Gauhati High Court
Gauhati High Court 
ಸುದ್ದಿಗಳು

'ಭಾರತ ಜಾತ್ಯತೀತ ದೇಶ, ವಿಮಾನ ನಿಲ್ದಾಣದಲ್ಲಿ ಒಂದು ಸಮುದಾಯಕ್ಕೇ ಪ್ರಾರ್ಥನಾ ಕೋಣೆ ಏಕೆ?' ಗುವಾಹಟಿ ಹೈಕೋರ್ಟ್ ಪ್ರಶ್ನೆ

Bar & Bench

ಗುವಾಹಟಿ ಏರ್‌ಪೋರ್ಟ್‌ನಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಪ್ರಾರ್ಥನಾ ಕೊಠಡಿ ಕಲ್ಪಿಸಲು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಕುರಿತು ಗುವಾಹಟಿ ಹೈಕೋರ್ಟ್ ಶುಕ್ರವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ [ರಾಣಾ ಸೈದುರ್ ಜಮಾನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಪ್ರಾರ್ಥನಾ ಕೊಠಡಿ ನಿರ್ಮಿಸುವುದರಿಂದ ಯಾವ ಬಗೆಯ ಸಾರ್ವಜನಿಕ ಹಾನಿಯನ್ನು ತಪ್ಪಿಸಿದಂತಾಗುತ್ತದೆ (ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾದ ಕಾರಣ) ಎಂದು ಪ್ರಕರಣದಲ್ಲಿ ಖುದ್ದು ಹಾಜರಿದ್ದ ಅರ್ಜಿದಾರರನ್ನು ಮುಖ್ಯ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಮತ್ತು ನ್ಯಾಯಮೂರ್ತಿ ಸುಸ್ಮಿತಾ ಫುಕನ್ ಖೌಂಡ್ ಅವರಿದ್ದ ಪೀಠ ತರಾಟೆಗೆ ತೆಗೆದುಕೊಂಡಿತು.

ಈ ಬಗೆಯ ಪ್ರತ್ಯೇಕ ಪ್ರಾರ್ಥನಾ ಕೊಠಡಿ ಸ್ಥಾಪಿಸದೇ ಇದ್ದರೆ ಅದರಿಂದ ಯಾವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಸಹ ಇದೇ ವೇಳೆ ನ್ಯಾಯಮೂರ್ತಿಗಳು ಅರ್ಜಿದಾರರನ್ನು ಪ್ರಶ್ನಿಸಿದರು.

"ಈ ನಿಟ್ಟಿನಲ್ಲಿ ಯಾವ ಮೂಲಭೂತ ಹಕ್ಕು ಇದೆ? ನಮ್ಮದು ಜಾತ್ಯತೀತ ದೇಶ, ನಿರ್ದಿಷ್ಟ ಸಮುದಾಯಕ್ಕೆ ಪ್ರಾರ್ಥನಾ ಕೊಠಡಿ ಏಕೆ ಬೇಕು? ಪ್ರಾರ್ಥನಾ ಕೊಠಡಿ ನಿರ್ಮಿಸುವುದನ್ನು ತಡೆದರೆ ಅದರಿಂದ ಉಂಟಾಗುವ ಸಾರ್ವಜನಿಕ ಹಾನಿ ಏನು?... ನಾವು ಒಂದು ಸಮುದಾಯವನ್ನು ಉದ್ದೇಶಿಸಿ ಹೇಳುತ್ತಿಲ್ಲ. ಅದಕ್ಕೆಂದೇ (ಹೊರಗೆ) ಗೊತ್ತುಪಡಿಸಲಾದ ಜಾಗಗಳಿವೆ. ಇಚ್ಛೆ ಇದ್ದವರು ಅಲ್ಲಿಗೆ ಹೋಗಿ ಪ್ರಾರ್ಥನೆ ಸಲ್ಲಿಸಬಹುದು” ಎಂದು ಮುಖ್ಯ ನ್ಯಾಯಮೂರ್ತಿ ಮೌಖಿಕವಾಗಿ ತಿಳಿಸಿದರು.

ಮುಸ್ಲಿಮರು ಪ್ರಾರ್ಥನೆ ಮಾಡುವ ವೇಳೆಯಲ್ಲಿಯೇ ಕೆಲ ವಿಮಾನಗಳ ಹಾರಾಟ ಸಮಯ ನಿಗದಿಯಾಗಿರುತ್ತದೆ ಎಂದು ಅರ್ಜಿದಾರರು ವಾದಿಸಿದರು. ಆಗ ಮುಖ್ಯ ನ್ಯಾಯಮೂರ್ತಿಗಳು, “ಹಾಗಾದರೆ ನಿಮಗೆ ಸೂಕ್ತವಿರುವ ಸಮಯದಲ್ಲಿ ಪ್ರಯಾಣಿಸುವ ವಿಮಾನವನ್ನು ಆರಿಸಿಕೊಳ್ಳಿ. ವಿಮಾನ ನಿಲ್ದಾಣಗಳು ಅದಕ್ಕೆ ಅವಕಾಶ ನೀಡುತ್ತವೆ. ಅದು ನಿಮ್ಮ ಆಯ್ಕೆಯಾಗಿದ್ದು, ನೀವು ನಿಮ್ಮ ಪ್ರಾರ್ಥನೆಯನ್ನು ಪೂರ್ಣಗೊಳಿಸಬಹುದು" ಎಂದರು. ಮುಂದುವರೆದು, ಅರ್ಜಿದಾರರ ಕೋರಿಕೆಯ ಬಗ್ಗೆ ಪ್ರತಿಕ್ರಿಯಿಸುತ್ತಾ, "ಕ್ಷಮಿಸಿ ನಾವು ತೃಪ್ತರಾಗಿಲ್ಲ. ನಿರ್ದಿಷ್ಟ ಸಮುದಾಯಕ್ಕೆ ಮಾತ್ರವೇ ಹೇಗೆ ಪರಿಹಾರ ಕೋರಲು ಸಾಧ್ಯ?"ಎಂದು ಪ್ರಶ್ನಿಸಿದರು.

