ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್, ಜಮ್ಮು ವಿಭಾಗ 
ಸುದ್ದಿಗಳು

ವ್ಯಭಿಚಾರದ ವಿರುದ್ಧ ಎಫ್‌ಐಆರ್‌: ಮ್ಯಾಜಿಸ್ಟ್ರೇಟ್ ಆದೇಶಕ್ಕೆ ಕಾಶ್ಮೀರ ಹೈಕೋರ್ಟ್ ತಡೆ

ವ್ಯಭಿಚಾರ ಕುರಿತಾದ ಕಾನೂನು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ 2018ರಲ್ಲಿ ಘೋಷಿಸಿತ್ತು.

Bar & Bench

ವ್ಯಭಿಚಾರ ಕಾನೂನು ಅಸಾಂವಿಧಾನಿಕ ಎಂದು 2018ರಲ್ಲಿ ಸುಪ್ರೀಂ ಕೋರ್ಟ್‌ ಘೋಷಿಸಿದ್ದರೂ, ಅದನ್ನು ಅಪರಾಧವೆಂದಿದ್ದ ಎಫ್‌ಐಆರ್‌ ದಾಖಲಿಸಿಕೊಳ್ಳಲು ಅನುಮತಿಸಿದ್ದ ಜಮ್ಮು ನ್ಯಾಯಾಲಯದ ಆದೇಶಕ್ಕೆ ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಇತ್ತೀಚೆಗೆ ತಡೆ ನೀಡಿದೆ.

ಜಮ್ಮುವಿನ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ 2023ರ ಅಕ್ಟೋಬರ್‌ನಲ್ಲಿ ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಲು ಮೇಲ್ನೋಟದ ವಾದ ರೂಪಿಸಲಾಗಿದೆ. ನ್ಯಾಯಮೂರ್ತಿ ವಾಸಿಮ್ ಸಾದಿಕ್ ನರ್ಗಲ್ ಅಭಿಪ್ರಾಯಪಟ್ಟರು.

ಹೀಗಾಗಿ ಆದೇಶಕ್ಕೆ ತಡೆ ನೀಡಿದ ನ್ಯಾಯಾಲಯ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿತಲ್ಲದೆ ಪ್ರತಿವಾದಿಗಳಿಗೆ ನೋಟಿಸ್ ನೀಡಿತು.

ಜಮ್ಮುವಿನ 2ನೇ ಹೆಚ್ಚುವರಿ ಮುನ್ಸಿಫ್ ನ್ಯಾಯಾಲಯ 2023ರ ಅಕ್ಟೋಬರ್ 27ರಂದು ಹೊರಡಿಸಿದ ಆದೇಶ ಪ್ರಶ್ನಿಸಿ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಲಾಗಿತ್ತು.

ಐಪಿಸಿ ಸೆಕ್ಷನ್ 120-ಎ (ಕ್ರಿಮಿನಲ್ ಪಿತೂರಿ), 312 (ಗರ್ಭಪಾತಕ್ಕೆ ಕಾರಣವಾಗುವುದು), 313 (ಮಹಿಳೆಯ ಒಪ್ಪಿಗೆಯಿಲ್ಲದೆ ಗರ್ಭಪಾತ ಮಾಡಿಸುವುದು), 497 (ವ್ಯಭಿಚಾರ), 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಹಾಗೂ 509 (ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಪದ, ಸನ್ನೆ ಪ್ರಯೋಗ ಅಥವಾ ಕೃತ್ಯ ನಡೆಸುವುದು) ಅಡಿಯ ಅಪರಾಧಗಳಿಗಾಗಿ ಎಫ್ಐಆರ್ ದಾಖಲಿಸಲು ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ನಿರ್ದೇಶನ ನೀಡಿದ್ದರು.

ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲಾದ ವ್ಯಕ್ತಿಗಳಲ್ಲಿ ಆರೋಪಿಯ ಸಂಬಂಧಿಕರು ಸೇರಿದ್ದರು. ನಂತರ ಕುಟುಂಬ ಸದಸ್ಯರು (ಅರ್ಜಿದಾರರು) ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅಕ್ಟೋಬರ್ 2023ರ ಆದೇಶ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ದೂರು ಸುಳ್ಳಿನಿಂದ ಕೂಡಿರುವುದಲ್ಲದೆ ಕ್ಷುಲ್ಲಕವಾಗಿದ್ದು ತಮ್ಮ ವಿರುದ್ಧ ಅನಗತ್ಯವಾಗಿ ಕ್ರಿಮಿನಲ್ ವಿಚಾರಣೆ ನಡೆಸಲಾಗಿದೆೆ ಎಂದು ಅವರು ಹೇಳಿದ್ದರು.

ಐಪಿಸಿಯ 497ನೇ ಸೆಕ್ಷನ್‌ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಘೋಷಿಸಿದ್ದರೂ ಅದರಡಿ ಪ್ರಕರಣ ದಾಖಲಿಸಲಾಗಿದೆ ಮ್ಯಾಜಿಸ್ಟ್ರೇಟ್ ಯಾಂತ್ರಿಕ ರೀತಿಯಲ್ಲಿ ಯಾವುದೇ ವಿವೇಚನೆ ಬಳಸದೆ ಈ ಆದೇಶ ಹೊರಡಿಸಿದ್ದಾರೆ. ಇದರಿಂದ ಅರ್ಜಿದಾರರು ಸಾಕಷ್ಟು ಕಿರುಕುಳ ಮತ್ತು ಪೂರ್ವಾಗ್ರಹಕ್ಕೆ ತುತ್ತಾಗುವಂತಾಗಿದೆ ಎಂದು ವಕೀಲರು ವಾದಿಸಿದರು.

ವಾದಗಳನ್ನು ಪರಿಗಣಿಸಿದ ನ್ಯಾಯಾಲಯ, ಮಧ್ಯಂತರ ಪರಿಹಾರ ನೀಡುವುದಕ್ಕಾಗಿ ಅರ್ಜಿದಾರರು ಮೇಲ್ನೋಟದ ವಾದ ರೂಪಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿತು. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 5, 2024ರಂದು ನಡೆಯಲಿದೆ.