Pahalgam 
ಸುದ್ದಿಗಳು

ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನಕ್ಕೆ ಗಡಿಪಾರಾದ ಮಹಿಳೆ ಮರಳಿ ಕರೆತರುವಂತೆ ಕೇಂದ್ರಕ್ಕೆ ಕಾಶ್ಮೀರ ಹೈಕೋರ್ಟ್ ಆದೇಶ

ಕಳೆದ 38 ವರ್ಷಗಳಿಂದ ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಜಮ್ಮುವಿನಲ್ಲಿ ವಾಸಿಸುತ್ತಿದ್ದ ಮಹಿಳೆ ಗಡಿಪಾರು ಆದೇಶದ ಪರಿಣಾಮ ಲಾಹೋರ್‌ನ ಹೋಟೆಲ್‌ನಲ್ಲಿ ಉಳಿಯುವಂತಾಗಿದೆ.

Bar & Bench

ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ದೇಶ ತೊರೆಯುವಂತೆ ಪಾಕಿಸ್ತಾನಿ ಪ್ರಜೆಗಳಿಗೆ ಭಾರತ ಸರ್ಕಾರ ಆದೇಶಿಸಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಗಿದ್ದ ಮಹಿಳೆಯನ್ನು ಮರಳಿ ಕರೆತರುವಂತೆ ಕೇಂದ್ರಕ್ಕೆ ಜಮ್ಮು ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ ಈಚೆಗೆ ಆದೇಶಿಸಿದೆ [ರಕ್ಷಾಂದ ರಶೀದ್‌ ಮತ್ತು ಭಾರತ ಒಕ್ಕೂಟ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .

ಕಳೆದ ಏಪ್ರಿಲ್‌ನಲ್ಲಿ ಪಹಲ್ಗಾಮ್‌ಗೆ ಭೇಟಿ ನೀಡಿದ್ದ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಪರಿಣಾಮ 26 ಮಂದಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆ ಸ್ಥಗಿತಗೊಳಿಸಿ ಅವರು ಏಪ್ರಿಲ್ 27ರೊಳಗೆ ಭಾರತ ತೊರೆಯುವಂತೆ ಆದೇಶಿಸಿತ್ತು. ಗಡುವು ಮುಗಿದ ಹಿನ್ನೆಲೆಯಲ್ಲಿ ಹಲವು ಪಾಕಿಸ್ತಾನಿ ಪ್ರಜೆಗಳನ್ನು ಅಧಿಕಾರಿಗಳು ಗಡಿಪಾರು ಮಾಡಿದ್ದರು.   

ಹಾಗೆ ಗಡಿಪಾರಾದವರಲ್ಲಿ ರಕ್ಷಂದಾ ರಶೀದ್ ಕೂಡ ಒಬ್ಬರು. ಮಾಧ್ಯಮ ವರದಿಗಳ ಪ್ರಕಾರ ಕಳೆದ 38 ವರ್ಷಗಳಿಂದ ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಜಮ್ಮುವಿನಲ್ಲಿ ವಾಸಿಸುತ್ತಿದ್ದ ಮಹಿಳೆ ಗಡಿಪಾರು ಆದೇಶದ ಪರಿಣಾಮ ಲಾಹೋರ್‌ನ ಹೋಟೆಲ್‌ನಲ್ಲಿ ಉಳಿಯುವಂತಾಗಿದೆ.

ಗಡಿಪಾರು ಪ್ರಶ್ನಿಸಿ ಆಕೆ ಏಪ್ರಿಲ್‌ನಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ಅವರ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ದಿನವೇ ಅಂದರೆ ಏಪ್ರಿಲ್ 30ರಂದು ಅವರನ್ನು ಗಡಿಪಾರು ಮಾಡಲಾಗಿತ್ತು.

ತಮ್ಮ ಪತ್ನಿಗೆ ಪಾಕಿಸ್ತಾನದಲ್ಲಿ ಯಾರೂ ಬಂಧುಗಳಿಲ್ಲ. ಅಲ್ಲದೆ ಆಕೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದು ಅವರ ಜೀವಕ್ಕೆ ಸಂಚಕಾರ ಇದೆ ಎಂದು ರಕ್ಷಂದಾ ಅವರ ಪತಿ ನ್ಯಾಯಮೂರ್ತಿ ರಾಹುಲ್ ಭಾರ್ತಿ ಅವರೆದುರು ವಾದಿಸಿದ್ದರು.

ಅರ್ಹತೆಯ ಆಧಾರದಲ್ಲಿ ಪ್ರಕರಣವನ್ನು ಇನ್ನಷ್ಟೇ ಆಲಿಸಬೇಕಿದ್ದು, ಸಾಂವಿಧಾನಿಕ ನ್ಯಾಯಾಲಯವಾಗಿ ತಾನು ಕೆಲವೊಮ್ಮೆ ಮಾನವೀಯ ನೆಲೆಯಲ್ಲಿ ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಹೈಕೋರ್ಟ್‌ ಜೂನ್‌ 6ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ದೀರ್ಘಾವಧಿ ವೀಸಾ ಪಡೆದಿರುವ ರಕ್ಷಂದಾ ಅವರನ್ನು ಗಡಿಪಾರು ಮಾಡುವ ಅಗತ್ಯವಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಆಕೆಯ ಪ್ರಕರಣವನ್ನು ವಿವರವಾಗಿ ಪರಿಶೀಲಿಸದೆ ಮತ್ತು ಆಕೆಯ ಗಡೀಪಾರು ಕುರಿತು ಸರಿಯಾದ ಆದೇಶವಿಲ್ಲದೆ ಭಾರತದಿಂದ ಅವರನ್ನು ಬಲವಂತವಾಗಿ ಹೊರದಬ್ಬಲಾಯಿತು ಎಂದು ಹೇಳಿದ ನ್ಯಾಯಾಲಯ ಆಕೆಯನ್ನು ಪಾಕಿಸ್ತಾನದಿಂದ ಮರಳಿ ಕರೆತರುವಂತೆ ಗೃಹ ಸಚಿವಾಲಯಕ್ಕೆ ಆದೇಶಿಸಿತು.

ಆದೇಶ ಹೊರಡಿಸಿದ 10 ದಿನಗಳಲ್ಲಿ ಆಕೆಯನ್ನು ಮರಳಿ ಕರೆತರಬೇಕು ಹಾಗೂ ಜುಲೈ 1 ರಂದು ಈ ಕುರಿತಾದ ಅನುಪಾಲನಾ ವರದಿ ಸಲ್ಲಿಸಬೇಕೆಂದು ನ್ಯಾಯಾಲಯ ಸೂಚಿಸಿತು.