ಆಗಲೂ ವಾದ ಮುಂದುವರೆಸಿದ ಅರ್ಜಿದಾರರು, ದೆಹಲಿ, ತಿರುವನಂತಪುರ ಮತ್ತು ಅಗರ್ತಲಾ ವಿಮಾನ ನಿಲ್ದಾಣಗಳಲ್ಲಿ ಪ್ರಾರ್ಥನಾ ಕೊಠಡಿ ಇರುವಾಗ ಗುವಾಹಟಿ ವಿಮಾನ ನಿಲ್ದಾಣದಲ್ಲಿ ಅದು ಏಕೆ ಇಲ್ಲ ಎಂದು ಪ್ರಶ್ನಿಸಿದರು.

ಅದಕ್ಕೆ ನ್ಯಾಯಮೂರ್ತಿಗಳು "ಹಾಗೆಂದ ಮಾತ್ರಕ್ಕೆ ಅದು ಮೂಲಭೂತ ಹಕ್ಕಾಗುವುದೇ? ಮತ್ತು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುವುದೇ? ಸಾರ್ವಜನಿಕ ಕಟ್ಟಡಗಳಲ್ಲಿ ಒಂದು ಸಮುದಾಯಕ್ಕೆ ಪ್ರಾರ್ಥನಾ ಕೋಣೆಯನ್ನು ನಿರ್ಮಿಸಬೇಕು ಎಂದು ಹಕ್ಕುಸಾಧನೆ ಕೋರಿ ರಿಟ್‌ ಸಲ್ಲಿಸಲು ಎಲ್ಲಿ ಹಕ್ಕಿದೆ? ವಿಮಾನ ನಿಲ್ದಾಣಕ್ಕೆ ಅನ್ವಯಿಸಿ ಮಾತ್ರವೇ ಏಕೆ ಈ ಕೋರಿಕೆ? ಇತರೆ ಸಾರ್ವಜನಿಕ ಕಟ್ಟಡಗಳಲ್ಲಿ ಏಕಿಲ್ಲ? ನಿಮಗೆ ಪ್ರಾರ್ಥನೆಗೆ ಅದಕ್ಕೆಂದೇ ಇರುವ ಸ್ಥಳಗಳಿವೆ, ಅಲ್ಲಿ ಹೋಗಿ ಪ್ರಾರ್ಥಿಸಿ," ಎಂದರು.

ಆದರೆ ಅರ್ಜಿದಾರರು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ನಿಯಮಗಳು ವಾಣಿಜ್ಯ ಚಟುವಟಿಕೆಗಳಿಗೆ ಜಾಗ ಕಲ್ಪಿಸಿವೆ ಪ್ರಾರ್ಥನಾ ಕೋಣೆಗಳಿಗೆ ಇಲ್ಲ ಎಂದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು “ಅದು ವಾಣಿಜ್ಯ ಚಟುವಟಿಕೆಯಾಗಿರುವುದರಿಂದ ಅದಕ್ಕೆ ಕಲ್ಪಿಸಲಾಗಿದೆ. ಪ್ರಾರ್ಥನೆ ಸಲ್ಲಿಸುವುದು ವಾಣಿಜ್ಯ ಚಟುವಟಿಕೆ ಅಲ್ಲ, ಅದು ಧಾರ್ಮಿಕ ಭಾವನೆ" ಎಂದು ಹೇಳಿದರು.

ಧೂಮಪಾನಕ್ಕೆ ಪ್ರತ್ಯೇಕ ಕೊಠಡಿಗಳು ಇವೆ. ಆದರೆ ಪ್ರಾರ್ಥನೆಗಾಗಿ ಪ್ರತ್ಯೇಕ ಕೊಠಡಿ ಇಲ್ಲ ಎಂದು ಅರ್ಜಿದಾರರು ವಾದಿಸಿದಾಗ ನ್ಯಾಯಾಲಯ “ಧೂಮಪಾನ ಮಾಡುವ ವ್ಯಕ್ತಿಗಳಿಂದಾಗಿ ಇತರರ ಆರೋಗ್ಯಕ್ಕೆ ಹಾನಿಯಾಗಬಾರದು ಎನ್ನುವ ಉದ್ದೇಶದಿಂದ, ಸಾರ್ವಜನಿಕ ಹಾನಿ ತಡೆಯಲೆಂದು ಅದನ್ನು ನಿರ್ಮಿಸಲಾಗಿದೆ ಎಂದಿತು.

ಕಡೆಗೆ ಈ ಸಂಬಂಧ ನೋಟಿಸ್‌ ನೀಡಲು ಪೀಠವು ನಿರಾಕರಿಸಿತು. ಅರ್ಜಿದಾರರು ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾಗಿ ಸಿದ್ಧತೆ ನಡೆಸಿಲ್ಲ ಎಂದು ಮೌಖಿಕವಾಗಿ ತಿಳಿಸಿದ ಪೀಠ ದಾಖಲೆ, ತೀರ್ಪುಗಳು ಮತ್ತು ಕಾನೂನು ನಿಬಂಧನೆಗಳಿದ್ದರೆ ಅವುಗಳನ್ನು ಪ್ರಸ್ತಾಪಿಸುವುದಕ್ಕಾಗಿ ಅವರಿಗೆ ಎರಡು ವಾರಗಳ ಕಾಲಾವಕಾಶ ನೀಡಿತು.