Justices BR Gavai, Vikram Nath, Pankaj Mithal and Satish Chandra Sharma with Supreme Court  
ಸುದ್ದಿಗಳು

ಮೀಸಲಾತಿಯಿಂದ ಕೆನೆಪದರ ವರ್ಗ ಬೇರ್ಪಡಿಸುವ ಬಗ್ಗೆ ಸುಪ್ರೀಂ ಕೋರ್ಟ್ ಒಲವು

ಮೀಸಲಾತಿ ಸವಲತ್ತುಗಳನ್ನು ವಿಸ್ತರಿಸುವುದಕ್ಕಾಗಿ ಪರಿಶಿಷ್ಟ ಸಮುದಾಯಗಳನ್ನು ಅವುಗಳ ಆಂತರಿಕ ಹಿಂದುಳಿದಿರುವಿಕೆ ಆಧಾರದ ಮೇಲೆ ವಿವಿಧ ಗುಂಪುಗಳಾಗಿ ಉಪ-ವರ್ಗೀಕರಿಸುವ ರಾಜ್ಯಗಳ ಅಧಿಕಾರವನ್ನು ಸಾಂವಿಧಾನಿಕ ಪೀಠ ಗುರುವಾರ ಎತ್ತಿಹಿಡಿದಿದೆ.

Bar & Bench

ಮಹತ್ವದ ಬೆಳವಣಿಗೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಕೆನೆಪದರಕ್ಕೆ ಸೇರಿದವರನ್ನು ಗುರುತಿಸಿ ಅವರನ್ನು ಮೀಸಲಾತಿ ಸವಲತ್ತಿನಿಂದ ಹೊರಗಿಡುವ ಬಗ್ಗೆ ಸುಪ್ರೀಂ ಕೋರ್ಟ್‌ ತನ್ನ ಒಲವು ಪ್ರಕಟಿಸಿದೆ.

ಪ್ರಸ್ತುತ ಕೆನೆ ಪದರದ ತತ್ವವು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮಾತ್ರ ಅನ್ವಯಿಸುತ್ತಿದೆಯೇ ವಿನಾ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಅನ್ವಯವಾಗುತ್ತಿಲ್ಲ.

ಮೀಸಲಾತಿ ಸವಲತ್ತುಗಳನ್ನು ವಿಸ್ತರಿಸುವುದಕ್ಕಾಗಿ ಎಸ್‌ಸಿ- ಎಸ್‌ಟಿ ಸಮುದಾಯಗಳನ್ನು ಅವುಗಳ ಆಂತರಿಕ ಹಿಂದುಳಿದಿರುವಿಕೆ ಆಧಾರದ ಮೇಲೆ ವಿವಿಧ ಗುಂಪುಗಳಾಗಿ ಉಪ-ವರ್ಗೀಕರಿಸುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಸಂವಿಧಾನ ಪೀಠ ಗುರುವಾರ ಎತ್ತಿಹಿಡಿದ ವೇಳೆ ಈ ವಿಚಾರ ತಿಳಿಸಲಾಗಿದೆ.

ಮೀಸಲಾತಿ ಸವಲತ್ತುಗಳು ಅಂತಹ ಸಮುದಾಯಗಳಲ್ಲಿ ಇನ್ನಷ್ಟು ಹಿಂದುಳಿದವರಿಗೆ ತಲುಪುವಂತಾಗಲು ಕೆನೆಪದರ ಗುರುತಿಸುವಿಕೆಗೆ ಪೀಠದ ಏಳು ನ್ಯಾಯಮೂರ್ತಿಗಳಲ್ಲಿ ನಾಲ್ವರು ಸಲಹೆ ನೀಡಿದರು.  

ಸಹಮತದ ತೀರ್ಪು ಬರೆದ ನ್ಯಾ. ಬಿ ಆರ್‌ ಗವಾಯಿ ಅವರು ಮೀಸಲಾತಿಯ ಅಂತಿಮ ಗುರಿ ದೇಶದಲ್ಲಿ ನೈಜ ಸಮಾನತೆ ಸಾಧಿಸುವುದಾಗಿದ್ದು ಎಸ್‌ಸಿ ಎಸ್‌ಟಿ ಸಮುದಾಯದ ಕೆನೆಪದರ ವರ್ಗವನ್ನು ಗುರುತಿಸಿ ಅವರನ್ನು ಮೀಸಲಾತಿ ಸವಲತ್ತುಗಳಿಂದ ಹೊರಗಿಡಬೇಕು ಎಂದರು.

ಒಬಿಸಿಗಳಿಗೆ ಅನ್ವಯವಾಗುವ ಕೆನೆ ಪದರದ ತತ್ವವನ್ನು ಪರಿಶಿಷ್ಟ ವರ್ಗಗಳಿಗೂ ಅನ್ವಯಿಸಬೇಕು ಆದರೆ ಪರಿಶಿಷ್ಟ ಸಮುದಾಯಗಳ ಕೆನೆ ಪದರವನ್ನು ಮೀಸಲಾತಿ ವ್ಯಾಪ್ತಿಯಿಂದ ಹೊರಗಿಡುವ ಮಾನದಂಡಗಳು ಒಬಿಸಿಗಳಿಗೆ ಅನ್ವಯಿಸುವ ಮಾನದಂಡಕ್ಕಿಂತಲೂ ಭಿನ್ನವಾಗಿರಬೇಕು ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ತಮ್ಮ ತೀರ್ಪಿನಲ್ಲಿ ತಿಳಿಸಿದರು.

ಇದಕ್ಕೆ ದನಿಗೂಡಿಸಿದ ನ್ಯಾ. ಪಂಕಜ್‌ ಮಿತ್ತಲ್‌ ಮೀಸಲಾತಿ ಒಂದು ವರ್ಗದ ಒಂದು ಪೀಳಿಗೆಗೆ ದೊರೆಯುವಂತಾಗಬೇಕು . ಸಾಮಾನ್ಯ ವರ್ಗಕ್ಕೆ ಸರಿ ಸಮನಾಗಿ ಎರಡನೇ ಪೀಳಗೆ ನಿಂತಿದೆಯೇ ಎಂಬುದನ್ನು ಪ್ರಭುತ್ವ ಗಮನಿಸಬೇಕು ಎಂದರು.

ಎಸ್‌ಸಿ/ಎಸ್‌ಟಿಗಳಲ್ಲಿ ಕೆನೆಪದರ ಗುರುತಿಸುವುದು ಸಾಂವಿಧಾನಿಕ ಅನಿವಾರ್ಯತೆಯಾಗಬೇಕು ಎಂದು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ತಿಳಿಸಿದರು.

ಸಹಮತದ ತೀರ್ಪು ನೀಡಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರು ಈ ವಿಚಾರದಲ್ಲಿ ಯಾವುದೇ ಅಭಿಪ್ರಾಯ  ವ್ಯಕ್ತಪಡಿಸಲಿಲ್ಲ.

ಮತ್ತೊಬ್ಬ  ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರು ಭಿನ್ನ ತೀರ್ಪು ನೀಡಿದ್ದರು. ಅವರು ಒಳ ಮೀಸಲಾತಿಗೆ ಅನುಮತಿ ನೀಡಬಾರದು ಎಂದಿದ್ದರು.