ಸುದ್ದಿಗಳು

ಮೊಬೈಲ್ ಸಂದೇಶದ ಮೂಲಕ ತ್ರಿವಳಿ ತಲಾಖ್: ಎಫ್ಐಆರ್ ರದ್ದತಿಗೆ ಕಾಶ್ಮೀರ ಹೈಕೋರ್ಟ್ ನಕಾರ

ಮಾತನಾಡುವ, ಬರೆಯುವ ಅಥವಾ ಎಲೆಕ್ಟ್ರಾನಿಕ್ ವಿಧಾನದ ಮೂಲಕ ದಿಢೀರನೆ ಮತ್ತು ಹಿಂಪಡೆಯಲಾಗದ ರೀತಿಯಲ್ಲಿ ನೀಡುವ ತಲಾಖ್ ಅನೂರ್ಜಿತ, ಕಾನೂನುಬಾಹಿರವಾಗಿದ್ದು ಮೂರು ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಬಹುದು ಎಂದು ಹೈಕೋರ್ಟ್ ತಿಳಿಸಿದೆ.

Bar & Bench

ಹೆಂಡತಿಗೆ ಮೊಬೈಲ್‌ನಲ್ಲಿ ಸಂದೇಶ ಕಳುಹಿಸುವ ಮೂಲಕ ದಿಢೀರನೆ ತಲಾಖ್‌ ನೀಡಿದ್ದ ಆರೋಪ ಹೊತ್ತ ವ್ಯಕ್ತಿಯ ವಿರುದ್ಧ ಮುಸ್ಲಿಂ ಮಹಿಳಾ (ವಿವಾಹ ಹಕ್ಕುಗಳ ರಕ್ಷಣೆ) ಕಾಯಿದೆ, 2019ರ ಅಡಿಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜಮ್ಮು ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ ಈಚೆಗೆ ವಜಾಗೊಳಿಸಿದೆ [ಶಬೀರ್‌ ಅಹ್ಮದ್‌ ಮಲಿಕ್‌ ಮತ್ತು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಮಾತನಾಡುವ, ಬರೆಯುವ ಅಥವಾ ಎಲೆಕ್ಟ್ರಾನಿಕ್ ವಿಧಾನದ ಮೂಲಕ ದಿಢೀರನೆ ಮತ್ತು ಬದಲಿಸಲು ಸಾಧ್ಯವಾಗದಂತೆ ನೀಡುವ ತಲಾಖ್-ಎ-ಬಿದ್ದತ್  ಅನೂರ್ಜಿತ, ಕಾನೂನುಬಾಹಿರವಾಗಿದ್ದು ಮೂರು ವರ್ಷಗಳವರೆಗೆ ದಂಡದ ಸಹಿತ ಜೈಲು ಶಿಕ್ಷೆಗೆ ಗುರಿಯಾಗಬಹುದು ಎಂದು ನ್ಯಾಯಮೂರ್ತಿ ಜಾವೇದ್ ಇಕ್ಬಾಲ್ ವಾನಿ ತಮ್ಮ ಆದೇಶದಲ್ಲಿ ಹೇಳಿದ್ದಾರೆ.

ಒದಗಿಸಲಾದ ಸಾಕ್ಷ್ಯಗಳನ್ನು, ವಿಶೇಷವಾಗಿ ಪಠ್ಯ ಸಂದೇಶಗಳನ್ನು ಗಮನಿಸಿದರೆ ಅರ್ಜಿದಾರರು ಹೇಳಿರುವ ತಲಾಖ್ ನಾಮ ಆಧರಿಸುವುದು ಎಫ್ಐಆರ್ ರದ್ದತಿಗೆ ಸಾಲದು ಎಂದು ನ್ಯಾಯಾಲಯ ಹೇಳಿದೆ. ಅಂತೆಯೇ ಎಫ್‌ಐಆರ್‌ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅದು ತಿರಸ್ಕರಿಸಿತು.

