Justice Arun Monga and Justice Tara Vitasta Ganju farewell 
ಸುದ್ದಿಗಳು

ವಕೀಲರ ಭಾವನೆಗಳಿಗೆ ಬದ್ಧ: ನ್ಯಾ. ತಾರಾ ಗಂಜು ವರ್ಗಾವಣೆ ಸಂಬಂಧ ದೆಹಲಿ ಹೈಕೋರ್ಟ್ ಸಿಜೆ ಪ್ರತಿಕ್ರಿಯೆ

ನ್ಯಾಯಮೂರ್ತಿಗಳಾದ ಗಂಜು ಮತ್ತು ಮೋಂಗಾ ಅವರ ವರ್ಗಾವಣೆ ಕ್ರಮಕ್ಕೆ ದೆಹಲಿ ಹೈಕೋರ್ಟ್ ವಕೀಲರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

Bar & Bench

ನ್ಯಾಯಮೂರ್ತಿಗಳಾದ ತಾರಾ ವಿತಾಸ್ತ ಗಂಜು ಮತ್ತು ಅರುಣ್ ಮೋಂಗಾ ಅವರ ವರ್ಗಾವಣೆ ಕುರಿತು ವಕೀಲ ಸಮುದಾಯದ ಭಾವನೆಗಳಿಗೆ ಬೆಂಬಲ ನೀಡುತ್ತೇನೆ ಎಂದು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಹೇಳಿದ್ದಾರೆ.

ನ್ಯಾಯಾಲಯದ ಸಹೋದ್ಯೋಗಿಗಳ ವರ್ಗಾವಣೆ ಕುರಿತು ವಕೀಲ ಸಮುದಾಯದ ಭಾವನೆಗಳನ್ನು ಗೌರವಿಸುವೆ. ನಮ್ಮ ಸಹೋದ್ಯೋಗಿಗಳಿಗೆ ಶುಭ ಕೋರುವೆ. ರಾಷ್ಟ್ರಪತಿಗಳಿಗೆ ವ್ಯಕ್ತಪಡಿಸಿದ ಭಾವನೆಗಳಿಗೆ ಸಂಬಂಧಿಸಿದಂತೆ ನಾನು ವಕೀಲ ವರ್ಗದೊಂದಿಗೆ ಇದ್ದೇನೆ ಎಂದು ಅವರು ಹೇಳಿದರು.

ನ್ಯಾ. ತಾರಾ ವಿತಾಸ್ತ ಗಂಜು ಅವರು ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆಗೊಂಡಿದ್ದರೆ, ನ್ಯಾ. ಅರುಣ್ ಮೋಂಗಾ ಅವರು ರಾಜಸ್ಥಾನ ಹೈಕೋರ್ಟ್‌ಗೆ ವರ್ಗಾವಣೆಗೊಂಡಿದ್ದಾರೆ.

ದೆಹಲಿ ಹೈಕೋರ್ಟ್ ವಕೀಲರ ಸಂಘವು ಈ ಇಬ್ಬರು ನ್ಯಾಯಮೂರ್ತಿಗಳಿಗೆ ಸೋಮವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸಿಜೆ ಉಪಾಧ್ಯಾಯ ಅವರು ಮಾತನಾಡಿದರು. ಬೀಳ್ಕೊಡುಗೆ ಸಮಾರಂಭದಲ್ಲಿ  ಡಿಎಚ್‌ಸಿಬಿಎ ಅಧ್ಯಕ್ಷ ಎನ್ ಹರಿಹರನ್ ಅವರು ವರ್ಗಾವಣೆಗಳಿಂದ ವಕೀಲ ವರ್ಗ ತೀವ್ರ ನೋವು ಅನುಭವಿಸಿದೆ ಎಂದು ಹೇಳಿದರು.

ವಿಶೇಷವಾಗಿ ನ್ಯಾ. ಗಂಜು ಅವರ ವರ್ಗಾವಣೆ ಕುರಿತು ವಕೀಲ ವರ್ಗದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಡಿಎಚ್‌ಸಿಬಿಎ , ಮಹಿಳಾ ವಕೀಲರು ಹಾಗೂ ವಕೀಲ ವರ್ಗದ ಉಳಿದ ಸದಸ್ಯರು ನ್ಯಾಯಮೂರ್ತಿ ಗಂಜು ಅವರ ವರ್ಗಾವಣೆಗೆ ಆಕ್ಷೇಪಿಸಿ ಸಿಜೆಐ ಬಿ ಆರ್‌ ಗವಾಯಿ ಅವರಿಗೆ ಪತ್ರ ಬರೆದಿದ್ದನ್ನು ಇಲ್ಲಿ ನೆನೆಯಬಹುದು.

ಈ ಮಧ್ಯೆ ವರ್ಗಾವಣೆ ಕುರಿತು ವಕೀಲ ವರ್ಗ ಸಿಜೆಐ ಗವಾಯಿ ಅವರನ್ನು ಭೇಟಿಯಾದಾಗ, ದೆಹಲಿಯಿಂದ ಇನ್ನು ಮುಂದೆ ಯಾವುದೇ ನ್ಯಾಯಮೂರ್ತಿಗಳನ್ನು ಸ್ಥಳಾಂತರಿಸಲಾಗುವುದಿಲ್ಲ ಎಂಬ ಭರವಸೆ ದೊರೆತಿದೆ ಎಂದು ಡಿಎಚ್‌ಸಿಬಿಎ ಉಪಾಧ್ಯಕ್ಷ ಸಚಿನ್ ಪುರಿ ಹೇಳಿದ್ದಾರೆ.

ಬೀಳ್ಕೊಡುಗೆ ಸಮಾರಂಭದಲ್ಲಿ ನ್ಯಾ. ಗಂಜು ಮಾತನಾಡಿ, "ಓರ್ವ ನ್ಯಾಯಮೂರ್ತಿಯಾಗಿ ಪ್ರತಿಯೊಂದು ಸವಾಲಿಗೂ ನಾವು ಮುಕ್ತರಾಗಿರಬೇಕು. ಪ್ರತಿಯೊಂದು ಪ್ರಕರಣವನ್ನು ಕೇವಲ ಕಪ್ಪು, ಬಿಳುಪಾಗಿ ನೋಡದೆ, ಮಾನವೀಯ ಅನುಭವದ ರಂಗುಗಳಾಗಿ ಕಾಣಬೇಕು. ಪ್ರತಿ ಪ್ರಕರಣ, ಪ್ರತಿ ಕ್ಷಣ ನನಗೆ ಹೊಸತನ್ನು ಕಲಿಸಿತು. ಅದುವೇ ಈ ವೃತ್ತಿಯ ಸೊಬಗಾಗಿದೆ," ಎಂದು ಹೇಳಿದರು.

ನ್ಯಾಯಮೂರ್ತಿ ಮೋಂಗಾ ತಮ್ಮ ಭಾಷಣದಲ್ಲಿ ನಾನು ಎಲ್ಲಿಗೇ ತೆರಳಿದರೂ ನಾನು ನಿಮ್ಮವನಾಗಿಯೇ ಇರುತ್ತೇನೆ ಎಂದರು.