Indigo and Mahindra’s BE 6E  
ಸುದ್ದಿಗಳು

ವಿಫಲವಾದ ಮಧ್ಯಸ್ಥಿಕೆ: ದೆಹಲಿ ಹೈಕೋರ್ಟ್‌ನಲ್ಲಿ ವಾಣಿಜ್ಯ ಚಿಹ್ನೆ ಸಮರ ಮುಂದುವರೆಸಲಿರುವ ಇಂಡಿಗೋ ಮತ್ತು ಮಹೀಂದ್ರಾ

ಮಹೀಂದ್ರಾ ಕಂಪನಿಯ "6e" ಚಿಹ್ನೆ ಬಳಕೆಯು ಇಂಡಿಗೋ ಕಂಪನಿಯ ವಾಣಿಜ್ಯ ಚಿಹ್ನೆ "6E" ಅನ್ನು ಕಾನೂನುಬಾಹಿರವಾಗಿ ದುರ್ಬಳಕೆ ಮಾಡಿಕೊಳ್ಳುತ್ತದೆ ಎಂದು ಇಂಡಿಗೊ ದೂರಿತ್ತು.

Bar & Bench

ಇಂಡಿಗೋ ಏರ್‌ಲೈನ್ಸ್ ಒಡೆತನ ಹೊಂದಿರುವ ಇಂಟರ್‌ಗ್ಲೋಬ್‌ ಏವಿಯೇಷನ್ ಲಿಮಿಟೆಡ್ ಮತ್ತು ಮಹೀಂದ್ರಾ ಎಲೆಕ್ಟ್ರಿಕ್ ಆಟೋಮೊಬೈಲ್ ಲಿಮಿಟೆಡ್ ನಡುವೆ 6E ಮತ್ತು 6e ವಾಣಿಜ್ಯ ಚಿಹ್ನೆಗೆ ಸಂಬಂಧಿಸಿದ ವ್ಯಾಜ್ಯ ಕುರಿತಂತೆ ನಡೆದಿದ್ದ ಮಧ್ಯಸ್ಥಿಕೆ ವಿಫಲವಾಗಿದೆ ಎಂದು ಅಕ್ಟೋಬರ್ 31ರಂದು ದೆಹಲಿ ಹೈಕೋರ್ಟ್‌ಗೆ ತಿಳಿಸಲಾಗಿದೆ [ಇಂಟರ್‌ಗ್ಲೋಬ್‌ ಏವಿಯೇಷನ್ ಲಿಮಿಟೆಡ್ ಮತ್ತು ಮಹೀಂದ್ರಾ ಎಲೆಕ್ಟ್ರಿಕ್ ಆಟೋಮೊಬೈಲ್ ಲಿಮಿಟೆಡ್ ನಡುವಣ ಪ್ರಕರಣ].

ವ್ಯಾಜ್ಯವನ್ನು ಮಧ್ಯಸ್ಥಿಕೆ ಮೂಲಕ ಪರಿಹರಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ ಹೈಕೋರ್ಟ್‌ನ ನ್ಯಾಯಾಂಗ ವಿಭಾಗದ ಜಂಟಿ ರಿಜಿಸ್ಟ್ರಾರ್‌ ಸುಧೀರ್‌ ಕುಮಾರ್‌ ಸಿರೋಹಿ ಅವರು ಸಂಬಂಧಪಟ್ಟ ದಾಖಲೆಗಳ ವಿವರಗಳನ್ನು ಸಲ್ಲಿಸುವಂತೆ ಕಕ್ಷಿದಾರರಿಗೆ ನಿರ್ದೇಶಿಸಿದರು. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 3, 2026ರಂದು ನಡೆಯಲಿದೆ.

