justices BV Nagarathna and Vikram Nath and Senior Advocate PS Narasimha  
ಸುದ್ದಿಗಳು

ಸಿಜೆಐ ಆದರೂ ಅಲ್ಪಾವಧಿಗೆ ಕಾರ್ಯ ನಿರ್ವಹಿಸಲಿರುವ ನ್ಯಾ. ಬಿ ವಿ ನಾಗರತ್ನ: ಅವರ ಅಧಿಕಾರಾವಧಿ ಕೇವಲ 36 ದಿನಗಳು ಮಾತ್ರ

ಒಂಬತ್ತು ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಸಂಬಂಧ ಆಗಸ್ಟ್ 17ರಂದು ಕೊಲಿಜಿಯಂ ಮಾಡಿದ್ದ ಶಿಫಾರಸುಗಳಿಗೆ ಕೇಂದ್ರ ಅನುಮೋದನೆ ನೀಡಿದರೆ ಒಂಬತ್ತು ನ್ಯಾಯಮೂರ್ತಿಗಳಲ್ಲಿ ಮೂವರು ಸಿಜೆಐ ಹುದ್ದೆ ಅಲಂಕರಿಸಲಿದ್ದಾರೆ.

Bar & Bench

ಸುಪ್ರೀಂಕೋರ್ಟ್‌ನ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿ ಹುದ್ದೆಯ (ಸಿಜೆಐ) ಸಂಭಾವ್ಯ ಅಭ್ಯರ್ಥಿ ಎನಿಸಿಕೊಂಡಿರುವ ನ್ಯಾ. ಬಿ ವಿ ನಾಗರತ್ನ ಕೇಂದ್ರ ಸರ್ಕಾರದ ಅನುಮೋದನೆಯಂತೆ ಒಂದು ವೇಳೆ ಆ ಹುದ್ದೆಗೆ ಏರಿದರೂ ಅವರು ಅಲ್ಪಾವಧಿಗೆ ಮಾತ್ರ ಹುದ್ದೆ ಅಲಂಕರಿಸಲಿದ್ದಾರೆ. ಒಂದು ತಿಂಗಳು ಐದು ದಿನ ಅಥವಾ 36 ದಿನಗಳು ಮಾತ್ರ ಅವರು ಸಿಜೆಐ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಆಗಸ್ಟ್‌ 17 ರಂದು ಕೊಲಿಜಿಯಂ ಒಂಬತ್ತು ಮಂದಿಯನ್ನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಶಿಫಾರಸು ಮಾಡಿತ್ತು. ಅವರಲ್ಲಿ ಎಂಟು ಮಂದಿ ನ್ಯಾಯಮೂರ್ತಿಗಳು/ ಮುಖ್ಯ ನ್ಯಾಯಮೂರ್ತಿಗಳಾಗಿದ್ದು ಒಬ್ಬರು ಹಿರಿಯ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡುತ್ತಿದ್ದಾರೆ.

ಒಂಬತ್ತು ಮಂದಿಯಲ್ಲಿ ಮೂರು ಮಂದಿ ಮಹಿಳಾ ನ್ಯಾಯಮೂರ್ತಿಗಳಿದ್ದು ಬಿ ವಿ ನಾಗರತ್ನ ಅವರ ಜೊತೆಗೆ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಬೇಲಾ ತ್ರಿವೇದಿ ಅವರನ್ನು ಕೂಡ ಪದೋನ್ನತಿಗೆ ಶಿಫಾರಸು ಮಾಡಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸುಪ್ರೀಂಕೋರ್ಟ್‌ನ ಮೊಟ್ಟಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯನ್ನಾಗಿ ಬಿ ವಿ ನಾಗರತ್ನ ಅವರನ್ನು ದೇಶ ಕಾಣಲಿದೆ.

ಸಿಜೆಐ ಆಯ್ಕೆಯ ಹಿಂದಿನ ಲೆಕ್ಕಾಚಾರಗಳು…

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಯನ್ನು ಸೇವಾ ಹಿರಿತನದ ಮೇಲೆ ನಿರ್ಧರಿಸಲಾಗುತ್ತದೆ ಮತ್ತು ಹಿರಿತನವನ್ನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ದಿನದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಒಂದೇ ದಿನದಲ್ಲಿ ಇಬ್ಬರು ಅಥವಾ ಹೆಚ್ಚಿನ ನ್ಯಾಯಮೂರ್ತಿಗಳು ನೇಮಕವಾಗಿದ್ದರೆ ಹಿರಿತನವನ್ನು ಪ್ರಮಾಣವಚನ ಅನುಕ್ರಮದ ಆಧಾಎದ ಮೇಲೆ ಮತ್ತು ಹೈಕೋರ್ಟ್‌ನಲ್ಲಿ ಸಲ್ಲಿಸಿದ ಸೇವಾನುಭವ ಆಧರಿಸಿ ತೀರ್ಮಾನ ಮಾಡಲಾಗುತ್ತದೆ.

