ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ಸುದ್ದಿಗಳು

ನ್ಯಾಯಾಂಗ ಸ್ವಾತಂತ್ರ್ಯ ಸಂವಿಧಾನದ ಭಾಗ: ನ್ಯಾಯಾಂಗ ಅಧಿಕಾರಿ ವಿರುದ್ಧದ ಖಾಸಗಿ ದೂರು ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್

Bar & Bench

ನ್ಯಾಯಾಂಗ ಅಧಿಕಾರಿಯೊಬ್ಬರ ವಿರುದ್ಧದ ಖಾಸಗಿ ದೂರನ್ನು ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್, ನ್ಯಾಯಾಂಗ ಸ್ವಾತಂತ್ರ್ಯ ಭಾರತದ ಸಂವಿಧಾನದ ಮೂಲ ರಚನೆಯ ಭಾಗವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ:

ಈ ಹಿಂದೆ ದೂರುದಾರರ ಮಗನನ್ನು ವೈದ್ಯರೊಬ್ಬರ ಬಳಿಗೆ ಕರೆದೊಯ್ಯಲಾಗಿತ್ತು, ಮಗನನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸುವಂತೆ ಅವರು ಸಲಹೆ ನೀಡಿದರು. ಮಗ ಅಲ್ಲಿ ತೀರಿಕೊಂಡ. ನಿರ್ಲಕ್ಷ್ಯದಿಂದ ಸಾವುಂಟಾಗಿದೆ ಎಂದು ಆರೋಪಿಸಿ ಐಪಿಸಿ ಸೆಕ್ಷನ್ 304ರ ಅಡಿಯಲ್ಲಿ ವೈದ್ಯರು ಮತ್ತಿತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.

ಈ ಮಧ್ಯೆ, 2 ಲಕ್ಷ ರೂ.ಗಳ ಸಾಲಮರುಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಸಹಕಾರಿ ಸಂಘದ ವ್ಯವಸ್ಥಾಪಕರೊಬ್ಬರು ದೂರುದಾರರ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಂತರ, ಈ ಪ್ರಕರಣದಲ್ಲಿ ಉಲ್ಲೇಖಿಸಲಾಗಿರುವ ನ್ಯಾಯಾಂಗ ಅಧಿಕಾರಿಯ ಮುಂದೆ ಹಾಜರುಪಡಿಸಲಾಯಿತು.

ದೂರುದಾರರ ಪ್ರಕಾರ, ಆ ನ್ಯಾಯಾಂಗ ಅಧಿಕಾರಿ, (ಪ್ರಕರಣದ ಎರಡನೇ ಪ್ರತಿವಾದಿ) ವೈದ್ಯರ ವಿರುದ್ಧದ ದೂರನ್ನು ಹಿಂತೆಗೆದುಕೊಂಡರೆ ತಮ್ಮನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುವುದು. ದೂರನ್ನು ಹಿಂತೆಗೆದುಕೊಳ್ಳದಿದ್ದರೆ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಹೇಳಿದ್ದರು ಎನ್ನಲಾಗಿದೆ.

ನ್ಯಾಯಾಂಗ ಅಧಿಕಾರಿ ತನ್ನ ನ್ಯಾಯಾಂಗ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ, ಅಲ್ಲದೆ ಐಪಿಸಿಯ ಸೆಕ್ಷನ್ 34 ಮತ್ತು 499 ರೊಂದಿಗೆ ಜೊತೆಗಿರಿಸಿ ಓದಿದಾಗ ಸೆಕ್ಷನ್ 166, 205, 120 ಎ, 211, 219 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ನಂತರ, ನ್ಯಾಯಾಂಗ ಅಧಿಕಾರಿ ಹಾಗೂ ಇತರ ಒಂಬತ್ತು ಆರೋಪಿಗಳ ವಿರುದ್ದ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 200 ರ ಅಡಿಯಲ್ಲಿ ಖಾಸಗಿ ದೂರನ್ನು ಬಳ್ಳಾರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೂರುದಾರ ಸಲ್ಲಿಸಿದರು.

ಜುಲೈ 21 ರಂದು, ನ್ಯಾಯಾಂಗ ಅಧಿಕಾರಿಗೆ ಸಂಬಂಧಿಸಿದಂತೆ ಮೊದಲ ಪ್ರತಿವಾದಿ ಸಲ್ಲಿಸಿದ್ದ ದೂರನ್ನು ರದ್ದುಪಡಿಸಿದ್ದಕ್ಕಾಗಿ ಸಿಆರ್‌ಪಿಸಿಯ 482ನೇ ಸೆಕ್ಷನ್ ಅಡಿಯಲ್ಲಿ ಸ್ವಯಂ ಪ್ರೇರಿತ ಕ್ರಿಮಿನಲ್ ಅರ್ಜಿ ದಾಖಲಿಸಲು ನಿರ್ದೇಶನ ನೀಡಲಾಯಿತು.

ನ್ಯಾಯಾಲಯ ಹೇಳಿದ್ದೇನು?

ವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ ನ್ಯಾಯಾಂಗ ಅಧಿಕಾರಿಗಳಿಗೆ ವಿವಿಧ ಕಾಯಿದೆಗಳ ಅಡಿಯಲ್ಲಿ ನೀಡಲಾದ ರಕ್ಷಣೆ ಕುರಿತು ವಿಶ್ಲೇಷಿಸಿತು.

