವಸತಿ ವರ್ಗಕ್ಕೆ ಸೇರಲಿದ್ದು ಅರ್ಜಿದಾರರ ಆಸ್ತಿಗಳಿಗೆ ಆಸ್ತಿ ತೆರಿಗೆ, ನೀರಿನ ತೆರಿಗೆ ಮತ್ತು ನೀರಿನ ಶುಲ್ಕವನ್ನು ವಿಧಿಸುವ ಉದ್ದೇಶಕ್ಕಾಗಿ ವಸತಿ ಸುಂಕ ಅನ್ವಯಿಸಬೇಕು ಎಂದು ಅದು ತೀರ್ಪಿನಲ್ಲಿ ವಿವರಿಸಿದೆ.
ಹಾಸ್ಟೆಲ್‌ಗಳಲ್ಲಿ ವಾಸಿಸುವ ಬಡವರಿಗೆ ಹೆಚ್ಚಿನ ಶುಲ್ಕ ವಿಧಿಸಿ ಮತ್ತೊಂದೆಡೆ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಶ್ರೀಮಂತ ನಿವಾಸಿಗಳಿಗೆ ಕಡಿಮೆ ತೆರಿಗೆ ವಿಧಿಸಿ ಅವರನ್ನು ಆರಾಮದಾಯಕವಾಗಿಡುವುದು ಕಾನೂನಿನ ಉದ್ದೇಶವಲ್ಲ ಎಂದು ನ್ಯಾಯಾಲಯ ಹೇಳಿದೆ.
ಹೀಗಾಗಿ, ತೆರಿಗೆ ಅಧಿಕಾರಿಗಳು ವಸತಿಯನ್ನು “ವಾಣಿಜ್ಯ”ಎಂದು ವರ್ಗೀಕರಿಸಿದ್ದ ನೋಟಿಸ್‌ಗಳನ್ನು ರದ್ದುಗೊಳಿಸಿದ ನ್ಯಾಯಾಲಯ ಅವುಗಳನ್ನು ವಸತಿ ಆಸ್ತಿ ಎಂದು ಪರಿಗಣಿಸುವಂತೆ ನಿರ್ದೇಶಿಸಿತು. ಆದರೆ ಪ್ರಸ್ತುತ ಅರ್ಜಿಗಳಿಗೆ ಸಂಬಂಧಿಸಿದಂತೆ ಮಾತ್ರ ತೀರ್ಪು ಅನ್ವಯವಾಗತ್ತದೆ. ಉಳಿದವರು ತಮ್ಮ ಹಾಸ್ಟೆಲ್‌ಗಳು ನಿಜವಾಗಿಯೂ ವಸತಿ ಸ್ವರೂಪದ್ದೇ ಎಂದು ಸಾಬೀತು ಪಡಿಸಬೇಕು ಎಂಬುದಾಗಿ ಸ್ಪಷ್ಟಪಡಿಸಿತು.
ವಸತಿ ನಿಲಯಗಳ ಮೇಲೆ ವಿಧಿಸಲಾಗಿದ್ದ ಆಸ್ತಿ ತೆರಿಗೆಯನ್ನು ವಸತಿ ಸುಂಕದಿಂದ ವಾಣಿಜ್ಯ ಸುಂಕಕ್ಕೆ ಪರಿವರ್ತಿಸುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಉದ್ಯೋಗ ನಿರತ ಪುರಷ ಮತ್ತು ಸ್ತ್ರೀಯರಿಗೆ ತಾವು ನೀಡುತ್ತಿರುವ ಹಾಸ್ಟೆಲ್ ಸೌಕರ್ಯ ಕೇವಲ ನಿದ್ರೆ ಇಲ್ಲವೇ ವಾಸಕ್ಕೆ ಉಪಯೋಗಿಸುವ ವಸತಿ ಘಟಕಗಳೆಂದು ಪರಿಗಣಿಸಬೇಕು ಎಂಬುದಾಗಿ ಅರ್ಜಿದಾರರು ವಾದಿಸಿದ್ದರು. ಆದರೆ ಹಾಸ್ಟೆಲ್ ಮಾಲೀಕರು ತಮ್ಮ ಆಸ್ತಿಗಳನ್ನು ಗುತ್ತಿಗೆ ನೀಡುತ್ತಿದ್ದು ಹೀಗಾಗಿ ವಾಣಿಜ್ಯ ಸುಂಕ ವಿಧಿಸುವುದು ಸಮರ್ಥನೀಯ ಎಂದು ಸರ್ಕಾರಿ ಅಧಿಕಾರಿಗಳು, ನಗರ ಪಾಲಿಕೆ ಹಾಗೂ ಚೆನ್ನೈ ಮಹಾನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳು ಹೇಳಿದ್ದರು.
[ತೀರ್ಪಿನ ಪ್ರತಿ]