ಹೈಕೋರ್ಟ್‌ ಸೇವಾನುಭವ ಕೂಡ ಒಂದೇ ರೀತಿ ಇದ್ದರೆ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ದಿನಾಂಕವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಪ್ರಸ್ತುತ, ಫೆಬ್ರವರಿ 9, 2027 ರವರೆಗೆ ಸಿಜೆಐ ಪಟ್ಟಿ ತೀರ್ಮಾನವಾಗಿದೆ. ಅದರಂತೆ ನ್ಯಾಯಮೂರ್ತಿ ಎನ್ ವಿ ರಮಣ ಪ್ರಸ್ತುತ ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಅವರು ಆಗಸ್ಟ್ 26, 2022 ರವರೆಗೆ ಈ ಹುದ್ದೆಯಲ್ಲಿರುತ್ತಾರೆ. ಬಳಿಕ ಸಿಜೆಐ ಆಗಿ ಕಾರ್ಯ ನಿರ್ವಹಿಸಲಿರುವ ಇತರೆ ನ್ಯಾಯಮೂರ್ತಿಗಳ ಪಟ್ಟಿ ಹೀಗಿದೆ:

ನ್ಯಾ. ಯುಯು ಲಲಿತ್ - ಆಗಸ್ಟ್ 27, 2022 ರಿಂದ ನವೆಂಬರ್ 8, 2022.

ನ್ಯಾ. ಡಿ ವೈ ಚಂದ್ರಚೂಡ್ - ನವೆಂಬರ್ 9, 2022 ರಿಂದ ನವೆಂಬರ್ 10, 2024

ನ್ಯಾ. ಸಂಜೀವ್ ಖನ್ನಾ - ನವೆಂಬರ್ 11, 2024 ರಿಂದ ಮೇ 13, 2025

ನ್ಯಾ. ಬಿ ಆರ್ ಗವಾಯಿ - ಮೇ 14, 2025 ರಿಂದ ನವೆಂಬರ್ 23, 2025

ನ್ಯಾ. ಸೂರ್ಯ ಕಾಂತ್ - ನವೆಂಬರ್ 24, 2025 ರಿಂದ ಫೆಬ್ರವರಿ 9, 2027

ನ್ಯಾ. ಸೂರ್ಯಕಾಂತ್ ನಿವೃತ್ತಿ ನಂತರ, ಪ್ರಸ್ತುತ ಶಿಫಾರಸುಗಳನ್ನು ಕೇಂದ್ರ ಅಂಗೀಕರಿಸಲಿದ್ದು ಆ ನಂತರವೇ ಭವಿಷ್ಯದ ಸಿಜೆಐಗಳ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಎಲ್ಲಾ ಒಂಬತ್ತು ಹೆಸರುಗಳಿಗೆ ಅಂಗೀಕಾರ ದೊರೆತರೆ ಸಿಜೆಐ ಹುದ್ದೆ ಅಲಂಕರಿಸುವವರಲ್ಲಿ ಕೇವಲ ಮೂವರು ಮಾತ್ರ ಇರುತ್ತಾರೆ. ಅವರು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಬಿವಿ ನಾಗರತ್ನ ಮತ್ತು ಹಿರಿಯ ವಕೀಲ ಪಿಎಸ್ ನರಸಿಂಹ.

ಏಕೆಂದರೆ ಉಳಿದ ಆರು ಅಭ್ಯರ್ಥಿಗಳ ಪೈಕಿ ಐವರು (ನ್ಯಾಯಮೂರ್ತಿಗಳಾದ ಎಎಸ್ ಓಕಾ, ಹಿಮಾ ಕೊಹ್ಲಿ, ಜೆಕೆ ಮಹೇಶ್ವರಿ, ಸಿಟಿ ರವಿಕುಮಾರ್, ಮತ್ತು ಬೇಲಾ ತ್ರಿವೇದಿ) ನ್ಯಾ. ಸೂರ್ಯಕಾಂತ್ ನಿವೃತ್ತಿಗೂ ಮುನ್ನವೇ ನಿವೃತ್ತಿ ಹೊಂದಲಿದ್ದಾರೆ.

