Manan Kumar Mishra 
ಸುದ್ದಿಗಳು

ಭಾರತಕ್ಕೆ ನೆರೆ ದೇಶಗಳಿಂದ ಬೆದರಿಕೆ; ಬಾಂಗ್ಲಾ ಬಿಕ್ಕಟ್ಟಿನಿಂದ ನಾವು ಪಾಠ ಕಲಿಯಬೇಕಿದೆ: ಬಿಸಿಐ ಅಧ್ಯಕ್ಷ ಮನನ್ ಮಿಶ್ರಾ

Bar & Bench

ಭಾರತ ನೆರೆಯ ರಾಷ್ಟ್ರಗಳಿಂದ ಬೆದರಿಕೆ ಎದುರಿಸುತ್ತಿದ್ದು ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಸರ್ಕಾರದ ಪದಚ್ಯುತಿಗೆ ಕಾರಣವಾದ ಘಟನೆಗಳ ಬಗ್ಗೆ ನಾವು ಪಾಠ ಕಲಿಯಬೇಕಿದ್ದು ಎಚ್ಚರಿಕೆಯಿಂದ ಇರಬೇಕಿದೆ ಎಂಬುದಾಗಿ ಭಾರತೀಯ ವಕೀಲರ ಸಂಘದ ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ ತಿಳಿಸಿದರು.

ದೆಹಲಿಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ದೆಹಲಿ ಭವನ ವಲಯ ಮಟ್ಟದ ನೂತನ ವಕೀಲರ ಪರಿಷತ್‌ ಉದ್ಘಾಟನಾ ಸಮಾರಂಭದಲ್ಲಿ ಮಿಶ್ರಾ ಮಾತನಾಡಿದರು.

ಬಾಂಗ್ಲಾದೇಶದ ಜನ ತಮ್ಮ ಸ್ವಾತಂತ್ರ್ಯವನ್ನು ಗೌರವಿಸಲಿಲ್ಲ .  ಎಲ್ಲಾ ಧರ್ಮದ ಜನರು ಈಗ ಅಲ್ಲಿ ಬೆದರಿಕೆ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಬಾಂಗ್ಲಾದೇಶದಲ್ಲಿ ಜನರಿಗೆ ದೊರೆತಿದ್ದ ಸ್ವಾತಂತ್ರ್ಯವನ್ನು ಅವರು ಗೌರವಿಸಲಿಲ್ಲ. ಅಲ್ಲಿ ಹಿಂದೂಗಳು ಮಾತ್ರವಲ್ಲದೆ ಬೇರೆಯವರೂ ಬೆದರಿಕೆ ಎದುರಿಸುತ್ತಿದ್ದಾರೆ. ಅವರಿಗೆ ಸ್ವಾತಂತ್ರ್ಯದ ಮಹತ್ವ ಅರ್ಥವಾಗಲಿಲ್ಲ ಎಂದರು.

ವಿದೇಶಿ ಶಕ್ತಿಗಳು ನಮ್ಮ ದೇಶಕ್ಕೆ ಹೊರಗಿನಿಂದ ಮತ್ತು ಒಳಗಿನಿಂದ ಅಪಾಯ ಉಂಟು ಮಾಡುತ್ತಾರೆ.  ಭಾರತ ಎದುರಿಸುತ್ತಿರುವ ಬೆದರಿಕೆಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲು ವಕೀಲರ ಸಮುದಾಯ ಶ್ರಮಿಸಬೇಕು ಎಂದು ಅವರು ಹೇಳಿದರು.

ರಾಜ್ಯಸಭೆಗೆ ನಡೆಯಲಿರುವ ಉಪಚುನಾವಣೆಗೆ ಅಭ್ಯರ್ಥಿಯಾಗಿ ಬಿಹಾರದಿಂದ  ಮಿಶ್ರಾ ಅವರನ್ನು ಬಿಜೆಪಿ ಈಚೆಗೆ ಕಣಕ್ಕಿಳಿಸಿದೆ.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಾತನಾಡಿ, ವಕೀಲರ ವಿಮೆ ವಿಚಾರದಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, ವಕೀಲರ ಸಂರಕ್ಷಣಾ ಕಾಯ್ದೆ ಕುರಿತು ಮಿಶ್ರಾ ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದರು.

ದೆಹಲಿ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಅವರು ʼವಕೀಲ ವೃತ್ತಿಯಲ್ಲಿ ನೈತಿಕ ಹೊಂದಾಣಿಕೆಗಳು ಸಾಮಾನ್ಯವಾಗಿದ್ದು ವೃತ್ತಿಪರ ಮಾನದಂಡಗಳು ಮೊದಲಿನಂತೆ ಇಲ್ಲ ಎಂದರು.