Justice BR Gavai
Justice BR Gavai 
ಸುದ್ದಿಗಳು

ಸಿಜೆಐ ಚಂದ್ರಚೂಡ್ ಅವರ ಕ್ರಿಯಾಶೀಲ ನಾಯಕತ್ವದಲ್ಲಿ ಭಾರತೀಯ ನ್ಯಾಯಾಂಗ ಗಮನಾರ್ಹ ಬದಲಾವಣೆ ಕಾಣಲಿದೆ: ನ್ಯಾ. ಗವಾಯಿ

Bar & Bench

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಾ. ಡಿ ವೈ ಚಂದ್ರಚೂಡ್ ಅವರ ಕ್ರಿಯಾಶೀಲ ಮುಂದಾಳತ್ವದಲ್ಲಿ ಭಾರತೀಯ ನ್ಯಾಯಾಂಗ ಗಮನಾರ್ಹ ಬದಲಾವಣೆ ಕಾಣಲಿದ್ದು ಜನರು ಕನಿಷ್ಠ ದರದಲ್ಲಿ ತ್ವರಿತ ನ್ಯಾಯ ಪಡೆಯಲಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಭೂಷಣ್ ಆರ್‌  ಗವಾಯಿ ಅವರು ಇತ್ತೀಚೆಗೆ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಿದ ನ್ಯಾ ಚಂದ್ರಚೂಡ್‌ ಅವರಿಗೆ  ಬಾಂಬೆ ಹೈಕೋರ್ಟ್‌ ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ನ್ಯಾ. ಗವಾಯಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಅಭಯ್ ಎಸ್‌ ಓಕಾ ಮತ್ತು ದೀಪಂಕರ್ ದತ್ತಾ ಕೂಡ ಭಾಗವಹಿಸಿದ್ದರು.

ಸಾಮಾಜಿಕ ಒಳಗೊಳ್ಳುವಿಕೆಗೆ ಸಿಜೆಐ ಚಂದ್ರಚೂಡ್ ಅವರು ಹೆಸರುವಾಸಿಯಾಗಿದ್ದಾರೆ ಸಮಾಜದ ಎಲ್ಲಾ ವರ್ಗಗಳಿಗೆ, ಅದರಲ್ಲಿಯೂ ಮಹಿಳೆಯರು, ತಳ ಸಮುದಾಯಗಳಿಗೆ ಪ್ರಾತಿನಿಧ್ಯ ಒದಗಿಸುವುದರ ಎಡೆಗೆ ಅವರು ಒತ್ತು ನೀಡುತ್ತಾರೆ ಎಂದು ಶ್ಲಾಘಿಸಿದರು.

“ನಮ್ಮ ಸಂವಿಧಾನವು ರಾಜಕೀಯ ಮತ್ತು ಸಾಮಾಜಿಕ ನ್ಯಾಯಗಳೆರಡನ್ನೂ ನೀಡಿದೆ. ಅದೇ ರೀತಿ, ತ್ವರಿತ ನ್ಯಾಯದ ಹಕ್ಕನ್ನೂ ಒದಗಿಸಿದೆ. ಹೀಗಾಗಿ, ಜನರಿಗೆ ಕನಿಷ್ಠ ದರದಲ್ಲಿ ತ್ವರಿತ ನ್ಯಾಯ ದೊರಕಿಸಿಕೊಡಲು ಸಿಜೆಐ ಚಂದ್ರಚೂಡ್ ಅವರ ಕ್ರಿಯಾತ್ಮಕ ನಾಯಕತ್ವದಲ್ಲಿ, ಸುಪ್ರೀಂ ಕೋರ್ಟ್‌ನಿಂದ ಹಿಡಿದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳವರೆಗಿನ ನ್ಯಾಯಿಕ ಸಮುದಾಯ ಶ್ರಮಿಸಲಿದೆ. ಅವರ ಅವಧಿಯಲ್ಲಿ ಭಾರತೀಯ ನ್ಯಾಯಾಂಗದಲ್ಲಿ ಗಮನಾರ್ಹ ಬದಲಾವಣೆ ಉಂಟಾಗುವುದನ್ನು ನಾವೆಲ್ಲರೂ ಕಾಣಲಿದ್ದೇವೆ” ಎಂದರು.

