
ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿ ಅಭಯಾರಣ್ಯಗಳು, ಹುಲಿ ಮೀಸಲು ಇನ್ನಿತರ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ವಾಣಿಜ್ಯ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡುವ ಯಾವುದೇ ಶಾಸನಬದ್ಧ ನಿಬಂಧನೆ ಅಥವಾ ಸರ್ಕಾರಿ ನೀತಿ ಅಸ್ತಿತ್ವದಲ್ಲಿ ಇಲ್ಲ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ [ ಏಂಜಲ್ಸ್ ನಾಯರ್ ಮತ್ತು ಅರಣ್ಯ ಮತ್ತು ವನ್ಯಜೀವಿ ಇಲಾಖೆ ಪ್ರಧಾನ ಕಾರ್ಯದರ್ಶಿ ನಡುವಣ ಪ್ರಕರಣ].
ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕಾಸರಗೋಡು ಜಿಲ್ಲೆಯ ಮೀಸಲು ಅರಣ್ಯದಲ್ಲಿ 2018 ರಲ್ಲಿ ನಟ ಮಮ್ಮುಟ್ಟಿ ಅಭಿನಯದ 'ಉಂಡಾ' ಚಿತ್ರದ ಚಿತ್ರೀಕರಣದ ವೇಳೆ ಪರಿಸರಕ್ಕೆ ಹಾನಿಯಾದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್ದಾರ್ ಮತ್ತು ನ್ಯಾಯಮೂರ್ತಿ ಬಸಂತ್ ಬಾಲಾಜಿ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಅರಣ್ಯ ಪ್ರದೇಶಗಳಲ್ಲಿ ವಾಣಿಜ್ಯ ಚಲನಚಿತ್ರ, ಸಾಕ್ಷ್ಯಚಿತ್ರಗಳು ಅಥವಾ ಶೈಕ್ಷಣಿಕ ಚಲನಚಿತ್ರಗಳನ್ನು ಚಿತ್ರೀಕರಿಸಲು ಪಾವತಿಸಬೇಕಾದ ಶುಲ್ಕವನ್ನು ಪಟ್ಟಿ ಮಾಡಿ 2013ರಲ್ಲಿ ಹೊರಡಿಸಲಾಗಿದ್ದ ಸರ್ಕಾರಿ ಆದೇಶವನ್ನು ಅರ್ಜಿಗೆ ಪ್ರತಿಕ್ರಿಯೆಯಾಗಿ ರಾಜ್ಯದ ಅರಣ್ಯ ಇಲಾಖೆ ವಾದ ಮಂಡಿಸಿತ್ತು.
ಆದರೆ ಈ ಆದೇಶಕ್ಕೆ ಕಾನೂನಿನ ಬೆಂಬಲ ಇಲ್ಲ ಮತ್ತು 1972ರ ವನ್ಯಜೀವಿ (ರಕ್ಷಣೆ) ಕಾಯಿದೆಯನ್ನು ಉಲ್ಲಂಘಿಸಿ ಸಂರಕ್ಷಿತ ಪ್ರದೇಶಗಳಲ್ಲಿ ವಾಣಿಜ್ಯ ಚಲನಚಿತ್ರ ಚಿತ್ರೀಕರಣ ಮಾಡುವುದನ್ನು ಸಮರ್ಥಿಸಲು ಇದನ್ನು ಬಳಸುವಂತಿಲ್ಲ ಎಂದು ಸೋಮವಾರ ಹೊರಡಿಸಿದ ಆದೇಶದಲ್ಲಿ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅಂತೆಯೇ ತಾನು ಈಗ ನೀಡಿರುವ ತೀರ್ಪಿಗೆ ಅನುಗುಣವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಅದು ಸೂಚಿಸಿತು.
ಭವಿಷ್ಯದಲ್ಲಿ ಶಾಸನಬದ್ಧ ನಿಬಂಧನೆಗಳಿಗೆ ತಿದ್ದುಪಡಿ ತಂದರೆ ಅಥವಾ ಅರಣ್ಯದಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡುವ ಹೊಸ ನೀತಿ ರೂಪಿಸಿದರೆ, ಆಗ ಅಂತಹ ನೀತಿಗಳ ಸಿಂಧುತ್ವದ ವಿರುದ್ಧ ಅರ್ಜಿಯಲ್ಲಿ ಎತ್ತಲಾದ ಸವಾಲುಗಳನ್ನು ಮತ್ತೊಮ್ಮೆ ಪ್ರಸ್ತಾಪಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.