Supreme Court 
ಸುದ್ದಿಗಳು

ಪುರುಷರಿಗೆ ಋತುಸ್ರಾವ ಆಗುವಂತಿದ್ದರೆ ಅರ್ಥವಾಗುತ್ತಿತ್ತು: ನ್ಯಾಯಾಧೀಶೆಯರ ವಜಾ ಕುರಿತು ಸುಪ್ರೀಂ ಕಿಡಿ

ಕಳೆದ ವರ್ಷ ಜೂನ್‌ನಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ ಶಿಫಾರಸಿನ ಮೇರೆಗೆ ಮಧ್ಯಪ್ರದೇಶ ಸರ್ಕಾರ ಆರು ಮಹಿಳಾ ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸಿತ್ತು.

Bar & Bench

ರಾಜ್ಯದ ಮಹಿಳಾ ಸಿವಿಲ್‌ ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸಿ ಅವರಲ್ಲಿ ಕೆಲವರನ್ನು ಮರುನೇಮಕ ಮಾಡಿಕೊಳ್ಳಲು ನಿರಾಕರಿಸಿದ್ದ ಮಧ್ಯಪ್ರದೇಶ ಹೈಕೋರ್ಟನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ [ವರ್ಗ II ಕಿರಿಯರ ವಿಭಾಗದ ಸಿವಿಲ್‌ ನ್ಯಾಯಾಧೀಶೆಯರ ವಜಾಗೊಳಿಸಿದ ಮಧ್ಯಪ್ರದೇಶ ಸರ್ಕಾರಿ ನ್ಯಾಯಾಂಗ ಸೇವೆಗೆ ಸಂಬಂಧಿಸಿದ ಪ್ರಕರಣ].

ನ್ಯಾಯಾಧೀಶೆಯರು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲುತ್ತಿರುವ ಸಂದರ್ಭದಲ್ಲಿ ಇಂತಿಷ್ಟೇ ಪ್ರಕರಣ ವಿಲೇವಾರಿ ಮಾಡಬೇಕು ಎಂಬುದು ಅಳತೆಗೋಲು ಆಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಹೇಳಿದೆ.

 “ವಜಾಗೊಳಿಸಲಾಗಿದೆ- ವಜಾಗೊಳಿಸಲಾಗಿದೆ ಎಂದು ಹೇಳಿ ಮನೆಗೆ ಹೋಗುವುದು ತುಂಬಾ ಸುಲಭ. ಈ ಪ್ರಕರಣವನ್ನು ಸಹ ನಾವು ಸುದೀರ್ಘವಾಗಿ ಆಲಿಸುತ್ತಿದ್ದೇವೆ. ಹಾಗೆಂದು, ವಕೀಲರು ನ್ಯಾಯಾಲಯ ವಿಳಂಬ ಮಾಡುತ್ತಿದೆ ಎನ್ನಲು ಸಾಧ್ಯವೇ? ಅದರಲ್ಲಿಯೂ ನ್ಯಾಯಾಧೀಶೆಯರು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲುತ್ತಿದ್ದರೆ ಅವರು ನಿಧಾನ ಎಂದು ಮನೆಗೆ ಕಳುಹಿಸಬಹುದೇ.. ಪುರುಷ ನ್ಯಾಯಾಧೀಶರಿಗೂ ಇದೇ ಮಾನದಂಡ ಇರಲಿ. ಆಗ ಏನು ನಡೆಯುತ್ತದೆ ಎಂಬುದು ನಮಗೆ ಗೊತ್ತಿದೆ. ಜಿಲ್ಲಾ ನ್ಯಾಯಾಂಗಕ್ಕೆ (ಪ್ರಕರಣ ವಿಲೇವಾರಿಯ) ಗುರಿ ನೀಡಲು ಹೇಗೆ ಸಾಧ್ಯ?” ಎಂದು ನ್ಯಾ. ನಾಗರತ್ನ ಅಸಮಾಧಾನ ವ್ಯಕ್ತಪಡಿಸಿದರು.

ಪುರುಷರಿಗೂ ಋತುಸ್ರಾವವಾಗಬೇಕಿತ್ತು ಎಂದು ನಾನು ಬಯಸುತ್ತೇನೆ, ಆಗ ಮಾತ್ರ ಅವರಿಗೆ ಅರ್ಥವಾಗಲು ಸಾಧ್ಯ.
ನ್ಯಾ. ಬಿ ವಿ ನಾಗರತ್ನ

ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 12 ರಂದು ನಡೆಯಲಿದೆ. ಜೂನ್ 2023ರಲ್ಲಿ ಮಧ್ಯಪ್ರದೇಶ ಸರ್ಕಾರವು ಆರು ನ್ಯಾಯಾಧೀಶರನ್ನು ವಜಾಗೊಳಿಸಿದ್ದ ಘಟನೆಯನ್ನು ಸುಪ್ರೀಂ ಕೋರ್ಟ್ ಕಳೆದ ಜನವರಿಯಲ್ಲಿ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಲು ನಿರ್ಧರಿಸಿತ್ತು.

ತರಬೇತಿ  ಅವಧಿಯಲ್ಲಿ ಆರು ಮಹಿಳಾ ನ್ಯಾಯಾಧೀಶರ ಕಾರ್ಯಕ್ಷಮತೆ ಅತೃಪ್ತಿಕರವಾಗಿದೆ ಎಂದು ಆಡಳಿತಾತ್ಮಕ ಸಮಿತಿ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ಪೂರ್ಣ ನ್ಯಾಯಾಲಯದ ಸಭೆ ನಿರ್ಧರಿಸಿದ್ದ ಹಿನ್ನೆಲೆಯಲ್ಲಿ ಕಾನೂನು ಇಲಾಖೆ ಅವರನ್ನು ವಜಾಗೊಳಿಸಿತ್ತು.

ತನ್ನ ನಿರ್ಧಾರವನ್ನು ಮರುಪರಿಶೀಲಿಸಲು ಹೈಕೋರ್ಟ್‌ ಸಿದ್ಧವಾಗಿದೆಯೇ ಎಂದು ಫೆಬ್ರವರಿಯಲ್ಲಿ ನಡೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಮೌಖಿಕವಾಗಿ  ಪ್ರಶ್ನಿಸಿತ್ತು. ವಜಾಗೊಂಡ ನ್ಯಾಯಾಧೀಶೆಯರ ಮನವಿ ಸಂಬಂಧ ಒಂದು ತಿಂಗಳೊಳಗೆ ನಿರ್ಧಾರ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ಜುಲೈನಲ್ಲಿ ಮತ್ತೆ ಸಲಹೆ ನೀಡಿತ್ತು.  

ಹಿರಿಯ ವಕೀಲ ಗೌರವ್ ಅಗರವಾಲ್  ಪ್ರಕರಣದ ಅಮಿಕಸ್ ಕ್ಯೂರಿಯಾಗಿದ್ದಾರೆ . ನ್ಯಾಯಾಧೀಶೆಯರ ಪರವಾಗಿ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಮತ್ತು ಆರ್ ಬಸಂತ್ ವಾದ ಮಂಡಿಸಿದರು.