ಅಲಾಹಾಬಾದ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ನ್ಯಾ. ಚಂದ್ರಚೂಡ್‌ ಮತ್ತವರ ಪತ್ನಿ ಕಲ್ಪನಾ ದಾಸ್‌ ಅವರು ಇಬ್ಬರು ವಿಕಲಚೇತನ  ಮಕ್ಕಳನ್ನು ದತ್ತುಪಡೆದಿದ್ದ ಅಂಶವನ್ನು ನ್ಯಾ. ಗವಾಯಿ ಅವರು ಇದೇ ವೇಳೆ ಪ್ರಸ್ತಾಪಿಸಿದರು.

“ಆ ಮಕ್ಕಳನ್ನು ಸಹಾನುಭೂತಿಯಿಂದ ನೋಡಿಕೊಳ್ಳುವುದನ್ನು ನಾನು ಖುದ್ದು ನೋಡಿದ್ದೇನೆ. ನಾವು ನಮ್ಮ ಮಕ್ಕಳನ್ನೇ ಅಷ್ಟು ಚೆನ್ನಾಗಿ ನೋಡಿಕೊಳ್ಳುವುದು ಕಷ್ಟವಾಗಿರುವಾಗ ಇಂತಹದ್ದನ್ನು ನೋಡುವುದು ಅಪರೂಪ” ಎಂದರು.

ಕಳೆದ ಬೇಸಿಗೆಯಲ್ಲಿ ಕೋವಿಡ್‌ ಉತ್ತುಂಗದಲ್ಲಿದ್ದಾಗ ಆ ಇಬ್ಬರು ಮಕ್ಕಳಲ್ಲಿ ಒಬ್ಬರು ಅನಾರೋಗ್ಯಕ್ಕೆ ತುತ್ತಾಗಿದ್ದ ವಿಚಾರವನ್ನು ಹೇಳಿದ ನ್ಯಾ. ಗವಾಯಿ ಅವರು “ಮಗುವನ್ನು ಚಂಡೀಗಡಕ್ಕೆ ಕರೆದೊಯ್ದು ಸುಮಾರು ಒಂದು ತಿಂಗಳ ಕಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಮಗು ಚೇತರಿಸಿಕೊಂಡು ಮನೆಗೆ ಬರುವವರೆಗೆ ಕಲ್ಪನಾ ಅವರು ಒಂದು ತಿಂಗಳ ಕಾಲ ಅಲ್ಲಿಯೇ ಇದ್ದರು. ಇಂತಹ ಮಾನವೀಯ ಮತ್ತು ಸಹಾನುಭೂತಿಯ ನಡೆ ಅವರ ತೀರ್ಪುಗಳಲ್ಲೂ ಪ್ರತಿಫಲಿಸಿದೆ” ಎಂದು ಅವರು ಹೇಳಿದರು.

ಮುಂದುವರೆದು  “ಅವರು ಚೌಕಟ್ಟಿನಾಚೆಗೆ ಚಿಂತಿಸಬಲ್ಲವರು. ಶ್ರಮಜೀವಿ ಹಾಗೂ ನ್ಯಾಯದಾನಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಗೌಪ್ಯತೆಯ ಹಕ್ಕು, ಮಹಿಳಾ ಸಬಲೀಕರಣ, ಸೇನೆಯಲ್ಲಿ ಮಹಿಳೆಯರಿಗೆ ಹಕ್ಕು ನೀಡುವ ಬಗೆಗಿನ ಅವರ ಕೊಡುಗೆ ಎಲ್ಲರಿಗೂ ತಿಳಿದಿರುವಂಥದ್ದು. ಈಸಂದರ್ಭದಲ್ಲಿ, ಹೆಚ್ಚು ಜನರಿಗೆ ಗೊತ್ತಿರದ ಒಂದು ಅಂಶವನ್ನು ಇಲ್ಲಿ ಹೇಳಬೇಕು. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತಿದೆ. ಅಂತೆಯೇ ಚಂದ್ರಚೂಡ್‌ ಅವರ ಹಿಂದೆ ಅವರ ಪತ್ನಿ ಕಲ್ಪನಾ ಸದಾ ಇದ್ದಾರೆ” ಎಂದರು.