ಇವರಲ್ಲಿ ನ್ಯಾ. ಎಂ.ಎಂ.ಸುಂದರೇಶ್ ಅವರು ಮಾತ್ರ ಜುಲೈ 10, 2027ರಂದು ನಿವೃತ್ತರಾಗುತ್ತಾರೆ. ಆದರೆ, ಅವರು ಸಿಜೆಐ ಆಗುವುದಿಲ್ಲ ಏಕೆಂದರೆ ಅವರು ಸೇವಾ ಹಿರಿತನದಲ್ಲಿ ನ್ಯಾ.ವಿಕ್ರಮ್ ನಾಥ್‌ಗಿಂತ ಕೆಳಗಿದ್ದಾರೆ (ನ್ಯಾಯಮೂರ್ತಿ ನಾಥ್ 2004ರಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದರು ಮತ್ತು ನ್ಯಾ. ಸುಂದ್ರೇಶ್ ಆ ಹುದ್ದೆ ಅಲಂಕರಿಸಿದ್ದು 2009ರಲ್ಲಿ). ಆದ್ದರಿಂದ, ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು ಫೆಬ್ರವರಿ 10, 2027 ರಿಂದ ಸೆಪ್ಟೆಂಬರ್ 23, 2027 ರವರೆಗೆ ಅಧಿಕಾರ ವಹಿಸಿಕೊಳ್ಳುತ್ತಾರೆ. ಅಷ್ಟರೊಳಗೆ ನ್ಯಾಯಮೂರ್ತಿ ಸುಂದ್ರೇಶ್ ನಿವೃತ್ತರಾಗುತ್ತಾರೆ.

ಈ ಹಿನ್ನೆಲೆಯಲ್ಲಿ ಮುಂದಿನ ಸಾಲಿನಲ್ಲಿ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಇರುತ್ತಾರೆ. ಅವರು ಸೆಪ್ಟೆಂಬರ್ 24, 2027 ರಿಂದ ಅಕ್ಟೋಬರ್ 29, 2027 ರವರೆಗೆ 36 ದಿನಗಳ ಕಾಲ ಈ ಹುದ್ದೆಯಲ್ಲಿರುತ್ತಾರೆ.

ಆದರೆ ಒಂದು ವೇಳೆ ಸರ್ಕಾರ ನ್ಯಾ. ವಿಕ್ರಮ್‌ ನಾಥ್‌ ಅವರ ಹೆಸರನ್ನು ಶಿಫಾರಸುಗೊಳಿಸದಿದ್ದರೆ ನ್ಯಾ. ನಾಗರತ್ನ ಅವರು ಫೆಬ್ರವರಿ 10, 2027 ರಿಂದ ಅಕ್ಟೋಬರ್ 29, 2027 ರವರೆಗೆ ದೀರ್ಘಾವಧಿವರೆಗೆ ಅಧಿಕಾರ ವಹಿಸಿಕೊಳ್ಳಬಹುದಾಗಿದೆ. ನ್ಯಾ. ನಾಗರತ್ನ ಅವರ ನಿವೃತ್ತಿಯ ನಂತರ ಪಿಎಸ್ ನರಸಿಂಹ ಆ ಹುದ್ದೆಯನ್ನು ನಿರ್ವಹಿಸಲಿದ್ದಾರೆ. ಅವರು ಅಕ್ಟೋಬರ್ 30, 2027 ರಿಂದ ಮೇ 2028 ರವರೆಗೆ ಗಣನೀಯವಾಗಿ ದೀರ್ಘಾವಧಿಯವರೆಗೆ ಹುದ್ದೆ ಅಲಂಕರಿಸಲಿದ್ದಾರೆ.

ನರಸಿಂಹ ಅವರು ವಕೀಲ ವರ್ಗದಿಂದ ನೇರವಾಗಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆ ಅಲಂಕರಿಸಲಿರುವ ಮೂರನೇ ವ್ಯಕ್ತಿಯಾಗಿದ್ದಾರೆ. ಮೊದಲನೆಯವರು ನ್ಯಾ. ಎಸ್‌ಎಂ ಸಿಕ್ರಿ (1970 ದಶಕದ ಆರಂಭದಲ್ಲಿ). ಎರಡನೆಯವರು ನ್ಯಾಯಮೂರ್ತಿ ಯು ಯು ಲಲಿತ್ ಆಗಿದ್ದು, ಅವರು ಆಗಸ್ಟ್ 27, 2022 ರಿಂದ ನವೆಂಬರ್ 8, 2022 ರವರೆಗೆ ಸಿಜೆಐ ಹುದ್ದೆ ಅಲಂಕರಿಸಲಿದ್ದಾರೆ.