1985ರ ನ್ಯಾಯಾಧೀಶರ ಸಂರಕ್ಷಣಾ ಕಾಯಿದೆಯನ್ನು ಉಲ್ಲೇಖಿಸಿದ ನ್ಯಾಯಾಲಯ ಹೀಗೆ ಅಭಿಪ್ರಾಯಪಟ್ಟಿದೆ:

“…ಅವರ ವಿರುದ್ಧ ಮೊದಲ ಪ್ರತಿವಾದಿ ಮಾಡಿದ ಎಲ್ಲಾ ಆರೋಪಗಳು ನ್ಯಾಯಾಂಗ ಅಧಿಕಾರಿ ತನ್ನ ಅಧಿಕೃತ ಅಥವಾ ನ್ಯಾಯಾಂಗ ಕರ್ತವ್ಯವನ್ನು ನಿರ್ವಹಿಸಲು ಅಥವಾ ಕಾರ್ಯಗತಗೊಳಿಸಲು ಉದ್ದೇಶಿಸಿದಾಗ ಮಾಡಿದಂತಹವುಗಳು. ಎರಡನೆಯ ಪ್ರತಿವಾದಿಯು ಮೊದಲ ಪ್ರತಿವಾದಿಯನ್ನು ಉದ್ದೇಶಿಸಿ ಆಡಿದ ಮಾತುಗಳು, ನ್ಯಾಯಾಂಗ ಅಧಿಕಾರಿಯಾಗಿ ತನ್ನ ಕರ್ತವ್ಯಗಳನ್ನು ಕರ್ತವ್ಯವನ್ನು ನಿರ್ವಹಿಸಲು ಅಥವಾ ಕಾರ್ಯಗತಗೊಳಿಸಲು ಉದ್ದೇಶಿಸಿದಾಗ ಆಡಿರುವಂತಹದ್ದು. ಆದ್ದರಿಂದ, 1985ರ ಕಾಯಿದೆಯ ಸೆಕ್ಷನ್ 3ರ ಉಪವಿಭಾಗ (1) ಸ್ಪಷ್ಟವಾಗಿ ಅನ್ವಯಿಸುತ್ತದೆ ಹಾಗಾಗಿ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರು ಎರಡನೇ ಪ್ರತಿವಾದಿಗೆ ವಿರುದ್ಧವಾಗಿ ಮೊದಲ ಪ್ರತಿವಾದಿ ಸಲ್ಲಿಸಿದ ದೂರನ್ನು ಪುರಸ್ಕರಿಸಲು ಸಾಧ್ಯವಿಲ್ಲ. ”
ಕರ್ನಾಟಕ ಹೈಕೋರ್ಟ್

1985ರ ಕಾಯಿದೆಯ ಸೆಕ್ಷನ್ 3(1) ರ ಅಡಿ ರಕ್ಷಣೆ ಪಡೆಯಲು ನ್ಯಾಯಾಂಗ ಅಧಿಕಾರಿಯು ತನ್ನ ಕೃತ್ಯ, ಸಂಗತಿ ಅಥವಾ ಮಾತುಗಳನ್ನು ಉತ್ತಮ ಉದ್ದೇಶದಿಂದಲೇ ಹೇಳಿರಬೇಕೆಂದೇನೂ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ವಿರುದ್ಧ ನ್ಯಾಯಾಂಗ ಅಧಿಕಾರಿಗಳಿಗೆ ಹೆಚ್ಚುವರಿ ರಕ್ಷಣೆ ನೀಡಲು ಇದು ಮತ್ತೊಂದು ರಕ್ಷಣೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಸಿಆರ್‌ಪಿಸಿಯ ಸೆಕ್ಷನ್ 482ರ ಅಡಿಯಲ್ಲಿ ಸ್ವಯಂಪ್ರೇರಿತ (ಸು ಮೋಟೊ) ಅಧಿಕಾರವನ್ನು ಸರಿಯಾಗಿ ಚಲಾಯಿಸದ ಅಂಶದ ಕುರಿತು ನ್ಯಾಯಾಲಯ ಹೀಗೆ ಅಭಿಪ್ರಾಯ ಹಂಚಿಕೊಂಡಿದೆ:

"ನ್ಯಾಯಾಲಯದ ಸ್ವಯಂಪ್ರೇರಿತ (ಸು ಮೋಟೊ) ಅಧಿಕಾರವನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಮಾತ್ರವೇ ಚಲಾಯಿಸಬಹುದು ಎಂದು ಸೆಕ್ಷನ್ 482 ರಲ್ಲಿ ಎಲ್ಲಿಯೂ ಸೂಚಿಸಲಾಗಿಲ್ಲ. ಇದನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಮಾತ್ರ ಬಳಸಬಹುದೆಂದು ಊಹಿಸಿದರೆ, ಪ್ರಸ್ತುತ ಅರ್ಜಿಯಲ್ಲಿ ಖಂಡಿತವಾಗಿಯೂ ಸಾರ್ವಜನಿಕ ಹಿತಾಸಕ್ತಿಯ ಅಂಶವಿದೆ. ನ್ಯಾಯಾಂಗ ಸ್ವಾತಂತ್ರ್ಯ ಭಾರತದ ಸಂವಿಧಾನದ ಮೂಲ ರಚನೆಗಳಲ್ಲಿ ಒಂದಾಗಿದೆ."
ಕರ್ನಾಟಕ ಹೈಕೋರ್ಟ್

ಈ ಅವಲೋಕನಗಳೊಂದಿಗೆ, ನ್ಯಾಯಾಂಗ ಅಧಿಕಾರಿಗೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯಕ್ಕೆ ಸಲ್ಲಿಸಿದ ದೂರನ್ನು ಹೈಕೋರ್ಟ್ ರದ್ದುಪಡಿಸಿತು.

[ಆದೇಶವನ್ನು ಓದಿ]

pvt_complaint_Judicial_officer.pdf
Preview