ತಾನು "6E ವಾಣಿಜ್ಯ ಚಿಹ್ನೆಯನ್ನು ಹಲವು ವರ್ಷಗಳಿಂದ ಬಳಸುತ್ತಿದ್ದೇನೆ.  6E ಪ್ರೈಮ್‌, 6E ಫ್ಲೆಕ್ಸ್‌, 6E ರಿವಾರ್ಡ್ಸ್‌  ಹೀಗೆ ಹಲವು ಕಡೆಗಳಲ್ಲಿ ಈ ಚಿಹ್ನೆಯ ಬಳಕೆ ಮಾಡುತ್ತಿದ್ದೇನೆ. ಆದರೆ ಮಹೀಂದ್ರ ಎಲೆಕ್ಟ್ರಿಕ್ ತನ್ನ ಹೊಸ ಎಲೆಕ್ಟ್ರಿಕ್ ಕಾರಿಗೆ ʼBE 6eʼ ಎಂಬ ಹೆಸರಿಡಲು ಮುಂದಾಗಿದೆ. ತನ್ನ ವಾಣಿಜ್ಯ ಚಿಹ್ನೆ 6E ಜನಪ್ರಿಯತೆ ಗಳಿಸಿದ್ದು ಇದೀಗ ಮಹೀಂದ್ರ ಅದನ್ನು ಬಳಸಿದರೆ ಬ್ರ್ಯಾಂಡ್‌ ಗೊಂದಲ ಇಲ್ಲವೇ ಹಾನಿ ಉಂಟಾಗಬಹುದು. ಜನರಿಗೆ “6E” ನೋಡುತ್ತಲೇ ಇಂಡಿಗೋ ನೆನಪಾಗುತ್ತದೆ, ಆದ್ದರಿಂದ ಕಾರಿಗೂ ಅದೇ ವಾಣಿಜ್ಯ ಚಿಹ್ನೆ ಬಳಸಿದರೆ ಗ್ರಾಹಕರು ತಪ್ಪು ನಂಟು ಕಲ್ಪಿಸಿಕೊಳ್ಳಬಹುದು ಎಂದು ಇಂಡಿಗೋ ದೂರಿತ್ತು.

ಆದರೆ ತನ್ನ ʼBE 6eʼ ಹೆಸರಿಗೂ ಇಂಡಿಗೋ ಬಳಸಿದ 6e ವಾಣಿಜ್ಯ ಚಿಹ್ನೆಗೂ ಸಂಬಂಧ ಇಲ್ಲ. ತಾನು ವರ್ಗ 12 ವಾಹನ ವಿಭಾಗದಡಿ ವಾಣಿಜ್ಯ ಚಿಹ್ನೆ ಕೋರಿ ಅರ್ಜಿ ಸಲ್ಲಿಸಿದ್ದೆವು. ಪ್ರಕರಣ ನಡೆಯುತ್ತಿದ್ದ ಕಾರಣ BE 6e ಎಂದು ಬದಲಿಸಿದೆವು ಎಂದಿರುವ ಮಹೀಂದ್ರಾ ವಿಚಾರಣೆ ಪ್ರಕ್ರಿಯೆ ಮುಗಿಯುವವರೆಗೆ ʼBE 6eʼ ವಾಣಿಜ್ಯ ಚಿಹ್ನೆ ಬಳಸುವುದಿಲ್ಲ ಎಂದಿತ್ತು.

ಮಧ್ಯಸ್ಥಿಕೆ ವಿಫಲವಾದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಪ್ರಕರಣದ ವಿಚಾರಣೆ ಮುಂದುವರೆಸಲಿದೆ.  

ಮಹೀಂದ್ರ ತನ್ನ ಎಲೆಕ್ಟ್ರಿಕ್ ಕಾರಿಗೆ ‘6e’ ಎಂಬ ಚಿಹ್ನೆ ನೋಂದಾಯಿಸಿಕೊಳ್ಳುವುದಕ್ಕಾಗಿ ವಾಣಿಜ್ಯ ಚಿಹ್ನೆ ರೆಜಿಸ್ಟ್ರಿಯಲ್ಲಿ ಸಲ್ಲಿಸಿದ್ದ ಅರ್ಜಿಗೆ ಇಂಡಿಗೋ ವಿರೋಧ ವ್ಯಕ್ತಪಡಿಸಿತ್ತು. ಆ ಪ್ರಕರಣ ರಿಜಿಸ್ಟ್ರಿಯಲ್ಲಿ ಇನ್ನೂ ಬಾಕಿ ಇದೆ.