
ಮೂರು ಬಾರಿ ತಲಾಖ್ ಹೇಳಿ ದಿಢೀರನೆ ವಿಚ್ಛೇದನ ನೀಡುವುದನ್ನು ಅಪರಾಧೀಕರಿಸುವ 2019ರ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯಿದೆಯು ತಲಾಖ್-ಇ-ಬಿದತ್ ಹೆಸರಿನ ದಿಢೀರ್ ಮತ್ತು ಬದಲಿಸಲಾಗದ ವಿಚ್ಛೇದನ ನೀಡುವ ಪದ್ದತಿಗೆ ಮಾತ್ರ ಅನ್ವಯವಾಗುತ್ತದೆಯೇ ವಿನಾ ಇಸ್ಲಾಂನಲ್ಲಿ ತಲಾಖ್-ಇ-ಅಹ್ಸಾನ್ ಎಂದು ಕರೆಯಲಾಗುವ ಸಾಂಪ್ರಾದಯಿಕ ವಿಚ್ಛೇದನಕ್ಕೆ ಅಲ್ಲ ಎಂದು ಬಾಂಬೆ ಹೈಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ [ತನ್ವೀರ್ ಅಹ್ಮದ್ ಮತ್ತಿತರರು ಹಾಗೂ ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಅಂತೆಯೇ ದಿಢೀರ್ ತ್ರಿವಳಿ ತಲಾಖ್ ನಿಷೇಧಿಸುವ ಕಾಯಿದೆಯಡಿ ಮುಸ್ಲಿಂ ವ್ಯಕ್ತಿ ಮತ್ತು ಆತನ ಪೋಷಕರ ವಿರುದ್ಧ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣವನ್ನು ಅದು ರದ್ದುಗೊಳಿಸಿತು.
ತಲಾಖ್-ಇ-ಅಹ್ಸಾನ್ ವಿಧಾನ ಪಾಲಿಸಿ ಆ ವ್ಯಕ್ತಿ ತನ್ನ ಹೆಂಡತಿಗೆ ವಿಚ್ಛೇದನ ನೀಡಿದ್ದರು. ಈ ವಿಧಾನದಡಿ ತಲಾಖ್ ಅನ್ನು ಒಮ್ಮೆ ಉಚ್ಚರಿಸಲಾಗುತ್ತದೆ ಮತ್ತು ವಿಚ್ಛೇದನ ಜಾರಿಗೆ ಬರಲು 90 ದಿನಗಳ ನಿರೀಕ್ಷಣಾ ಅವಧಿ ಇರುತ್ತದೆ. ಇಸ್ಲಾಮಿಕ್ ಕಾನೂನಿನಡಿಯಲ್ಲಿ ವಿಚ್ಛೇದನ ಪಡೆಯುವುದಕ್ಕೆ ಇದು ಈಗಲೂ ಕಾನೂನುಬದ್ಧ ಮಾರ್ಗವಾಗಿದೆ.
ಆದರೂ ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ಆರೋಪಿಸಿ ತನ್ನ ಪತಿ ವಿರುದ್ಧ ಪತ್ನಿ ಎಫ್‌ಐಆರ್ ದಾಖಲಿಸಿದ್ದರು. ಇತ್ತ ಪತಿ ತಾನು ನೀಡಿರುವುದು ತಲಾಖ್-ಇ-ಅಹ್ಸಾನ್ ಎಂದು ಪತಿ ವಾದಿಸಿದ್ದರು. ಇಷ್ಟಾದರೂ ತನಗೆ ನೀಡಿದ ವಿಚ್ಛೇದನವನ್ನು ಮಾರ್ಪಡಿಸಲು ಸಾಧ್ಯವಿಲ್ಲವಾದ್ದರಿಂದ ಇದನ್ನು ಕಾನೂನುಬಾಹಿರವೆಂದು ಪರಿಗಣಿಸಿ ವಿಚಾರಣೆ ನಡೆಸಬೇಕೆಂದು ಪತ್ನಿ ಕೋರಿದ್ದರು.
ಆದರೆ ಪತ್ನಿಯ ವಾದ ಒಪ್ಪದ ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ಸಂಜಯ್ ದೇಶಮುಖ್ ಅವರಿದ್ದ ಪೀಠ ಪ್ರಕರಣದಲ್ಲಿ ನೀಡಲಾದ ವಿಚ್ಛೇದನದ ಸ್ವರೂಪ ನಿಷೇಧಿತ ವರ್ಗದಡಿ ಬರುವುದಿಲ್ಲ. ಸಮಾಲೋಚನೆಗೆ ಅವಕಾಶವಿಲ್ಲದೆ ಕೂಡಲೇ ನೀಡಲಾಗುವ ವಿಚ್ಛೇದನಗಳನ್ನು ನಿಷೇಧಿಸುವುದಷ್ಟೇ ಕಾಯಿದೆಯ ಗುರಿಯಾಗಿದೆ. ಅರ್ಜಿದಾರರು ವಿಚಾರಣೆ ಎದುರಿಸಬೇಕು ಎಂದು ಸೂಚಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ. ಆದ್ದರಿಂದ ವಿಚಾರಣೆ ಮತ್ತು ಎಫ್‌ಐಆರ್ ರದ್ದುಗೊಳಿಸಲಾಗುತ್ತಿದೆ ಎಂದು ಹೇಳಿತು.
ಎಫ್‌ಐಆರ್‌ನಲ್ಲಿ ಕೂಡ, ಪತಿ ತಲಾಖ್-ಇ-ಅಹ್ಸಾನ್ ವಿಧಾನವನ್ನು ಅನುಸರಿಸಿದ್ದು ಔಪಚಾರಿಕವಾಗಿ ನೋಟಿಸ್ ಕಳುಹಿಸಿದ್ದಾರೆ. ಅದು ಸ್ಥಾಪಿತ ಪ್ರಕ್ರಿಯೆಗೆ ಹೊಂದಿಕೆಯಾಗುತ್ತದೆ ಎಂದು ನ್ಯಾಯಾಲಯ ತಿಳಿಸಿತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]