ಮುಸ್ಲಿಂ ಮಹಿಳಾ (ವಿವಾಹ ಹಕ್ಕುಗಳ ರಕ್ಷಣೆ) ಕಾಯಿದೆ, 2019ರ ಸೆಕ್ಷನ್ 2(ಸಿ), 3 ಮತ್ತು 4 ಅನ್ನು ನ್ಯಾಯಾಲಯ ಈ ವೇಳೆ ಪ್ರಸ್ತಾಪಿಸಿತು. ತಲಾಖ್-ಎ-ಬಿದ್ದತ್ ಅಥವಾ ಯಾವುದೇ ರೀತಿಯ ಪದಗಳು, ಮಾತನಾಡುವ, ಬರೆಯುವ ಅಥವಾ ಎಲೆಕ್ಟ್ರಾನಿಕ್ ಸಂದೇಶದ ಮೂಲಕ ನೀಡುವ ತತ್ಕ್ಷಣದ ಮತ್ತು ಹಿಂಪಡೆಯಲಾಗದ ವಿಚ್ಛೇದನದ ಯಾವುದೇ ರೂಪವನ್ನು ಕಾಯಿದೆಯ ಸೆಕ್ಷನ್ 3 ಅಮಾನ್ಯ ಮತ್ತು ಕಾನೂನುಬಾಹಿರ ಎಂದು ಘೋಷಿಸುತ್ತದೆ. ಸೆಕ್ಷನ್ 4 ಅಂತಹ ಕೃತ್ಯಕ್ಕೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ಸೇರಿದಂತೆ ಶಿಕ್ಷೆಯನ್ನು ಸೂಚಿಸುತ್ತದೆ.

ತನ್ನ ಅವಲೋಕನಗಳು ಎಫ್ಐಆರ್ ರದ್ದತಿ ಕೋರಿ ಸಲ್ಲಿಸಲಾದ ಅರ್ಜಿಗೆ ಮತ್ರ ಸಂಬಂಧಿಸಿದ್ದು ಅರ್ಜಿದಾರರ ಅಪರಾಧ ಅಥವಾ ಮುಗ್ಧತೆಗೆ ಸಂಬಂಧಿಸಿದಂತೆ ಅದನ್ನು ಅರ್ಥೈಸಬಾರದು ಎಂದು ಪೀಠ ಸ್ಪಷ್ಟಪಡಿಸಿತು.

ತನ್ನ ವಿರುದ್ಧ 2022ರಲ್ಲಿ ದಾಖಲಾಗಿದ್ದ ಎಫ್‌ಐಆರ್‌ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು. ಔಪಚಾರಿಕ ತಲಾಖ್ ನಾಮದ ಮೂಲಕ ತಲಾಖ್-ಎ-ಅಹ್ಸಾನ್ ಜಾರಿಯಾಗಿರುವುದಾಗಿಯೂ ಶರಿಯತ್ ಮತ್ತು ಪವಿತ್ರ ಕುರಾನ್ ಅಡಿಯಲ್ಲಿ ಕಾನೂನುಬದ್ಧವಾಗಿ ತಮ್ಮ ಪತ್ನಿಗೆ ತಲಾಖ್‌ ನೀಡಿರುವುದಾಗಿಯೂ ಅವರು ವಾದಿಸಿದ್ದರು.

ಭಾರತೀಯ ದಂಡ ಸಂಹಿತೆ ಅಥವಾ 2019ರ ಕಾಯಿದೆಯಡಿಯಲ್ಲಿ ತಾನು ಯಾವುದೇ ಅಪರಾಧ ಎಸಗಿಲ್ಲ ಹಾಗೂ ತನ್ನ ವಿರುದ್ಧದದ ಎಫ್‌ಐಆರ್ ಅಸ್ಪಷ್ಟ ಮತ್ತು ಆಧಾರರಹಿತವಾಗಿದೆ ಎಂದು ಅವರು ಹೇಳಿದ್ದರು.

ಆದರೆ ಅರ್ಜಿದಾರ ವಿವಾಹೇತರ ಸಂಬಂಧ ಬೆಳೆಸಿಕೊಂಡಿದ್ದು ದೂರುದಾರೆಗೆ ಪಠ್ಯ ಸಂದೇಶದ ಮೂಲಕ ತ್ರಿವಳಿ ತಲಾಖ್‌ ನೀಡಿದ್ದಾರೆ. ತಲಾಖ್‌ ನೀಡಿದ ಸಂದೇಶಗಳನ್ನು 2019ರ ಕಾಯಿದೆಯ ಅಡಿಯಲ್ಲಿ ಅಪರಾಧದ ಪುರಾವೆಯಾಗಿ ಪರಿಗಣಿಸಬೇಕು ಎಂದು ಕೇಂದ್ರಾಡಳಿತ ಪ್ರದೇಶ ಸರ್ಕಾರ ಸೇರಿದಂತೆ ಪ್ರತಿವಾದಿಗಳು ವಾದಿಸಿದ್ದರು.

[ತೀರ್ಪಿನ ಪ್ರತಿ]

Shabir_Ahmad_Malik_UT_of_JK.pdf
Preview